ಆಪ್‌ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ಗೆ ಭಾರೀ ಆಘಾತ : ಸೋಲಿಸಿದ ಜೈಂಟ್‌ ಕಿಲ್ಲರ್‌ ವರ್ಮಾ

| N/A | Published : Feb 09 2025, 01:32 AM IST / Updated: Feb 09 2025, 04:40 AM IST

ಸಾರಾಂಶ

ದೆಹಲಿಯಲ್ಲಿ ಮತ್ತೊಮ್ಮೆ ಗೆದ್ದು, ಸಿಎಂ ಆಗುವ ಆಶಯದಲ್ಲಿದ್ದ ಆಪ್‌ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ಗೆ ಭಾರೀ ಆಘಾತವಾಗಿದೆ. ನವದೆಹಲಿ ಕ್ಷೇತ್ರದಲ್ಲಿ ಕೇಜ್ರಿವಾಲ್‌ರನ್ನು ಬಿಜೆಪಿ ಅಭ್ಯರ್ಥಿ ಪರ್ವೇಶ್‌ ವರ್ಮಾ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.  

ನವದೆಹಲಿ: ದೆಹಲಿಯಲ್ಲಿ ಮತ್ತೊಮ್ಮೆ ಗೆದ್ದು, ಸಿಎಂ ಆಗುವ ಆಶಯದಲ್ಲಿದ್ದ ಆಪ್‌ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ಗೆ ಭಾರೀ ಆಘಾತವಾಗಿದೆ. ನವದೆಹಲಿ ಕ್ಷೇತ್ರದಲ್ಲಿ ಕೇಜ್ರಿವಾಲ್‌ರನ್ನು ಬಿಜೆಪಿ ಅಭ್ಯರ್ಥಿ ಪರ್ವೇಶ್‌ ವರ್ಮಾ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ. ಮಾಜಿ ಸಿಎಂಗೆ ಮಾಜಿ ಸಿಎಂ ಪುತ್ರ ಸೋಲುಣಿಸಿದ್ದಾರೆ.

ಪರ್ವೇಶ್ ವರ್ಮಾ ಯಾರು?:

ರಾಜಕಾರಣ ಕುಟುಂಬದಿಂದ ಬಂದಿರುವ ವರ್ವೇಶ್‌, 1996-1998ರ ಅವಧಿಯಲ್ಲಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ಇವರ ಚಿಕ್ಕಪ್ಪ ಕೂಡ ಆಜಾದ್ ಸಿಂಗ್‌ ಕೂಡ ದೆಹಲಿ ಮೇಯರ್ ಆಗಿದ್ದರು.

2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೆಹ್ರೌಲಿ ಕ್ಷೇತ್ರದಿಂದ ಸ್ಪರ್ಧಿಸಿ ಜಯ ಗಳಿಸುವ ಮೂಲಕ ರಾಜಕೀಯ ಪ್ರವೇಶಿಸಿದ ವರ್ವೇಶ್‌, 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಸಂಸದರಾಗಿದ್ದಾಗ, ಇವರು ಸಂಸತ್‌ ಸದಸ್ಯರ ಸಂಬಳ ಮತ್ತು ಭತ್ಯೆಗಳ ಮೇಲಿನ ಜಂಟಿ ಸಮಿತಿಯ ಸದಸ್ಯರಾಗಿದ್ದರು. ಈ ಬಾರಿಯ ಚುನಾವಣೆಗೂ ಮುನ್ನ ಇವರು ಆರಂಭಿಸಿದ್ದ ‘ಕೇಜ್ರಿವಾಲ್‌ರ ತೆಗೆದು ರಾಷ್ಟ್ರ ಉಳಿಸಿ’ ಅಭಿಯಾನ ಇದೀಗ ಫಲ ನೀಡಿದ್ದು, ಕಳೆದೆರಡು ಬಾರಿ ಶೇ.60ಕ್ಕಿಂತಲೂ ಅಧಿಕ ಮತ ಗಳಿಸಿದ್ದ ಎದುರಾಳಿ ಕೇಜ್ರಿವಾಲ್‌ ವಿರುದ್ಧ ವಿಜಯ ಪತಾಕೆ ಹಾರಿಸಿದ್ದಾರೆ.