ಚಿಕ್ಕಮಗಳೂರುಮಲೆನಾಡಿನ ಮಳೆ ಅಬ್ಬರಕ್ಕೆ ಚಿಕ್ಕಮಗಳೂರು ತಾಲೂಕಿನ ಕವಿಕಲ್ ಗಂಡಿ ಸಮೀಪ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಗುಡ್ಡದ ಮಣ್ಣು ಕುಸಿದ ಘಟನೆಯಿಂದ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿದೆ.

ಚಾರ್ಮಾಡಿಯಲ್ಲಿ ಮಳೆ, ದಟ್ಟ ಮಂಜು: ಕಾರು ಪಲ್ಟಿ, ಪ್ರಯಾಣಿಕರು ಪಾರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಲೆನಾಡಿನ ಮಳೆ ಅಬ್ಬರಕ್ಕೆ ಚಿಕ್ಕಮಗಳೂರು ತಾಲೂಕಿನ ಕವಿಕಲ್ ಗಂಡಿ ಸಮೀಪ ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಗುಡ್ಡದ ಮಣ್ಣು ಕುಸಿದ ಘಟನೆಯಿಂದ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ ಮೂಡಿದೆ.

ಕಳೆದ ವರ್ಷ ಕುಸಿತ ಸಂಭವಿಸಿದ್ದ ಪ್ರದೇಶದಲ್ಲೇ ಮತ್ತೆ ಮಣ್ಣು ಜಾರಿದ್ದು ಕಾಫಿನಾಡಿನ ಈ ಬೆಳವಣಿಗೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮಳೆ ತೀವ್ರವಾದರೆ ಜಿಲ್ಲೆಯ ವಿವಿಧ ಗುಡ್ಡ ಪ್ರದೇಶಗಳಲ್ಲಿ ಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಸಂಚರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ್ದ ಭೂಕುಸಿತದ ಘಟನೆಯ ಬೆನ್ನಲ್ಲೇ ದೀ ಘಟನೆ ನಡೆದಿರುವುದು ಸಹ ಆತಂಕಕ್ಕೆ ಕಾರಣ.

ಮುಳ್ಳಯ್ಯನಗಿರಿ ಹಾಗೂ ದತ್ತಪೀಠದ ಪ್ರಕೃತಿ ಸೌಂದರ್ಯ ವೀಕ್ಷಿಸಲು ಆಗಮಿಸಿದ್ದ ಪ್ರವಾಸಿಗರು ರಸ್ತೆ ಮೇಲೆ ಬಂಡೆ ಮತ್ತು ಮಣ್ಣು ಬಿದ್ದಿರುವುದನ್ನು ಕಂಡು ಕೆಲಕಾಲ ಆತಂಕಕ್ಕೊಳಗಾದರು. ದಟ್ಟ ಮಂಜು ಮತ್ತು ನಿರಂತರ ಮಳೆ ಕಾರಣ ಗಿರಿಶ್ರೇಣಿಯ ನೈಸರ್ಗಿಕ ಸೌಂದರ್ಯ ಸಂಪೂರ್ಣವಾಗಿ ಸವಿಯಲು ಸಾಧ್ಯವಾಗಲಿಲ್ಲ‌.

“ಕೇರಳದಲ್ಲಿ ಸಂಭವಿಸಿದ ಭೂಕುಸಿತದ ಘಟನೆಯಿಂದ ಸ್ವಲ್ಪ ಭಯ ಇತ್ತು. ಚಿಕ್ಕಮಗಳೂರಿನ ರಸ್ತೆಯಲ್ಲಿ ಬಂಡೆ ಮತ್ತು ಮಣ್ಣು ಬಿದ್ದಿರುವುದನ್ನು ನೋಡಿ ಇನ್ನಷ್ಟು ಆತಂಕವಾಯಿತು. ಮನೆಯಲ್ಲಿ ಹೋಗಬೇಡಿ ಎಂದು ಹೇಳಿದರೂ ಮುಳ್ಳಯ್ಯನಗಿರಿಯ ಸೌಂದರ್ಯ ನೋಡಲೇಬೇಕು ಎಂಬ ಆಸೆಯಿಂದ ಬಂದಿದ್ದೇವೆ ಎಂದು ಪ್ರವಾಸಿಗರು ತಮ್ಮ ಅನುಭವ ಹಂಚಿಕೊಂಡರು.

...ಬಾಕ್ಸ್...

ಕಾಫಿನಾಡಿನ ಮಿನಿ ಜಲಪಾತಗಳ ಸೌಂದರ್ಯಕ್ಕೆ ಮನಸೋತ ಪ್ರವಾಸಿಗರುಮಳೆಗಾಲ ಆರಂಭವಾಗುತ್ತಿದ್ದಂತೆ ಅನಾವರಣಗೊಳ್ಳುವ ಚಾರ್ಮಾಡಿ ಘಾಟಿ ನಿಸರ್ಗದ ಅದ್ಭುತ ಸೌಂದರ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ದಕ್ಷಿಣ ಕನ್ನಡ–ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟಿಯುದ್ದಕ್ಕೂ 10ಕ್ಕೂ ಅಧಿಕ ಮಿನಿ ಜಲಪಾತಗಳು ಜೀವಕಳೆ ಪಡೆದು ಜುಳುಜುಳು ಸದ್ದು ಮಾಡುತ್ತಾ ಬೃಹತ್‌ ಬಂಡೆಗಳ ಮೇಲಿಂದ ಹಾಲ್ನೊರೆಯಂತೆ ಧುಮುಕುವ ಜಲಧಾರೆ ನೋಡುಗರ ಮನಸೂರೆಗೊಳ್ಳುತ್ತಿವೆ. ಒಂದೆಡೆ ದಟ್ಟ ಮಂಜು, ಮತ್ತೊಂದೆಡೆ ನಿರಂತರ ಮಳೆಗೆ ನರ್ತಿಸುವ ಜಲಧಾರೆಗಳು ಚಾರ್ಮಾಡಿಯನ್ನೆ ಪ್ರಕೃತಿಯನ್ನೆ ರಮಣೀಯವಾಗಿಸಿದೆ.

ಜಲಪಾತಗಳ ಎದುರು ನಿಂತು ಸೆಲ್ಫಿ ಹಾಗೂ ಛಾಯಾಚಿತ್ರ ಸೆರೆಹಿಡಿಯಲು ಪ್ರವಾಸಿಗರು ಸಾಲುಗಟ್ಟಿ ನಿಂತ ದೃಶ್ಯ ಸಾಮಾನ್ಯವಾಗಿದೆ. ಕುಟುಂಬ ಸಮೇತರಾಗಿ ಆಗಮಿಸಿರುವ ಪ್ರವಾಸಿಗರು ನಿಸರ್ಗದ ಈ ಮನಮೋಹಕ ದೃಶ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.--ಬಾಕ್ಸ್...

ಚಾರ್ಮಾಡಿಯಲ್ಲಿ ಮಳೆ, ದಟ್ಟ ಮಂಜು: ಕಾರು ಪಲ್ಟಿ, ಪ್ರಯಾಣಿಕರು ಪಾರುಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿ ರುವ ನಿರಂತರ ಮಳೆಗೆ ಘಾಟ್ ರಸ್ತೆಯುದ್ದಕ್ಕೂ ದಟ್ಟ ಮಂಜು ಆವರಿಸಿದೆ. ಮಲೆನಾಡು ಮತ್ತು ಕರಾವಳಿ ಸಂಪರ್ಕಿಸುವ ಈ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ.ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ಮೂಲಕ ಪ್ರತಿನಿತ್ಯ ವೈದ್ಯಕೀಯ, ಧಾರ್ಮಿಕ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಸಾವಿರಾರು ವಾಹನ ಸಂಚರಿಸುತ್ತವೆ. ಆದರೆ ನಿರಂತರ ಮಳೆ ಮತ್ತು ದಟ್ಟ ಮಂಜಿನಿಂದ ರಸ್ತೆ ಸ್ಪಷ್ಟವಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಚಾರ್ಮಾಡಿ ಘಾಟ್‌ನ ಮಲೆ ಮಾರುತ ಸಮೀಪ ರಸ್ತೆ ಕಾಣಿಸದೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿಯಾಗಿದೆ. ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.ಮಳೆ ಹಾಗೂ ಮಂಜಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಯಲ್ಲಿ ಚಾಲಕರು ಅತ್ಯಂತ ಎಚ್ಚರಿಕೆಯಿಂದ ನಿಧಾನವಾಗಿ ವಾಹನ ಚಲಾಯಿಸುವಂತೆ ಪೊಲೀಸ್ ಹಾಗೂ ಸಂಬಂಧಿಸಿದ ಇಲಾಖೆ ಸೂಚಿಸಿವೆ.

....ಬಾಕ್ಸ್...

2 ಕಿ.ಮೀ ಟ್ರಾಫಿಕ್ ಜಾಮ್

ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಮೂಡಿಗೆರೆ ಪಟ್ಟಣದಲ್ಲಿ ಬೃಹತ್ ಮರವೊಂದು ರಸ್ತೆ ಮಧ್ಯೆ ಧರೆಗುರುಳಿದ್ದು, ಸುಮಾರು 2 ಕಿಲೋಮೀಟರ್‌ವರೆಗೆ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಮೂಡಿಗೆರೆ ಪಟ್ಟಣದ ಗಣಪತಿ ದೇವಸ್ಥಾನದ ಸಮೀಪ ಈ ಘಟನೆ ಸಂಭವಿಸಿದೆ. ರಸ್ತೆ ಮಧ್ಯೆ ಮರಬಿದ್ದ ಪರಿಣಾಮ ನೂರಾರು ವಾಹನಗಳು ಸರದಿ ಸಾಲಿನಲ್ಲಿ ನಿಂತು ಪ್ರಯಾಣಿಕರು ಪರದಾಡುವಂತಾಯಿತು.

ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸಾರ್ವಜನಿಕರ ಸಹಕಾರದೊಂದಿಗೆ ಸುರಿವ ಮಳೆಯ ನಡುವೆಯೇ ಕೆಲ ಸಮಯದ ಮರ ತೆರವು ಕಾರ್ಯಾಚರಣೆ ಬಳಿಕ ವಾಹನ ಸಂಚಾರವನ್ನು ಪುನಃ ಆರಂಭಿಸಲಾಯಿತು.

ಮಲೆನಾಡು ಭಾಗದಲ್ಲಿ ನಿರಂತರ ಮಳೆ ಹಾಗೂ ಬಿರುಗಾಳಿಯ ಪರಿಣಾಮ ಮರಗಳು ಧರೆಗುರುಳುವ ಘಟನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.