ವಾಯುಮಾಲಿನ್ಯ ಪ್ರಚೋದಿಸುವ ಚಟುವಟಿಕೆಯನ್ನು ಯಾವುದೇ ಧರ್ಮ ಪ್ರೋತ್ಸಾಹಿಸುವುದಿಲ್ಲ: ಸುಪ್ರೀಂ

| Published : Nov 11 2024, 11:48 PM IST / Updated: Nov 12 2024, 07:47 AM IST

ಸಾರಾಂಶ

‘ವಾಯುಮಾಲಿನ್ಯ ಪ್ರಚೋದಿಸುವ ಯಾವುದೇ ಚಟುವಟಿಕೆಯನ್ನು ಯಾವುದೇ ಧರ್ಮ ಪ್ರೋತ್ಸಾಹಿಸುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ ಹಾಗೂ ನ. 25ರೊಳಗೆ ರಾಷ್ಟ್ರ ರಾಜಧಾನಿಯಲ್ಲಿ ಶಾಶ್ವತ ಪಟಾಕಿ ನಿಷೇಧದ ಬಗ್ಗೆ ನಿರ್ಧರಿಸುವಂತೆ ದಿಲ್ಲಿ ಸರ್ಕಾರಕ್ಕೆ ಸೂಚಿಸಿದೆ.

ನವದೆಹಲಿ: ‘ವಾಯುಮಾಲಿನ್ಯ ಪ್ರಚೋದಿಸುವ ಯಾವುದೇ ಚಟುವಟಿಕೆಯನ್ನು ಯಾವುದೇ ಧರ್ಮ ಪ್ರೋತ್ಸಾಹಿಸುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ ಹಾಗೂ ನ. 25ರೊಳಗೆ ರಾಷ್ಟ್ರ ರಾಜಧಾನಿಯಲ್ಲಿ ಶಾಶ್ವತ ಪಟಾಕಿ ನಿಷೇಧದ ಬಗ್ಗೆ ನಿರ್ಧರಿಸುವಂತೆ ದಿಲ್ಲಿ ಸರ್ಕಾರಕ್ಕೆ ಸೂಚಿಸಿದೆ.

ರಾಜಧಾನಿಯಲ್ಲಿ ಪಟಾಕಿ ನಿಷೇಧ ಜಾರಿಗೆ ಸಂಬಂಧಿಸಿದ ವಿಚಾರಣೆ ನಡೆಸಿದ ನ್ಯಾ। ಅಭಯ್‌ ಓಕಾ ಹಾಗೂ ನ್ಯಾ। ಆಗಸ್ಟೀನ್‌ ಜಾರ್ಜ್‌ ಮಸೀಹ್‌, ಅವರನ್ನೊಳಗೊಂಡ ಪೀಠ ‘ಮಾಲಿನ್ಯ ಮುಕ್ತ ವಾತಾವರಣದಲ್ಲಿ ಬದುಕುವ ಹಕ್ಕು ಸಂವಿಧಾನದ 21ನೇ ವಿಧಿ ಅಡಿಯಲ್ಲಿನ ಮೂಲಭೂತ ಹಕ್ಕು. ಯಾವುದೇ ಧರ್ಮವು ಮಾಲಿನ್ಯವನ್ನು ಉತ್ತೇಜಿಸುವ ಅಥವಾ ಜನರ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳುವ ಯಾವುದೇ ಚಟುವಟಿಕೆ ಉತ್ತೇಜಿಸುವುದಿಲ್ಲ ಎಂಬುದು ನಮ್ಮ ಭಾವನೆ’ ಎಂದಿದೆ.ಇದೇ ವೇಳೆ ತನ್ನ ಈ ಹಿಂದಿನ ಪಟಾಕಿ ನಿಷೇಧ ಆದೇಶ ಜಾರಿ ಮಾಡುವಲ್ಲಿ ಎಡವಿದ ದಿಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಪೀಠ, ‘ನೀವು ಕೇವಲ ಪಟಾಕಿ ತಯಾರಿಕಾ ಕಚ್ಚಾವಸ್ತು ವಶಪಡಿಸಿಕೊಂಡು ಕಣ್ಣೊರೆಸುವ ತಂತ್ರ ಮಾಡಿದ್ದೀರಿ’ ಎಂದು ಕುಟುಕಿತು.

‘ದಿಲ್ಲಿ ಪೊಲೀಸ್‌ ಆಯುಕ್ತರು ತಕ್ಷಣವೇ ಎಲ್ಲ ಮಧ್ಯಸ್ಥಿಕೆದಾರರಿಗೆ ನಿಷೇಧ ಆದೇಶದ ಬಗ್ಗೆ ತಿಳಿಸಬೇಕು. ಪಟಾಕಿಗಳ ಮೇಲಿನ ನಿಷೇಧದ ಪರಿಣಾಮಕಾರಿ ಅನುಷ್ಠಾನಕ್ಕೆ ವಿಶೇಷ ಕೋಶ ರಚಿಸಬೇಕು. ಕೈಗೊಂಡ ಕ್ರಮಗಳನ್ನು ದಾಖಲಿಸಿ ವೈಯಕ್ತಿಕ ಅಫಿಡವಿಟ್ ಸಲ್ಲಿಸಬೇಕು’ ಎಂದಿತು.

ಅಲ್ಲದೆ, ‘ಪಟಾಕಿ ನಿಷೇಧದ ಆದೇಶವನ್ನು ನಾವು ಹೊರಡಿಸಿದರೂ ಅ.14ರವರೆಗೆ ಅದರ ಜಾರಿಗೆ ದಿಲ್ಲಿ ಸರ್ಕಾರ ಏಕೆ ವಿಳಂಬ ಮಾಡಿತು?’ ಎಂದೂ ಪೀಠ ಪ್ರಶ್ನಿಸಿತು.