ಸಾರಾಂಶ
- ವಕ್ಫ್ ವಿವಾದದ ವೇಳೆಯೇ ಕೇರಳ ಹೈಕೋರ್ಟ್ ಆದೇಶ- ಹಿಂದಿನ ಒತ್ತುವರಿ ಬಗ್ಗೆ ಕಾಯ್ದೆಯಲ್ಲಿ ಪ್ರಸ್ತಾಪವಿಲ್ಲ
----ಪಿಟಿಐ ಕೊಚ್ಚಿ2013ರ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬರುವ ಮುಂಚೆ ವಕ್ಫ್ ಆಸ್ತಿ ಒತ್ತುವರಿ ಆಗಿದ್ದರೆ ಅಂಥ ಪ್ರಕರಣಗಳಲ್ಲಿ ಕೇಸು ಹಾಕಲು ಆಗದು ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೇರಳ ಮತ್ತು ಕರ್ನಾಟಕದಲ್ಲಿ ವಕ್ಫ್ ಆಸ್ತಿ ದೊಡ್ಡ ಮಟ್ಟದಲ್ಲಿ ಗದ್ದಲಕ್ಕೆ ಕಾರಣವಾಗಿರುವ ಹೊತ್ತಿನಲ್ಲೇ ಈ ಮಹತ್ವದ ಆದೇಶ ಹೊರಬಿದ್ದಿದೆ.ಕೇರಳ ವಕ್ಫ್ ಮಂಡಳಿ ಅನುಮತಿ ಇಲ್ಲದೇ ವಕ್ಫ್ ಆಸ್ತಿಯನ್ನು ಪರಭಾರೆ ಮಾಡಿ ಅಂಚೆ ಕಚೇರಿ ನಿರ್ಮಾಣಕ್ಕೆ ಅನುಮತಿಸಿದ್ದ ಆರೋಪ ಹೊತ್ತಿದ್ದ ಇಬ್ಬರು ಅಂಚೆ ಇಲಾಖೆ ಅಧಿಕಾರಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ವಜಾ ಮಾಡಿದ ಹೈಕೋರ್ಟ್, ‘2013ರಲ್ಲಿ ಸೆಕ್ಷನ್ 52ಎ ಅನ್ನು ಸೇರಿಸಿ ವಕ್ಫ್ ಆಸ್ತಿಗಳ ರಕ್ಷಣೆಗೆ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಯಿತು. ಆದರೆ ಅದರಲ್ಲಿ, ವಕ್ಫ್ ಮಂಡಳಿ ಅನುಮತಿ ಪಡೆಯದೇ 2013ಕ್ಕಿಂತ ಮುನ್ನ ವಕ್ಫ್ ಜಮೀನು ಆಕ್ರಮಿಸಿಕೊಂಡವರ ವಿರುದ್ಧ ತನಿಖೆ ನಡೆಸಬಹುದು ಎಂದೇನೂ ಹೇಳಿಲ್ಲ’ ಎಂದು ಅಭಿಪ್ರಾಯಪಟ್ಟಿತು.
‘ಪ್ರಸ್ತುತ ಕೇಸಿನಲ್ಲಿ ಕಲ್ಲಿಕೋಟೆಯಲ್ಲಿನ ಅಂಚೆ ಕಚೇರಿಯೊಂದು 1999ರಿಂದ ವಕ್ಫ್ ಆಸ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. 2013ಕ್ಕಿಂತ ಮುಂಚೆಯೇ ಇದು ಕಾರ್ಯನಿರ್ವಹಿಸುತ್ತಿರುವ ಕಾರಣ, ಅದರ ಅಧಿಕಾರಿಗಳ ವಿರುದ್ಧ ಕೇಸು ಹಾಕಲು ಆಗದು’ ಎಂದಿತು.‘ವಕ್ಫ್ ಮಂಡಳಿ ಅನುಮತಿ ಇಲ್ಲದೇ ಅಂಚೆ ಇಲಾಖೆಯು ಮಂಡಳಿಯ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಂಡಿದ್ದು, ಇದನ್ನು ತೆರವು ಮಾಡಬೇಕು ಎಂದು ವಕ್ಫ್ ನ್ಯಾಯಾಧಿಕರಣ 2018ರಲ್ಲಿ ಸೂಚಿಸಿತ್ತು. ಆದರೂ ಜಮೀನನ್ನು ವಾಪಸು ಮಾಡಿಲ್ಲ’ ಎಂದು ಕೇರಳ ವಕ್ಫ್ ಮಂಡಳಿ ಕೇಸು ಹಾಕಿತ್ತು. ಇದರ ವಿಚಾರಣೆ ಕಲ್ಲಿಕೋಟೆ ಮ್ಯಾಜಿಸ್ಟ್ರೇಟ್ ಕೋರ್ಟಲ್ಲಿ ನಡೆಯುತ್ತಿತ್ತು. ಇದನ್ನು ಅಧಿಕಾರಿಗಳು ಹೈಕೋರ್ಟಲ್ಲಿ ಪ್ರಶ್ನಿಸಿದ್ದರು.