ಐಟಿ ರಿಟರ್ನ್ಸ್ ಸಲ್ಲಿಕೆಗೆ ನಾಳೆ ಕೊನೆಯ ದಿನ

| Published : Sep 14 2025, 01:04 AM IST

ಸಾರಾಂಶ

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಸೆ.15 ಕೊನೆಯ ದಿನವಾಗಿದೆ. ಸೆ.15 ನಂತರ ಪಾವತಿಯಾಗುವ ತೆರಿಗೆ ರಿಟರ್ನ್ಸ್‌ಗೆ ದಂಡವಿಧಿಸಲಾಗುವುದು. ಹೀಗಾಗಿ ಆದಷ್ಟು ಶೀಘ್ರ ತೆರಿಗೆ ರಿಟರ್ನ್ಸ್‌ ಪಾವತಿಸುವಂತೆ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಮನವಿ ಮಾಡಿದೆ.

ಈವರೆಗೆ 6 ಕೋಟಿಗೂ ಹೆಚ್ಚು ಐಟಿಆರ್‌ ಸಲ್ಲಿಕೆ

ಉಳಿದವರು ಶೀಘ್ರ ಸಲ್ಲಿಸಿ: ಐಟಿ ಇಲಾಖೆ ಮನವಿ

ಪಿಟಿಐ ನವದೆಹಲಿ

ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಸೆ.15 ಕೊನೆಯ ದಿನವಾಗಿದೆ. ಸೆ.15 ನಂತರ ಪಾವತಿಯಾಗುವ ತೆರಿಗೆ ರಿಟರ್ನ್ಸ್‌ಗೆ ದಂಡವಿಧಿಸಲಾಗುವುದು. ಹೀಗಾಗಿ ಆದಷ್ಟು ಶೀಘ್ರ ತೆರಿಗೆ ರಿಟರ್ನ್ಸ್‌ ಪಾವತಿಸುವಂತೆ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಮನವಿ ಮಾಡಿದೆ.

ಅಲ್ದೆ, ದೇಶದಲ್ಲಿ ಈಗಾಗಲೇ 6 ಲಕ್ಷಕ್ಕೂ ಹೆಚ್ಚು ಮಂದಿ 2025-26ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಿದ್ದಾರೆ ಎಂದಿರುವ ಅದು ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಧನ್ಯವಾದ ಸಲ್ಲಿಸಿದೆ ಹಾಗೂ ‘ಐಟಿ ರಿಟರ್ನ್ಸ್‌ಗೆ ಸಂಬಂಧಿಸಿದ ಯಾವುದೇ ಗೊಂದಲ, ಸಮಸ್ಯೆಗಳನ್ನು ಪರಿಹರಿಸಲು ವಾರದ 24 ಗಂಟೆ ಕಾರ್ಯನಿರ್ವಹಿಸುವ ಹೆಲ್ಪ್‌ಡೆಸ್ಕ್‌ ಅನ್ನೂ ಸ್ಥಾಪಿಸಲಾಗಿದೆ ಎಂದು ತಿಳಿಸಿದೆ.

ನೇರ ಕರೆ, ಲೈವ್‌ ಚಾಟ್‌, ವೆಬ್‌ಎಕ್ಸ್‌ ಸೆಷನ್ಸ್‌ಗಳು ಮತ್ತು ಎಕ್ಸ್‌ ಮೂಲಕವೂ ತೆರಿಗೆದಾರರಿಗೆ ಇಲಾಖೆಯು ತೆರಿಗೆ ರಿಟರ್ನ್ಸ್‌ ಪಾವತಿಗೆ ಸಂಬಂಧಿಸಿ ನೆರವು ನೀಡಲಾಗುತ್ತಿದೆ ಎಂದು ಹೇಳಿದೆ.

==

ವಕ್ಫ್‌ ಕಾಯ್ದೆ: ನಾಳೆ ಸುಪ್ರೀಂ ಮಧ್ಯಂತರ ಆದೇಶ

ಕಾಯ್ದೆಯಲ್ಲಿ 3 ವಿವಾದಾತ್ಮಕ ಅಂಶ

ಇವುಗಳ ಬಗ್ಗೆ ಮಧ್ಯಂತರ ಆದೇಶ

ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ತನ್ನ ಮಧ್ಯಂತರ ಆದೇಶವನ್ನು ಪ್ರಕಟಿಸಲಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು, 3 ದಿನಗಳ ಸತತ ವಾದಗಳ ನಂತರ ಮೇ 22 ರಂದು ಮಧ್ಯಂತರ ಆದೇಶವನ್ನು ಕಾಯ್ದಿರಿಸಿತ್ತು. ಅದಾಗಿ 4 ತಿಂಗಳ ನಂತರ ತನ್ನ ಮಧ್ಯಂತರ ತೀರ್ಮಾನ ಪ್ರಕಟ ಮಾಡಲಿದೆ.

ವಿಚಾರಣೆಯ ವೇಳೆ ಸುಪ್ರೀಂ ಕೋರ್ಟಲ್ಲಿ ಕಾಯ್ದೆ ಬಗ್ಗೆ 3 ಪ್ರಮುಖ ವಿಷಯಗಳು ಪ್ರಸ್ತಾಪ ಆಗಿದ್ದವು. ಈಗಾಗಲೇ ವಕ್ಫ್‌ ಎಂದು ಘೋಷಿತವಾದ ಆಸ್ತಿಗಳನ್ನು ಡೀನೋಟಿಫೈ ಮಾಡಬಹುದೆ? ವಕ್ಫ್‌ ಆಸ್ತಿ ಕುರಿತು ನಿರ್ಣಯಿಸುವ ಅಧಿಕಾರವನ್ನು ತಿದ್ದುಪಡಿ ಕಾಯ್ದೆಯಲ್ಲಿ ಜಿಲ್ಲಾಧಿಕಾರಿಗೆ ನೀಡಿದ್ದು ಸರಿಯೆ? ವಕ್ಫ್‌ ಮಂಡಳಿಗಳಲ್ಲಿ ಮುಸ್ಲಿಮೇತರರೂ ಅವಕಾಶ ನೀಡಿದ್ದು ಸರಿಯೇ? ಎಂಬುವೇ ಈ 3 ವಿಷಯಗಳಾಗಿದ್ದವು. ಇವುಗಳ ಬಗ್ಗೆ ಕೋರ್ಟು ಮಧ್ಯಂತರ ಆದೇಶ ಪ್ರಕಟಿಸುವ ನಿರೀಕ್ಷೆ ಇದೆ.ವಿವಿಧ ಮುಸ್ಲಿಂ ಸಂಘಟನೆಗಳು, ಮುಖಂಡರು ಹಾಗೂ ರಾಜಕೀಯ ನಾಯಕರು ತಿದ್ದುಪಡಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

==

ಪರಿಶೀಲನಾ ಸಭೆಯಲ್ಲಿ ರಾಗಾ, ಬಿಜೆಪಿ ಸಚಿವ ನಡುವೆ ಜಟಾಪಟಿ

ರಾಯ್‌ಬರೇಲಿ: ಇಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ(ದಿಶಾ) ಸಭೆಯಲ್ಲಿ ಅದರ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಉತ್ತರಪ್ರದೇಶದ ಬಿಜೆಪಿ ಸಚಿವ ದಿನೇಶ್‌ ಪ್ರತಾಪ್‌ ಸಿಂಗ್‌ ಅವರ ನಡುವೆ ಮಾತಿನ ಜಟಾಪಟಿ ನಡೆದಿದೆ.ಸಭೆ ವೇಳ ಸಚಿವ ಸಿಂಗ್‌ ಯಾವುದೋ ವಿಷಯದ ಬಗ್ಗೆ ಮಾತನಾಡತೊಡಗಿದಾಗ ಅವರನ್ನು ತಡೆದ ರಾಹುಲ್‌, ‘ನಾನು ಈ ಸಭೆಯ ಅಧ್ಯಕ್ಷತೆ ವಹಿಸಿದ್ದೇನೆ. ಆದ್ದರಿಂದ ಏನೇ ಹೇಳುವುದಿದ್ದರೂ ಮೊದಲು ನನ್ನಲ್ಲಿ ಕೇಳಿ. ನಾನು ಅನುಮತಿಸಿದ ಬಳಿಕ ಮಾತಾಡಿ’ ಎಂದರು. ಇದರಿಂದ ಕುಪಿತರಾದ ಸಿಂಗ್‌, ಲೋಕಸಭೆ ಕಲಾಪದ ವೇಳೆ ರಾಹುಲ್‌ ಸ್ಪೀಕರ್‌ ಮಾತಿಗೆ ಬೆಲೆ ಕೊಡದೆ ಮಾತಾಡುವುದನ್ನು ಉಲ್ಲೇಖಿಸಿ ತಿರುಗೇಟಿತ್ತರು. ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

==

ಬ್ರಿಟನ್‌ನಲ್ಲಿ ಸಿಖ್‌ ಮಹಿಳೆ ಮೇಲೆ ರೇಪ್‌ , ಜನಾಂಗೀಯ ನಿಂದನೆ

ನಿನ್ನ ದೇಶಕ್ಕೆ ಹೋಗು ಎಂದು ಮೂದಲಿಸಿದ ದುಷ್ಕರ್ಮಿಗಳು

ಲಂಡನ್‌: ಬ್ರಿಟನ್‌ನಲ್ಲಿ ಪುರುಷರಿಬ್ಬರು, 20ರ ಹರೆಯದ ಸಿಖ್‌ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ. ‘ನಿನ್ನ ದೇಶಕ್ಕೆ ಮೊದಲು ಹೋಗು’ ಎಂದು ಜನಾಂಗೀಯ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ.ಇಲ್ಲಿನ ಬರ್ಮಿಂಗ್‌ಹ್ಯಾಮ್‌ ಸಮೀಪದ ಓಲ್ಡ್‌ಬರಿ ಪಟ್ಟಣದಲ್ಲಿ ಸೆ.9ರಂದು ಈ ಘಟನೆ ನಡೆದಿದೆ. ಮಹಿಳೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಮುಂದುವರೆಸಿದ್ದಾರೆ. ಇನ್ನು ಸಂತ್ರಸ್ತೆಯು ಆರೋಪಿಗಳ ವಿರುದ್ಧ ಜನಾಂಗೀಯ ನಿಂದನೆ ಆರೋಪವನ್ನೂ ಹೊರಿಸಿದ್ದಾರೆ.

‘ನೀನು ನಮ್ಮ ದೇಶದವಳಲ್ಲ. ಇಲ್ಲಿಂದ ಹೋಗು ಎಂದು ಅತ್ಯಾಚಾರಿಗಳು ಕೂಗಿದ್ದಾರೆ’ ಆಕೆ ದೂರಿದ್ದಾರೆ. ಇದು ಸಿಖ್‌ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಆಕ್ರೋಶ ವ್ಯಕ್ತಪಡಿಸಿವೆ.ಘಟನೆ ಬಗ್ಗೆ ಬ್ರಿಟನ್‌ನ ಲೇಬರ್‌ ಪಕ್ಷದ ಸಂಸದೆ ಪ್ರೀತ್‌ ಕೌರ್‌ ಗಿಲ್‌ ಕಿಡಿ ಕಾರಿದ್ದು, ‘ಇದು ತೀವ್ರ ಹಿಂಸೆ ಮತ್ತು ಜನಾಂಗೀಯತೆಯ ಕೃತ್ಯ. ಬ್ರಿಟನ್‌ನಲ್ಲಿ ಎಲ್ಲಿಯೂ ಇದಕ್ಕೆ ಮತ್ತು ಸ್ತ್ರೀ ದ್ವೇಷಕ್ಕೆ ಸ್ಥಾನವಿಲ್ಲ’ ಎಂದು ಹೇಳಿದ್ದಾರೆ.

==

ಮಳೆಯಿಂದ ಸ್ಥಗಿತವಾಗಿದ್ದ ವೈಷ್ಣೋದೇವಿ ಯಾತ್ರೆ ಮತ್ತೆ ಮುಂದೂಡಿಕೆ

ಜಮ್ಮು: ಮಳೆ ಹಾಗೂ ಭೂಕುಸಿತದಿಂದಾಗಿ ಸ್ಥಗಿತಗೊಂಡಿದ್ದ ಮಾತಾ ವೈಷ್ಣೋದೇವಿ ಯಾತ್ರೆಯನ್ನು ಭಾನುವಾರದಿಂದ ಪುನಾರಂಭ ಮಾಡಲಾಗುವುದು ಎಂದು ತಿಳಿಸಿದ್ದ ದೇಗುಲದ ಆಡಳಿತ ಮಂಡಳಿ, ನಿರಂತರ ಮಳೆಯ ಕಾರಣದಿಂದ ಮುಂದಿನ ಆದೇಶದವರೆಗೂ ಪುನಾರಂಭವನ್ನು ಮತ್ತೆ ಮುಂದೂಡಿರುವುದಾಗಿ ಶನಿವಾರ ತಿಳಿಸಿದೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ತಿಂಗಳು ಭಾರೀ ಮಳೆ ಮತ್ತು ಭೂಕುಸಿತ ಉಂಟಾಗಿ ಆ.26ರಂದು ವೈಷ್ಣೋದೇವಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ವಾತಾವರಣ ಉತ್ತಮಗೊಂಡಿರುವುದರಿಂದ ಭಾನುವಾರದಿಂದ ಪುನಃ ಆರಂಭಿಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿತ್ತು. ಆದರೆ ಮತ್ತೆ ವಿಪರೀತ ಮಳೆ ಸುರಿಯುತ್ತಿರುವುದಿಂದ ಪುನಾರಂಭವನ್ನು ಮುಂದೂಡಲಾಗಿದೆ. ಭಕ್ತರು ಮಾಹಿತಿಗಾಗಿ ದೇವಸ್ಥಾನದ ಅಧಿಕೃತ ವೆಬ್‌ಸೈಟ್‌ ತಾಣವನ್ನು ಸಂಪರ್ಕಿಸುತ್ತಿರಬೇಕೆಂದು ಮಂಡಳಿ ಮನವಿ ಮಾಡಿದೆ.