ರಾಷ್ಟ್ರಪತಿ, ಗೌರ್‍ನರ್‌ಗೆ ಕಾಲಮಿತಿ ಹೇರುವುದಕ್ಕೆ ಆಗದು : ಸುಪ್ರೀಂಕೋರ್ಟ್‌

| N/A | Published : Nov 21 2025, 01:45 AM IST / Updated: Nov 21 2025, 04:33 AM IST

Supreme Court
ರಾಷ್ಟ್ರಪತಿ, ಗೌರ್‍ನರ್‌ಗೆ ಕಾಲಮಿತಿ ಹೇರುವುದಕ್ಕೆ ಆಗದು : ಸುಪ್ರೀಂಕೋರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯಗಳ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಮಸೂದೆಗಳಿಗೆ ಅಂಕಿತ ಹಾಕಲು ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ. ತಾನೇ ನೀಡಿದ್ದ ತೀರ್ಪು ಕೋರ್ಟ್‌ ರದ್ದುಗೊಳಿಸಿದೆ

ನವದೆಹಲಿ: ರಾಜ್ಯಗಳ ವಿಧಾನಸಭೆಯಲ್ಲಿ ಅಂಗೀಕರಿಸಲಾದ ಮಸೂದೆಗಳಿಗೆ ಅಂಕಿತ ಹಾಕಲು ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಿದೆ.

ಇದೇ ವೇಳೆ, ರಾಜ್ಯಪಾಲರು ಸಕಾರಣವಿಲ್ಲದೆ, ಅನಿರ್ದಿಷ್ಟಾವಧಿವರೆಗೆ ವಿಧೇಯಕವನ್ನು ಉದ್ದೇಶಪೂರ್ವಕವಾಗಿ ತಮ್ಮ ಬಳಿ ತಡೆಹಿಡಿದಿಟ್ಟುಕೊಳ್ಳುವ ಅನಿಯಂತ್ರಿತ ಅಧಿಕಾರ ಹೊಂದಿಲ್ಲ. ಅಂಥ ನಡೆ ಸಂವಿಧಾನ ವಿರೋಧಿ. ಇಂಥ ಪರಿಸ್ಥಿತಿಯಲ್ಲಿ ಸೀಮಿತ ನ್ಯಾಯಿಕ ಶಕ್ತಿಗಳನ್ನು ಬಳಸಿಕೊಂಡು ನ್ಯಾಯಾಲಯಗಳು ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ರಾಷ್ಟ್ರಪತಿ, ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡುವುದು ಕಾರ್ಯಾಂಗದ ಅಧಿಕಾರದ ವ್ಯಾಪ್ತಿಗೆ ಪ್ರವೇಶ ಮಾಡಿದಂತೆ ಎಂದು ತಿಳಿಸಿದೆ.ಸಂಸತ್ತು ಅಥವಾ ವಿಧಾನಮಂಡಲ ಅಂಗೀಕರಿಸಿದ ವಿಧೇಯಕಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ಮೂರು ತಿಂಗಳ ಕಾಲಮಿತಿ ನಿಗದಿಪಡಿಸಿ ಈ ಹಿಂದೆ ತಾನೇ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್‌ ಗುರುವಾರ ರದ್ದು ಮಾಡಿದೆ.

ರಾಜ್ಯಪಾಲರಿಗೆ ವಿಧೇಯಕಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ಕಾಲಮಿತಿ ನಿಗದಿಪಡಿಸಿ ಸುಪ್ರೀಂ ಕೋರ್ಟ್‌ ನೀಡಿದ್ದ ಏ.8ರ ತೀರ್ಪಿನಿಂದ ಹುಟ್ಟಿಕೊಂಡಿರುವ 14 ಪ್ರಶ್ನೆಗಳಿಗೆ ಉತ್ತರ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಬಿ.ಆರ್‌.ಗವಾಯಿ, ನ್ಯಾ. ಸೂರ್ಯಕಾಂತ್‌, ನ್ಯಾ. ವಿಕ್ರಂನಾಥ್‌, ನ್ಯಾ. ಪಿ.ಎಸ್‌. ನರಸಿಂಹ ಮತ್ತು ನ್ಯಾ. ಎ.ಎಸ್‌.ಚಂದ್ರೂರ್ಕರ್‌ ಅವರಿದ್ದ ಪಂಚ ಪೀಠವು ಗುರುವಾರ ತೀರ್ಪು ಪ್ರಕಟಿಸಿದೆ.

ರಾಜ್ಯಪಾಲರಿಗೆ 3 ವಿಕಲ್ಪ:

ಯಾವುದೇ ವಿಧೇಯಕಗಳನ್ನು ಅಂಗೀಕಾರಕ್ಕೆಂದು ಕಳುಹಿಸಿಕೊಟ್ಟಾಗ ಸಂ‍ವಿಧಾನದತ್ತವಾಗಿ ರಾಜ್ಯಪಾಲರಿಗೆ ಮೂರೇ ಆಯ್ಕೆಗಳಿರುತ್ತವೆ. ಒಂದೋ ಅವರು ವಿಧೇಯಕಗಳಿಗೆ ಅಂಗೀಕಾರ ನೀಡಬೇಕು, ಇಲ್ಲಾ ಪುನರ್‌ ವಿಮರ್ಶೆಗೆ ಸರ್ಕಾರಕ್ಕೆ ಕಾರಣ ಸಹಿತ ವಾಪಸ್‌ ಕಳುಹಿಸಿಕೊಡಬೇಕು, ಇವೆರಡೂ ಆಗದಿದ್ದರೆ ರಾಷ್ಟ್ರಪತಿಗಳ ಬಳಿ ಪರಿಶೀಲನೆಗೆಂದು ಕಳುಹಿಸಿಕೊಡಬೇಕು. ಆದರೆ, ರಾಜ್ಯಪಾಲರಿಗೆ ಈ ಕುರಿತು ನಿರ್ಧಾರ ತೆಗೆದುಕೊಳ್ಳಲು ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.ವಿಧಾನಸಭೆಗಳು ಅಂಗೀಕರಿಸಿದ ವಿಧೇಯಕಗಳನ್ನು ಅನಿರ್ದಿಷ್ಟಾವಧಿವರೆಗೆ ತಡೆಹಿಡಿಯುವ ಅಧಿಕಾರ ರಾಜ್ಯಪಾಲರಿಗೆ ಇದೆ ಎಂದು ನಮಗನ್ನಿಸುವುದಿಲ್ಲ. ಭಾರತದಂಥ ಸಹಕಾರ ತತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಪಾಲರು ವಿಧೇಯಕಗಳಿಗೆ ಸಂಬಂಧಿಸಿದ ಭಿನ್ನಮತವನ್ನು ಬಗೆಹರಿಸುವ ವಿಚಾರದಲ್ಲಿ ಮಾತುಕತೆಯ ದಾರಿ ಹಿಡಿಯಬೇಕೇ ಹೊರತು ವಿಳಂಬ ನೀತಿಯ ಹಾದಿಯನ್ನಲ್ಲ ಎಂದು ಪೀಠ ಇದೇ ವೇಳೆ ಸಲಹೆ ನೀಡಿದೆ.

ವಿವೇಚನಾಧಿಕಾರ ಇದೆ 

:ಸಂವಿಧಾನದ 200ನೇ ಪರಿಚ್ಛೇದವು ರಾಜ್ಯ ವಿಧಾನಸಭೆ ಅಂಗೀಕರಿಸಿದ ಯಾವುದೇ ವಿಧೇಯಕಗಳಿಗೆ ಸಂಬಂಧಿಸಿ ನಿರ್ಧಾರ ತೆಗೆದುಕೊಳ್ಳುವ ವಿವೇಚನಾಧಿಕಾರವನ್ನು ರಾಜ್ಯಪಾಲರಿಗೆ ನೀಡಿದೆ. ಆದರೆ, ರಾಜ್ಯಪಾಲರು ಅನಿರ್ದಿಷ್ಟಾವಧಿವರೆಗೆ ವಿಧೇಯಕಗಳನ್ನು ತಡೆಹಿಡಿದಾಗ ಅವರ ನಿರ್ಧಾರಗಳು ನ್ಯಾಯಾಲಯಗಳ ಪರಿಶೀಲನೆಗೆ ಒಳಪಡಬಹುದಾಗಿದೆ ಎಂದು ಪೀಠ ತಿಳಿಸಿದೆ.

ಅಡ್ಡಿಯ ಅಸ್ತ್ರ ಆಗಬಾರದು:

ವಿಧೇಯಕಗಳನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ಕಳುಹಿಸಿಕೊಡುವುದು ಸಂವಾದದ ಭಾಗವಾಗಿರಬೇಕೇ ಹೊರತು ಅದನ್ನು ಅಡ್ಡಿ ಮಾಡುವ ಅಸ್ತ್ರವನ್ನಾಗಿ ಮಾಡಬಾರದು. ಆಡಳಿತದ ವಿಚಾರಕ್ಕೆ ಬಂದಾಗ ಚುನಾಯಿತ ಸರ್ಕಾರವೇ ಚಾಲಕನ ಸೀಟಿನಲ್ಲಿರಬೇಕು. ಇಬ್ಬಿಬ್ಬರು ಆಡಳಿತ ನಡೆಸುವ ಸೀಟಿನಲ್ಲಿ ಕೂರಬಾರದು. ನ್ಯಾಯಾಂಗವು ಶಾಸಕಾಂಗದ ವಿಚಾರದಲ್ಲಿ ತಲೆಹಾಕುವುದಿಲ್ಲ. ಆದರೆ, ಅನಗತ್ಯ ವಿಳಂಬದ ನಡೆಗಳು ನ್ಯಾಯಾಂಗದ ಪರಿಶೀಲನೆಗೆ ಒಳಪಡಬಹುದಾಗಿದೆ. ಅದೇ ರೀತಿ ರಾಜ್ಯಪಾಲರ ಅಧಿಕಾರವು ನ್ಯಾಯಾಂಗದ ಪರಿಶೀಲನೆಯಿಂದ ಮುಕ್ತವಾಗಿದೆ. ಆದರೆ, ಸಾಂವಿಧಾನಿಕ ಕಚೇರಿಯು ದೀರ್ಘಕಾಲದವರೆಗೆ ಯಾವುದೇ ನಿರ್ಧಾರ ಕೈಗೊಳ್ಳಲು ವಿಫಲವಾದಾಗ ಆ ನಡೆ ನ್ಯಾಯಾಲಯದ ಸೀಮಿತ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ತಿಳಿಸಿದೆ.

ಇದೇ ವೇಳೆ ರಾಷ್ಟ್ರಪತಿಗಳು, ರಾಜ್ಯಪಾಲರ ಅಧಿಕಾರದ ಮೇಲೆ ನಿರ್ಬಂಧ ಹೇರುವುದು ಸಂವಿಧಾನ ವಿರೋಧಿಯಾಗಿದೆ ಎಂದ ಪಂಚ ಪೀಠವು, ಏ.8ರ ತೀರ್ಪಿನಂತೆ ಮೂರು ತಿಂಗಳವರೆಗೆ ವಿಧೇಯಕಗಳ ಕುರಿತು ರಾಜ್ಯಪಾಲರು ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ ಆ ವಿಧೇಯಕಗಳಿಗೆ ಸ್ವಯಂ ಆಗಿ ಒಪ್ಪಿಗೆ ಸಿಕ್ಕಂತೆ ಎಂದು ಆದೇಶಿಸುವುದು ಕಾರ್ಯಾಂಗದ ಅಧಿಕಾರದಲ್ಲಿ ನ್ಯಾಯಾಂಗ ಮಧ್ಯ ಪ್ರವೇಶಿಸಿದಂತೆ ಎಂದೂ ಅಭಿಪ್ರಾಯಪಟ್ಟಿದೆ.ತ.ನಾಡು ಪ್ರಕರಣದಲ್ಲಿ ತೀರ್ಪು:

ರಾಜ್ಯಪಾಲ ಆರ್‌.ಎನ್‌.ರವಿ ಅವರು ಸರ್ಕಾರ ಕಳುಹಿಸಿಕೊಟ್ಟ ಅನೇಕ ವಿಧೇಯಕಗಳನ್ನು ಹಲವು ತಿಂಗಳಿಂದ ತಡೆದಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ನ್ಯಾ. ಜೆ.ಬಿ.ಪರ್ದಿವಾಲಾ ಅವರ ನೇತೃತ್ವದ ಪೀಠವು ಏ.18ರಂದು ರಾಜ್ಯಪಾಲರು, ರಾಷ್ಟ್ರಪತಿಗಳಿಗೆ ಮೂರು ತಿಂಗಳ ಕಾಲಮಿತಿ ನಿಗದಿಪಡಿಸಿ ತೀರ್ಪು ನೀಡಿತ್ತು.

ಕೋರ್ಟ್‌ ಹೇಳಿದ್ದೇನು?-

ಆಡಳಿತದ ವಿಚಾರಕ್ಕೆ ಬಂದರೆ ಚುನಾಯಿತ ಸರ್ಕಾರವೇ ಚಾಲಕನ ಸೀಟಿನಲ್ಲಿರಬೇಕು. ಇಬ್ಬಿಬ್ಬರು ಅಲ್ಲ

- ವಿಧೇಯಕಗಳನ್ನು ರಾಷ್ಟ್ರಪತಿಗಳಿಗೆ ಕಳುಹಿಸುವುದು ಅಡ್ಡಿ ಉಂಟು ಮಾಡುವ ಅಸ್ತ್ರವಾಗಬಾರದು

- ಯಾವುದೇ ವಿಧೇಯಕ ವಿಚಾರದಲ್ಲಿ ರಾಜ್ಯಪಾಲರಿಗೆ ಸಂವಿಧಾನದತ್ತವಾಗಿ ಮೂರು ಆಯ್ಕೆಗಳಿರುತ್ತವೆ

- ಅಂಗೀಕರಿಸಬೇಕು, ಇಲ್ಲಾ ಸರ್ಕಾರಕ್ಕೆ ವಾಪಸ್‌ ಕಳಿಸಬೇಕು ಅಥವಾ ರಾಷ್ಟ್ರಪತಿಗಳಿಗೆ ಕಳಿಸಬೇಕು

ಈ ವಿಚಾರದಲ್ಲಿ ಅವರಿಗೆ ಕಾಲಮಿತಿ ನಿಗದಿಪಡಿಸಲು ಆಗುವುದಿಲ್ಲ. ಇದು ಕಾರ್ಯಾಂಗಕ್ಕೆ ಅತಿಕ್ರಮಿಸಿದಂತೆ

- ಶಾಸಕಾಂಗದ ವಿಚಾರದಲ್ಲಿ ನ್ಯಾಯಾಂಗ ತಲೆ ಹಾಕುವುದಿಲ್ಲ. ಆದರೆ ಅನಗತ್ಯ ವಿಳಂಬವಾದರೆ ಪರಿಶೀಲನೆ

ಏನಿದು ಪ್ರಕರಣ?

- ತಮಿಳುನಾಡು ಸರ್ಕಾರ ಕಳುಹಿಸಿದ ಮಸೂದೆಗಳಿಗೆ ಸಹಿ ಹಾಕದೆ ಇಟ್ಟುಕೊಂಡಿದ್ದ ರಾಜ್ಯಪಾಲರು

- ಇದರ ವಿರುದ್ಧ ಸುಪ್ರೀಂಗೆ ಸರ್ಕಾರ. ರಾಷ್ಟ್ರಪತಿ, ರಾಜ್ಯಪಾಲರಿಗೆ 3 ತಿಂಗಳು ಕಾಲಮಿತಿ ಹೇರಿದ್ದ ಸುಪ್ರೀಂ

- ಏ.8ರ ತೀರ್ಪಿನ ಕುರಿತು 14 ಪ್ರಶ್ನೆ ಕೇಳಿ ರಾಷ್ಟ್ರಪತಿಗಳಿಂದಲೇ ಸುಪ್ರೀಂಕೋರ್ಟ್‌ಗೆ ಸೂಚನೆ

- ಪಂಚ ಸದಸ್ಯಪೀಠದಿಂದ ವಿಚಾರಣೆ. ಕಾಲಮಿತಿ ಹೇರಲು ಸಾಧ್ಯವಿಲ್ಲ ಎಂದು ಘೋಷಿಸಿದ ನ್ಯಾಯಪೀಠ

Read more Articles on