ಬೆಳಗಾವಿ ಕುರಿತು ಮತ್ತೆ ಕ್ಯಾತೆ ತೆಗೆದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬೆಳಗಾವಿ ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ತ್ವರಿತ ವಿಚಾರಣೆ ಕೋರಿ ಅರ್ಜಿ ಸಲ್ಲಿಸುವ, ಕರ್ನಾಟದಲ್ಲಿನ ಮರಾಠಿ ಪರ ಹೋರಾಟಗಾರರಿಗೆ ಎಲ್ಲಾ ರೀತಿಯ ಕಾನೂನು ನೆರವು ನೀಡುವ ಮತ್ತು ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ನೀಡುವ ಘೋಷಣೆ ಮಾಡಿದ್ದಾರೆ.
ಮುಂಬೈ: ಕರ್ನಾಟಕದ ಅವಿಭಾಜ್ಯ ಅಂಗವಾದ ಬೆಳಗಾವಿ ಕುರಿತು ಮತ್ತೆ ಕ್ಯಾತೆ ತೆಗೆದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬೆಳಗಾವಿ ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ತ್ವರಿತ ವಿಚಾರಣೆ ಕೋರಿ ಅರ್ಜಿ ಸಲ್ಲಿಸುವ, ಕರ್ನಾಟದಲ್ಲಿನ ಮರಾಠಿ ಪರ ಹೋರಾಟಗಾರರಿಗೆ ಎಲ್ಲಾ ರೀತಿಯ ಕಾನೂನು ನೆರವು ನೀಡುವ ಮತ್ತು ರಾಷ್ಟ್ರೀಯ ಭಾಷಾ ಅಲ್ಪಸಂಖ್ಯಾತರ ಆಯೋಗಕ್ಕೆ ದೂರು ನೀಡುವ ಘೋಷಣೆ ಮಾಡಿದ್ದಾರೆ.
ಮಾತುಕತೆ ಮೂಲಕ ವಿಷಯ ಇತ್ಯರ್ಥ ಸಭೆ ಆಯೋಜಿಸುವಂತೆ ಮನವಿ
ಇದರ ಜೊತೆಜೊತೆಗೇ ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ವಿಷಯ ಇತ್ಯರ್ಥ ಸಂಬಂಧ ಮಹಾರಾಷ್ಟ್ರ ಮತ್ತು ಕರ್ನಾಟಕದ ತಲಾ ಮೂರು ಸಚಿವರ ಸಭೆ ಆಯೋಜಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡುವುದಾಗಿಯೂ ತಿಳಿಸಿದ್ದಾರೆ.
ಗಡಿ ವಿವಾದ ಸಂಬಂಧ ಬುದವಾರ ಇಲ್ಲಿನ ವಿಧಾನಭವನದಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿತ್ತು. ಇದರಲ್ಲಿ ಸರ್ಕಾರದ ಹಿರಿಯ ಸಚಿವರು, ವಿಪಕ್ಷ ನಾಯಕರು ಮತ್ತು ಕರ್ನಾಟಕದ ಮರಾಠಿ ಭಾಷಿಕರ ನಿಯೋಗ ಭಾಗಿಯಾಗಿತ್ತು. ಎನ್‌ಸಿಪಿ (ಪವಾರ್ ಬಣ) ನಾಯಕ ಶರದ್ ಪವಾರ್ ಕೂಡ 3 ದಶಕಗಳ ಬಳಿಕ ವಿಧಾನಭವನದಲ್ಲಿ ನಡೆದ ಈ ಸಭೆಯಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ಮಹಾರಾಷ್ಟ್ರ ದೀರ್ಘಕಾಲದಿಂದ ಹೋರಾಟ ನಡೆಸುತ್ತಿದೆ. ಇಡೀ ಮಹಾರಾಷ್ಟ್ರದ ಜನತೆ ಗಡಿ ಭಾಗದಲ್ಲಿರುವ ಮರಾಠಿಗರ ಪರವಾಗಿ ನಿಲ್ಲಲಿದೆ. ಮರಾಠಿ ಭಾಷಿಕ ಹೋರಾಟಗಾರರಿಗೆ ಅಗತ್ಯವಾದ ಎಲ್ಲಾ ಕಾನೂನು, ಆರ್ಥಿಕ ನೆರವು ನೀಡಲು ಸರ್ಕಾರ ಸಿದ್ಧ’ ಎಂದು ಭರವಸೆ ನೀಡಿದ್ದಾರೆ.
2004ರಿಂದಲೂ ಸುಪ್ರೀಂ ಅಂಗಳದಲ್ಲಿರುವ ಅಂತರರಾಜ್ಯ ಗಡಿ ವಿವಾದ
ಜೊತೆಗೆ, ‘ಕರ್ನಾಟಕದಲ್ಲಿ ಮರಾಠಿಗರ ಸಮಸ್ಯೆಯನ್ನು ಸಂಸದರ ಮೂಲಕ ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಗಮನಕ್ಕೆ ತರಲಾಗುವುದು. 2004ರಿಂದಲೂ ಸುಪ್ರೀಂ ಅಂಗಳದಲ್ಲಿರುವ ಅಂತರರಾಜ್ಯ ಗಡಿ ವಿವಾದದ ಬಗ್ಗೆ ತ್ವರಿತ ವಿಚಾರಣೆ ನಡೆಸುವಂತೆ ಹೊಸ ಅರ್ಜಿ ಸಲ್ಲಿಸುತ್ತೇವೆ. ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗಡಿಯಲ್ಲಿರುವ ಮರಾಠಿಗರ ವಿರುದ್ಧ ಪ್ರಕರಣಗಳಿದ್ದರೆ ನಾವೇ ವಕೀಲರನ್ನು ನೇಮಿಸಿ, ಅವರ ವೆಚ್ಚವನ್ನು ಭರಿಸುತ್ತೇವೆ’ ಎಂದು ಸಭೆಗೆ ಮುಖ್ಯಮಂತ್ರಿ ಭರವಸೆ ನೀಡಿದರು ಎನ್ನಲಾಗಿದೆ.
ಜತೆಗೆ ‘ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ಮತ್ತೊಂದೆಡೆ ನ್ಯಾಯಾಲಯದ ಹೊರಗೆ ಪ್ರಕರಣ ಇತ್ಯರ್ಥದ ಸಾಧ್ಯತೆ ಬಗ್ಗೆ ಮಾತುಕತೆ ನಡೆಸಲು ಮಹಾರಾಷ್ಟ್ರ ಮತ್ತು ಕರ್ನಾಟಕದ ತಲಾ ಮೂವರು ಸಚಿವರ ಸಭೆ ಆಯೋಜಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು’ ಎಂದು ಫಡ್ನವೀಸ್ ಹೇಳಿದರು.
ಭಾಷಾವಾರು ರಾಜ್ಯಗಳ ವಿಭಜನೆ ಬಳಿಕ 1957ರಿಂದಲೂ ಉಭಯ ರಾಜ್ಯಗಳ ನಡುವೆ ಗಡಿ ವಿವಾದವಿದೆ. ಬೆಳಗಾವಿ ತಮ್ಮ ಭಾಗ , ಇಲ್ಲಿ 800ಕ್ಕೂ ಹೆಚ್ಚು ಮರಾಠಿ ಮಾತನಾಡುವ ಹಳ್ಳಿಗಳಿವೆ ಎನ್ನುವುದು ಮಹಾರಾಷ್ಟ್ರದ ವಾದ.
