ಮಹಾರಾಷ್ಟ್ರ, ದಿಲ್ಲಿ ಕೇರಳ, ಗುಜರಾತ್‌, ರಾಜಸ್ಥಾನ, ಹಿಮಾಚಲ. ಅರುಣಾಚಲದಲ್ಲಿ ಜನಜೀವನ ಅಸ್ತವ್ಯಸ್ತ

ಭಾರೀ ಮಳೆ, ದಿಢೀರ್ ಪ್ರವಾಹ, ಭೂಕುಸಿತ, ರೈಲು, ವಿಮಾನ ಸಂಚಾರ ವ್ಯತ್ಯಯ । ಹಲವೆಡೆ ರೆಡ್‌ ಅಲರ್ಟ್‌


ನವದೆಹಲಿ: ದೇಶದ ಉತ್ತರ ಮತ್ತು ಪಶ್ಚಿಮದ ರಾಜ್ಯಗಳಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ಗುರುವಾರವೂ ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ. ಮಹಾರಾಷ್ಟ್ರ, ದೆಹಲಿ, ಕೇರಳ, ಹಿಮಾಚಲ ಪ್ರದೇಶ, ಗುಜರಾತ್‌, ರಾಜಸ್ಥಾನ, ಅರುಣಾಚಲ ಪ್ರದೇಶ, ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ಗುರುವಾರ ಭರ್ಜರಿ ಮಳೆ ಸುರಿದಿದ್ದು ಹಲವು ಕಡೆ ಭೂಕುಸಿತ, ಆಸ್ತಿಪಾಸ್ತಿಗೆ ಭಾರೀ ಹಾನಿಯ ದುರ್ಘಟನೆಗಳು ಸಂವಿಸಿದೆ.ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆ ಮುಂದುವರಿದಿದ್ದು ರಸ್ತೆಗಳೆಲ್ಲಾ ಜಲಾವೃತವಾಗಿವೆ. ಈ ನಡುವೆ ಬುಧವಾರದ ಮನೆ ಕುಸಿತಕ್ಕೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿದೆ.ರಾಜಸ್ಥಾನದ ಹಲವು ಕಡೆಗಳಲ್ಲಿ ನಿರಂತರವಾಗಿ ವರ್ಷಧಾರೆಯಾಗುತ್ತಿದ್ದು, ಕೋಟಾ ಮತ್ತು ಭರತಪುರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮಹಾರಾಷ್ಟ್ರದಲ್ಲೂ ಗುರುವಾರ ಉತ್ತಮ ಮಳೆಯಾಗಿದೆ. ಉತ್ತರಾಖಂಡದಲ್ಲೂ ಕಳೆದ 24 ಗಂಟೆಗಳಿಂದ ಭಾರೀ ಮಳೆ ಸುರಿಯುತ್ತಿದ್ದು 100ಕ್ಕೂ ಹೆಚ್ಚು ಮಾರ್ಗಗಳಲ್ಲಿ ಭೂಕುಸಿತ, ಪ್ರವಾಹದ ಕಾರಣ ಸಂಚಾರಕ್ಕೆ ಅಡ್ಡಿಯಾಗಿದೆ. ಜೊತೆಗೆ ಮುಂದಿನ 24 ಗಂಟೆಗಳ ಅವಧಿಗೆ 7 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 10ರಿಂದ 20 ಸೆ.ಇ.ಮೀನಷ್ಟು ಭಾರೀ ಮಳೆ ಸುರಿದಿದೆ. ಗಂಗಾ, ಯಮುನಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.ಅರುಣಾಚದಲ್ಲಿ ಭಾರೀ ಮಳೆಯಿಂದಾಗಿ ದಿಢೀರ್‌ ಪ್ರವಾಹ ಕಾಣಿಸಿಕೊಂಡಿದೆ. ಪರಿಣಾಮ 6 ಜಿಲ್ಲೆಗಳಲ್ಲಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಹಲವು ಮನೆಗಳು, ಬೆಳೆ ನಾಶವಾಗಿದೆ. ಮತ್ತೊಂದೆಡೆ ಹಿಮಾಚಲ ಪ್ರದೇಶದ ಹಲವು ಜಿಲ್ಲೆಗಳಲ್ಲೂ ದಿಢೀರ್‌ ಪ್ರವಾಹದಿಂದ ಭೂಕುಸಿತ, ಆಸ್ತಿಪಾಸ್ತಿಗೆ ಹಾನಿ, ಬೆಳೆಹಾನಿಯ ಘಟನೆಗಳು ವರದಿಯಾಗಿವೆ.

==

ಮಹಾ ಪ್ರವಾಹದಲ್ಲಿ ತೇಲಿದ 3,000 ಎಲ್‌ಪಿಜಿ ಸಿಲಿಂಡರ್‌

ಪಾತಾಳಗಂಗಾ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಹಾ ಮಳೆಯಿಂದಾಗಿ ಇಲ್ಲಿನ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.ನ(ಎಚ್‌ಪಿಸಿಎಲ್‌) ಎಲ್‌ಪಿಜಿ ಘಟಕದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, 3 ಸಾವಿರ ಸಿಲಿಂಡರ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನದಿಯೊಡಲು ಸೇರಿವೆ. ಘಟಕದ ಕಾಂಪೌಂಡ್ ಗೋಡೆ ಮಳೆಗೆ ಕುಸಿದು ಬಿದ್ದ ಕಾರಣ ಅಲ್ಲಿ ಸಂಗ್ರಹಿಸಿದ್ದ 3000ಕ್ಕೂ ಹೆಚ್ಚು ಸಿಲಿಮಡರ್‌ಗಳು ನೀರಿನಲ್ಲಿ ತೇಲಿ ಹೋಗಿ ನದಿ ಸೇರಿಕೊಂಡಿವೆ. ಈ ನಡುವೆ ನೀರಿನಲ್ಲಿ ಸೋರಿಹೋದ ಸಿಲಿಂಡರ್‌ನಿಂದ ಅನಿಲ ಸೋರಿಕೆಯ ಅಪಾಯವಿರುತ್ತದೆ. ಆದಕಾರಣ, ಅದನ್ನೆತ್ತಿಕೊಳ್ಳಲು ಹೋದರೆ ಪ್ರಾಣಕ್ಕೇ ಕುತ್ತು ಬರುವ ಸಾಧ್ಯತೆ ಇದೆ. ಹೀಗಾಗಿ ಅವುಗಳನ್ನು ಮುಟ್ಟದಂತೆ, ಹೊರತೆಗೆದು ಸಾಗಿಸದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜತೆಗೆ, ಅಂತಹ ಸಿಲಿಂಡರ್‌ ಕಂಡುಬಂದಲ್ಲಿ ಪೊಲೀಸರಿಗೆ, ಅಗ್ನಿಶಾಮಕ ದಳಕ್ಕೆ ಅಥವಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

==

ಇಡೀ ದೇಶಕ್ಕೆ ವ್ಯಾಪಿಸಿದ ಮುಂಗಾರು

ಜೂ.1ರಿಂದ ಇದುವರೆಗೆ ಶೇ.14 ಮಳೆ ಕೊರತೆ

ಜುಲೈನಲ್ಲಿ ಭರ್ಜರಿ ಮಳೆ ಕಾರಣ ಕೊರತೆ ಇಳಿಕೆ

ನವದೆಹಲಿ: ಜೂ.4ರಂದು ಕೇರಳದ ಮೂಲಕ ದೇಶವನ್ನು ಪ್ರವೇಶಿಸಿದ್ದ ಮುಂಗಾರು ಮಾರುತಗಳು ಇದೀಗ ರಾಜಸ್ಥಾನ, ಹರ್ಯಾಣ ಮತ್ತು ಪಂಜಾಬ್‌ನ ಉಳಿದ ಭಾಗಗಳಿಗೂ ವ್ಯಾಪಿಸುವ ಮೂಲಕ ಇಡೀ ದೇಶವನ್ನು ಆವರಿಸಿದಂತಾಗಿದೆ.ಸಾಮಾನ್ಯವಾಗಿ ಜು.8ಕ್ಕೆ ಮುಂಗಾರು ಇಡೀ ದೇಶವನ್ನು ಆವರಿಸುತ್ತಿತ್ತು. ಆದರೆ ಈ ವರ್ಷ 1 ದಿನ ತಡವಾಗಿದೆ. ಜೂನ್‌ ತಿಂಗಳಲ್ಲಿ ಭಾರೀ ಮಳೆ ಕೊರತೆ ಕಾಣಿಸಿಕೊಂಡಿತ್ತಾದರೂ, ಜುಲೈನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾದ ಕಾರಣ ಇದುವರೆಗೆ ಒಟ್ಟಾರೆ ಮಳೆ ಕೊರತೆ ಶೇ.14ಕ್ಕೆ ಇಳಿಕೆಯಾಗಿದೆ.ಸಾಮಾನ್ಯವಾಗಿ ಜೂನ್‌ ತಿಂಗಳ ಮೊದಲ 9 ದಿನಗಳಲ್ಲಿ ಸರಾಸರಿ 73.8 ಮಿ.ಮೀ. ಆಗುತ್ತಿತ್ತು. ಆದರೆ ಈ ವರ್ಷ ಅದು 101.9 ಮಿ.ಮೀ.ಕ್ಕೆ ಏರಿದೆ.