ರಸ್ತೆ, ಸರ್ಕಾರಿ ಕಚೇರಿ, ಶಾಲೆ ವ್ಯಾಪ್ತಿಯಿಂದ ಬೀದಿನಾಯಿ, ದನ ತೆರವಿಗೆ ಸುಪ್ರೀಂ ಆದೇಶ

| N/A | Published : Nov 08 2025, 01:45 AM IST / Updated: Nov 08 2025, 05:19 AM IST

Stray Dog
ರಸ್ತೆ, ಸರ್ಕಾರಿ ಕಚೇರಿ, ಶಾಲೆ ವ್ಯಾಪ್ತಿಯಿಂದ ಬೀದಿನಾಯಿ, ದನ ತೆರವಿಗೆ ಸುಪ್ರೀಂ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

‘ಶಾಲೆ-ಕಾಲೇಜು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಂತಹ ಸರ್ಕಾರಿ ಸಾಂಸ್ಥಿಕ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳ ಹೆಚ್ಚಳ ಆತಂಕಕಾರಿ’ ಎಂದಿರುವ ಸುಪ್ರೀಂ ಕೋರ್ಟ್‌, ನಾಯಿಗಳನ್ನು ನಿಗದಿತ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

  ನವದೆಹಲಿ :  ‘ಶಾಲೆ-ಕಾಲೇಜು, ಆಸ್ಪತ್ರೆಗಳು, ಬಸ್ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳಂತಹ ಸರ್ಕಾರಿ ಸಾಂಸ್ಥಿಕ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳ ಹೆಚ್ಚಳ ಆತಂಕಕಾರಿ’ ಎಂದಿರುವ ಸುಪ್ರೀಂ ಕೋರ್ಟ್‌, ಇಂಥ ಸ್ಥಳಗಳಲ್ಲಿ ಇರುವ ನಾಯಿಗಳನ್ನು ನಿಗದಿತ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಇದಲ್ಲದೆ, ‘ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಂದ ಬೀದಿ ನಾಯಿ, ಬೀದಿ ಪ್ರಾಣಿಗಳು ಮತ್ತು ದನಗಳನ್ನು ಕೂಡ ನಿಗದಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸೇರಿದಂತೆ ಸಂಬಂಧಿತ ಅಧಿಕಾರಿಗಳಿಗೆ ಕೋರ್ಟ್ ಆದೇಶಿಸಿದೆ.

‘8 ವಾರದಲ್ಲಿ ಪ್ರಾಣಿಗಳ ಸ್ಥಳಾಂತರ ಮಾಡಬೇಕು. ಹಾಗಂತ ಅವು ಮೊದಲು ಇದ್ದ ಸ್ಥಳದಲ್ಲೇ ಬಿಡಬಾರದು. ನಿಗದಿತ ಆಶ್ರಯ ತಾಣಗಳಲ್ಲೇ ಬಿಡಬೇಕು’ ಎಂದು ಅದು ಸ್ಪಷ್ಟಪಡಿಸಿದೆ.

ಬೀದಿ ನಾಯಿಗಳ ಹಾವಳಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ವಿಶೇಷ ಪೀಠವು ಈ ಕುರಿತು ಶುಕ್ರವಾರ ಹಲವಾರು ನಿರ್ದೇಶನಗಳನ್ನು ನೀಡಿದೆ. ಬಳಿಕ ಪ್ರಕರಣದ ಮುಂದಿನ ವಿಚಾರಣೆಯನ್ನು ಮುಂದಿನ ವರ್ಷ ಜನವರಿ 13ಕ್ಕೆ ನಿಗದಿಪಡಿಸಿದೆ.

ಕೋರ್ಟ್ ಹೇಳಿದ್ದೇನು?:

‘ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣಗಳು, ಬಸ್ ನಿಲ್ದಾಣಗಳು ಮತ್ತು ಡಿಪೋಗಳು ಮತ್ತು ರೈಲು ನಿಲ್ದಾಣಗಳಂತಹ ಸಾಂಸ್ಥಿಕ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳು ಆತಂಕಕಾರಿ. ಹೀಗಾಗಿ ಸಾರ್ವಜನಿಕರ ಹಿತದ ದೃಷ್ಟಿಯಿಂದ ಕೆಲವು ನಿರ್ದೇಶನ ನೀಡಲೇಬೇಕಿದೆ’ ಎಂದು ಪೀಠ ಹೇಳಿತು.

‘ಬೀದಿನಾಯಿಗಳ ಕಾಟ ಹೆಚ್ಚಿರುವ ಸರ್ಕಾರಿ ಸ್ಥಳಗಳನ್ನು ಸ್ಥಳೀಯ ಆಡಳಿತದ ಅಧಿಕಾರಿಗಳು 2 ವಾರದಲ್ಲಿ ಗುರುತಿಸಬೇಕು. ಪ್ರತಿಯೊಂದು ಬೀದಿ ನಾಯಿಯನ್ನು ತಕ್ಷಣವೇ ಅಂತಹ ಆವರಣದಿಂದ ತೆಗೆದುಹಾಕಿ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕಾಕರಣದ ನಂತರ ಆಶ್ರಯಕ್ಕೆ ಸ್ಥಳಾಂತರಿಸಬೇಕು. ಹಾಗಂತ ಅದು ಮೊದಲು ಸಂಚರಿಸುತ್ತಿದ್ದ ಸ್ಥಳದಲ್ಲಿ ಬಿಡಬಾರದು. ನಿಗದಿತ ಆಶ್ರಯ ತಾಣಕ್ಕೇ ಸ್ಥಳಾಂತರಿಸಬೇಕು. ಬೀದಿ ನಾಯಿಗಳ ಬಹಿರಂಗ ಆವಾಸಸ್ಥಾನ ಇರದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿತು.

‘ಬೀದಿ ನಾಯಿಗಳ ಪ್ರವೇಶ ತಡೆಗಟ್ಟಲು ಸರ್ಕಾರಿ ಕಚೇರಿ/ಸಂಸ್ಥೆಯ ಆವರಣವು ಸಾಕಷ್ಟು ಬೇಲಿಗಳು, ಕಾಂಪೌಂಡ್‌ಗಳು, ಗೇಟ್‌ಗಳನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸ್ಥಳೀಯ ಆಡಳಿತಗಳು ಇಂಥ ಕಚೇರಿಗಳ ಆವರಣದ ನಿರ್ವಹಣೆ ಮತ್ತು ಸ್ವಚ್ಛತೆಗೆ ನೋಡಲ್ ಅಧಿಕಾರಿಯನ್ನು ನೇಮಿಸಬೇಕು ಮತ್ತು ಬೀದಿನಾಯಿಗಳು ಆವರಣಕ್ಕೆ ಪ್ರವೇಶಿಸುವುದಿಲ್ಲ ಅಥವಾ ವಾಸಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು’ ಎಂದಿತು.

‘ಸ್ಥಳೀಯ ಪುರಸಭೆ/ನಗರಸಭೆ/ಪಾಲಿಕೆ ಅಧಿಕಾರಿಗಳು ಮತ್ತು ಪಂಚಾಯತ್‌ಗಳು ಅಂತಹ ಎಲ್ಲಾ ಆವರಣಗಳಲ್ಲಿ ಕನಿಷ್ಠ 3 ತಿಂಗಳಿಗೊಮ್ಮೆ ನಿಯಮಿತ ತಪಾಸಣೆ ನಡೆಸಬೇಕು ಮತ್ತು ಈ ಸಂಸ್ಥೆಗಳ ಒಳಗೆ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಬೀದಿ ನಾಯಿಗಳ ಆವಾಸಸ್ಥಾನಗಳಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿತು.

‘ದನ ಮುಕ್ತ ಹೆದ್ದಾರಿ’ಗೆ ಸುಪ್ರೀಂ ಸೂಚನೆ:

ಇದೇ ವೇಳೆ ನಗರದ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಬೀದಿ ಪ್ರಾಣಿಗಳ ಹಾವಳಿಯನ್ನು ನಿಭಾಯಿಸಲು ನಿರ್ದೇಶನಗಳನ್ನು ನೀಡಿ, ಆಗಸ್ಟ್‌ನಲ್ಲಿ ರಾಜಸ್ಥಾನ ಹೈಕೋರ್ಟ್ ಹೊರಡಿಸಿದ ಆದೇಶವನ್ನು ಪೀಠವು ಉಲ್ಲೇಖಿಸಿತು.

‘ಬೀದಿ ದನಗಳು ಅಥವಾ ಪ್ರಾಣಿಗಳು ಆಗಾಗ್ಗೆ ಕಂಡುಬರುವ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳನ್ನು ಗುರುತಿಸಬೇಕು. ಈ ಬಗ್ಗೆ ಅಧಿಕಾರಿಗಳು ಜಂಟಿ ಸಂಘಟಿತ ಅಭಿಯಾನವನ್ನು ಕೈಗೊಳ್ಳಬೇಕು ಮತ್ತು ಅವುಗಳನ್ನು ಅಲ್ಲಿಂದ ನಿಗದಿತ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದು ತಾಕೀತು ಮಾಡಿತು.

‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಪ್ರಾಣಿ ಜನನ ನಿಯಂತ್ರಣ ನಿಯಮಗಳು-2023ರ ನಿಬಂಧನೆಗಳಿಗೆ ಅನುಸಾರವಾಗಿ, ದನಗಳು ಮತ್ತು ಇತರ ಬೀದಿ ಪ್ರಾಣಿಗಳನ್ನು ಸೂಕ್ತ ಕೇಂದ್ರಗಳಲ್ಲಿ ಅಥವಾ ದನದ ಆಶ್ರಯ ತಾಣಗಳಲ್ಲಿ ಇರಿಸಬೇಕು ಮತ್ತು ಅಗತ್ಯ ಆಹಾರ, ನೀರು ಮತ್ತು ಪಶುವೈದ್ಯಕೀಯ ಆರೈಕೆಯನ್ನು ಒದಗಿಸಬೇಕು’ ಎಂದು ನಿರ್ದೇಶಿಸಿತು.

‘ಬೀದಿ ದನಗಳು ಅಥವಾ ಇತರ ಪ್ರಾಣಿಗಳು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಸ್ಥಳಗಳ ಮೇಲೆ ನಿಗಾ ಇಡಲು ಹೆದ್ದಾರಿ ಗಸ್ತು ತಂಡಗಳನ್ನು ರಚಿಸಬೇಕು. ಎಲ್ಲ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳು ನಿಯಮಿತವಾಗಿ ಸಹಾಯವಾಣಿ ಸಂಖ್ಯೆಗಳನ್ನು ಪ್ರಮುಖವಾಗಿ ಪ್ರದರ್ಶಿಸಬೇಕು. ಇದರಿಂದಾಗಿ ಪ್ರಯಾಣಿಕರು ಬೀದಿ ಪ್ರಾಣಿಗಳ ಉಪಸ್ಥಿತಿ ಅಥವಾ ಅವುಗಳಿಂದ ಉಂಟಾಗುವ ಅಪಘಾತಗಳ ಬಗ್ಗೆ ತಕ್ಷಣವೇ ದೂರು ನೀಡಲು ಸಾಧ್ಯವಾಗುತ್ತದೆ’ ಎಂದಿತು.

ಪ್ರಾಣಿಪ್ರಿಯರ ವಿರೋಧ:

ಸುಪ್ರೀಂ ಕೋರ್ಟ್‌ ಆದೇಶ ವಿರೋಧಿಸಿ ದಿಲ್ಲಿ ಕನಾಟ್ ಪ್ಲೇಸ್‌ನಲ್ಲಿ ನಾಯಿಪ್ರಿಯರು ಪ್ರತಿಭಟಿಸಿದರು. ‘ಮೂಕ ಪ್ರಾಣಿಗಳಿಗೆ ಅಂತಹ ಅನ್ಯಾಯವಾಗಬಾರದು. ಎಬಿಸಿ (ಪ್ರಾಣಿ ಜನನ ನಿಯಂತ್ರಣ) ನಿಯಮಗಳ ಅಡಿ ಸ್ಥಳಾಂತರವು ನಿಷೇಧಿಸಲ್ಪಟ್ಟಿದೆ. ಇಂಥದ್ದರಲ್ಲಿ ನಾಯಿಗಳ ಸ್ಥಳಾಂತರ ಆದೇಶ ದುರದೃಷ್ಟಕರ. ಸ್ಥಳಾಂತರದ ಬಳಿಕ ಅವುಗಳಿಗೆ ಹಿಂಸೆ ಆಗದಂತೆ ನೋಡಿಕೊಳ್ಳಬೇಕು. ಆದರೂ ಸುಪ್ರೀಂ ಕೋರ್ಟ್‌ ಆದೇಶವಾಗಿದ್ದರಿಂದ ನಾವು ಗೌರವಿಸಲೇಬೇಕಾಗುತ್ತದೆ’ ಎಂದು ಶ್ವಾನಪ್ರಿಯ ವಕೀಲೆ ನನಿತಾ ಶರ್ಮಾ ಬೇಸರದಿಂದ ಹೇಳಿದರು.

ಸಾರ್ವಜನಿಕ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಹೆಚ್ಚಿದ್ದ ನಾಯಿ ಕಡಿತ ಪ್ರಕರಣ

ಜೊತೆಗೆ ರಸ್ತೆಗಳಲ್ಲಿ ಬೀಡಾಡಿ ದನಗಳು, ಬೀದಿ ನಾಯಿಗಳ ಸಂಚಾರದಿಂದ ಹೆಚ್ಚಿದ್ದ ವಾಹನ ಅಪಘಾತಕ್ಕೆ ಸುಪ್ರೀಂ ಕಳವಳ

ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆ, ಸರ್ಕಾರಿ ಕಚೇರಿ, ರಾಜ್ಯ, ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಿಂದ ನಾಯಿ, ದನ ತೆರವಿಗೆ ಸೂಚನೆ

ಪ್ರತಿ ಬೀದಿ ನಾಯಿಗೂ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕಾಕರಣದ ನಂತರ ಆಶ್ರಯಕ್ಕೆ ಸ್ಥಳಾಂತರಿಸಲು ಆದೇಶ

ನಾಯಿ ಮತ್ತು ದನಗಳಿಗೆ ಪ್ರತ್ಯೇಕ ಆಶ್ರಯ ತಾಣ ಸ್ಥಾಪಿಸಿ, ಅಲ್ಲಿಗೆ ಅವುಗಳನ್ನು 8 ವಾರದಲ್ಲಿ ಸ್ಥಳಾಂತರಕ್ಕೆ ಖಡಕ್‌ ಸೂಚನೆ

Read more Articles on