ಸಾರಾಂಶ
ಪೀಠದ ಮೇಲೆ ಶೂ ಎಸೆದ ರಾಕೇಶ ಕಿಶೋರ್ ಎಂಬ ವಕೀಲ ಭಾರತ ಸಂವಿಧಾನವನ್ನು ಅಪಮಾನ ಮಾಡಿದ್ದಾನೆ.
ಹೊಸಪೇಟೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಪೀಠದ ಮೇಲೆ ಶೂ ಎಸೆದ ವಿಕೃತ ಘಟನೆಯನ್ನು ಖಂಡಿಸಿ ಹಾಗೂ ಶೂ ಎಸೆದ ಆರೋಪಿಯನ್ನು ಬಂಧಿಸಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಡಿ.ಜಿ. ಸಾಗರಬಣ)ದ ವತಿಯಿಂದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ರವಾನಿಸಿದರು.
ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಪೀಠದ ಮೇಲೆ ಶೂ ಎಸೆದ ರಾಕೇಶ ಕಿಶೋರ್ ಎಂಬ ವಕೀಲ ಭಾರತ ಸಂವಿಧಾನವನ್ನು ಅಪಮಾನ ಮಾಡಿದ್ದಾನೆ. ಇದು ನ್ಯಾಯಾಂಗ ವ್ಯವಸ್ಥೆಗೆ ಹಾಗೂ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದ್ದು, ಇಂತಹ ಮನುವಾದಿಯನ್ನು ದೇಶದಿಂದ ಗಡಿಪಾರು ಮಾಡಬೇಕು. ಈತನನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಇಂತಹ ವಿಕೃತ ಘಟನೆಯನ್ನು ದಸಂಸ ಇದನ್ನು ತೀವ್ರವಾಗಿ ಖಂಡಿಸುತ್ತದೆ. ಶೂ ಎಸೆದ ಆರೋಪಿ ಮನುವಾದಿಯನ್ನು ಎಲ್ಲ ಪ್ರಗತಿಪರ ಸಂಘಟನೆಗಳು, ನಾಗರಿಕರು ತೀವ್ರವಾಗಿ ದೇಶಾದ್ಯಂತ ಖಂಡಿಸುತ್ತಿದ್ದು, ಈತನ ಮೇಲೆ ಕೇಸ್ ದಾಖಲಿಸಿ ದೇಶದಿಂದ ಗಡಿಪಾರು ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ಬದ್ದಿ ಮರಿಸ್ವಾಮಿ, ಜಿಲ್ಲಾ ಸಂಘಟನಾ ಸಂಚಾಲಕ ಎಚ್.ಸೋಮಶೇಖರ್, ಮುಖಂಡರಾದ ಎಚ್.ನಾಗಪ್ಪ, ಕೊಟಾಲ್ ವೀರೇಶ್, ಶೇಖರ್ ಕೋಡಲ್, ಉದಯಕುಮಾರ್ ಎಚ್.ಆರ್. ಹಾರುವನಹಳ್ಳಿ ಲಕ್ಷ್ಮಣ, ಎಚ್.ನಾಗರಾಜ, ಹುಲುಗಪ್ಪ, ಬಿಸರಹಳ್ಳಿ ತಿಪ್ಪೇಸ್ವಾಮಿ, ಓಬಳೇಶ, ಗುಡ್ಲ ಕೊಟ್ರೇಶ್, ರಮೇಶ, ವಿಷ್ಣು, ಪಲ್ಲೆಕಟ್ಟೆ ಶಿವರಾಜ, ಹನುಮಂತ ಅಮರಾವತಿ, ಎಚ್.ಪರಶುರಾಮ, ಸೋಮಣ್ಣ ಚಿಲಕನಹಟ್ಟಿ, ಹನುಮಂತಪ್ಪ ನಂದಿಬಂಡಿ, ಎಲ್.ಸೋಮನಾಥ ಇದ್ದರು.