ದೇಶದ ವಿವಿಧ ರಾಜ್ಯಗಳಲ್ಲಿ ಬುಧವಾರವೂ ಮುಂಗಾರು ಮಳೆ ತನ್ನ ಆರ್ಭಟ ಮುಂದುವರೆಸಿದ್ದು ಸಾಮಾನ್ಯ ಜನಜೀವನದ ಮೇಲೆ ವ್ಯತ್ಯಯಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ, ಕೇರಳ, ದೆಹಲಿ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಬುಧವಾರವೂ ಮುಂಗಾರು ಮಳೆ ತನ್ನ ಆರ್ಭಟ ಮುಂದುವರೆಸಿದ್ದು ಸಾಮಾನ್ಯ ಜನಜೀವನದ ಮೇಲೆ ವ್ಯತ್ಯಯಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ, ಕೇರಳ, ದೆಹಲಿ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ನದಿಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡಿದೆ. ಜೊತೆಗೆ ಹಲವು ಕಡೆ ಕಟ್ಟಡ ಕುಸಿತ, ಸೇತುವೆ ಕುಸಿತದ ಘಟನೆಗಳು ನಡೆದಿದೆ. ದೆಹಲಿಯಲ್ಲಿ ಮನೆ ಕುಸಿದು ಒಬ್ಬರು ಸಾವನ್ನಪ್ಪಿದ್ದರೆ, ಪುಣೆಯಲ್ಲಿ ಕುಸಿದುಬಿದ್ದ ಕಟ್ಟಡವೊಂದರ ಒಳಗೆ 16 ಜನರು ಸಿಕ್ಕಿಬಿದ್ದಿದ್ದು ಅವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ.

ಈ ನಡುವೆ ಕೇರಳದಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದ ವೇಳೆ ನಾಪತ್ತೆಯಾದ 5 ಜನರ ಕುರಿತು ಇನ್ನೂ ಸುಳಿವು ಸಿಕ್ಕಿಲ್ಲ.

ಕಸ ಕಂಟಕ:

ಕಸದ ದೊಡ್ಡ ಗುಡ್ಡ ಕುಸಿದ ಪರಿಣಾಮ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ಚಿಂಚ್ವಾಡದಲ್ಲಿ 3 ಮಹಡಿ ಕಟ್ಟಡ ಧರೆಗುರುಳಿದೆ. ತ್ಯಾಜ್ಯ ಸಂಸ್ಕರಣೆ ನಡೆಸುವ ಖಾಸಗಿ ಕಂಪನಿ ಆಡಳಿತ ಕಚೇರಿ ಈ ಅನಾಹುತಕ್ಕೆ ತುತ್ತಾಗಿದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ 16 ಜನ ಸಿಲುಕಿದ್ದು, ಅವರನ್ನು ಅಲ್ಲಿಂದ ಹೊರತರುವ ಯತ್ನ ನಡೆಯುತ್ತಿದೆ.

ಹಲವು ನದಿಗಳು ಉಕ್ಕೇರಿ ಹರಿಯುತ್ತಿದೆ

ರಾಜ್ಯ ಹಲವು ನದಿಗಳು ಉಕ್ಕೇರಿ ಹರಿಯುತ್ತಿದ್ದು ನದಿ ಪಾತ್ರದ ಜನರನ್ನು ತೆರವುಗೊಳಿಸಲಾಗಿದೆ. ರಾಜ್ಯವ ಹಲವು ಕಡೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ ಮುಂಬೈನಲ್ಲಿ ಬುಧವಾರ ಭಾರೀ ಮಳೆ ಸುರಿದಿದ್ದು ವಿಮಾನ, ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.

ರಾಜಸ್ಥಾನದ ಕೋಟಾದ ರಾಮಗಂಜ್‌ ಮಂಡಿಯಲ್ಲಿ ರಾಜ್ಯದಲ್ಲಿ ಈ ವರ್ಷದಲ್ಲೇ ಗರಿಷ್ಠ 10 ಸೆಂ.ಮೀ. ಮಳೆ ಸುರಿದಿದೆ. ಹಿಮಾಚಲಪ್ರದೇಶದಲ್ಲಿ ಭೂಕುಸಿತಕ್ಕೆ ಇಬ್ಬರು ಬಿಹಾರಿ ಕಾರ್ಮಿಕರು ಬಲಿಯಾಗಿದ್ದಾರೆ.