ಸಾರಾಂಶ
ಹುಬ್ಬಳ್ಳಿ: ದುಂಬಿ ಹೇಗೆ ಹೂವಿಗೆ ಹಾನಿಯಾಗದಂತೆ ಮಕರಂದ ಹೀರುತ್ತದೆಯೋ ಅದೇ ರೀತಿಯಲ್ಲಿ ತೆರಿಗೆ ಸಲಹೆಗಾರರು ತೆರಿಗೆ ಪಾವತಿದಾರರಿಗೆ ಹಾನಿಯಾಗದಂತೆ ಪಾವತಿಸುವ ಶೈಲಿ ರೂಢಿಸಿಕೊಳ್ಳುವಂತೆ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಸ್. ಮಿರ್ಜಾ ಅಜಮತ್ ಉಲ್ಲಾ ಹೇಳಿದರು.
ಇಲ್ಲಿನ ಕೊಪ್ಪಿಕರ ರಸ್ತೆಯ ಸೆಟ್‌ಲೈಟ್ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಕೆಎಸ್‌ಟಿಪಿಎ ಹೊಂಬಳ ಸಭಾ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ಹಿಂದೆ ದೇಶದಲ್ಲಿ ಒಂದು ದೇಶ ಒಂದು ತೆರಿಗೆ ಪದ್ಧತಿ ಜಾರಿ ಮಾಡಿದಾಗ ಎಲ್ಲೆಡೆ ಸಂತಸವಿತ್ತು. ಜತೆಗೆ ಅನೇಕ ಗೊಂದಲಗಳೂ ಇದ್ದವು. ಕಾಲಕ್ರಮೇಣ ಇಲಾಖೆ ಈ ಗೊಂದಲಗಳನ್ನು ನಿವಾರಿಸಿದೆ. ಅಲ್ಲದೆ, ಇತ್ತೀಚಿಗೆ ತೆರಿಗೆ ಪಾವತಿ ವಿಧಾನವನ್ನು ಮತ್ತಷ್ಟು ಸರಳೀಕರಣಗೊಳಿಸಿದೆ ಎಂದರು.
ತೆರಿಗೆ ಸಲಹೆದಾರರು ಕಾಲಕ್ಕೆ ತಕ್ಕಂತೆ ಮತ್ತು ವಾಣಿಜ್ಯ ತೆರಿಗೆಯಲ್ಲಿ ಆಗುವ ಬದಲಾವಣೆಗಳನ್ನು ಅರಿತು ತಮ್ಮ ಗ್ರಾಹಕರ ತೆರಿಗೆ ಸಂಬಂಧಿತ ಕೆಲಸಗಳನ್ನು ಮಾಡಬೇಕು. ಯಾವುದೇ ಕಾರಣಕ್ಕೂ ತೆರಿಗೆ ಪಾವತಿದಾರರಿಗೆ ಹಾನಿಯಾಗದಂತೆ ಮತ್ತು ತಪ್ಪು ಮಾಹಿತಿ ನೀಡದಂತೆ ಅವರು ಕಿವಿಮಾತು ಹೇಳಿದರು.ಇದೇ ವೇಳೆ ಪಾವಗಡ ಶಾಸಕ ಎಚ್.ವಿ. ವೆಂಕಟೇಶ ಮಾತನಾಡಿ, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೆಲ ಅಧಿಕಾರಿಗಳು ಸುಖಾ ಸುಮ್ಮನೆ ತೆರಿಗೆ ಪಾವತಿದಾರರಿಗೆ ನೋಟಿಸ್ ನೀಡುವುದು ಸೇರಿ ಕಿರಿಕಿರಿ ಮಾಡುತ್ತಾರೆ. ಅವರ ಸಂಪೂರ್ಣ ಮಾಹಿತಿ ಪಡೆಯುವ ಮೂಲಕ ತೆರಿಗೆ ಪಾವತಿದಾರರಿಗೆ ಆಗುವ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸದ್ಯ ಆರಂಭವಾಗಿರುವ ಹೊಂಬಳ ಭವನದ ಗ್ರಂಥಾಲಯಕ್ಕೆ ₹2 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ತೆರಿಗೆದಾರರು ಮತ್ತು ಸರ್ಕಾರದ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ತೆರಿಗೆ ಸಹಲಹೆಗಾರರು ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಅವರ ಸಂಘದ ಕಾರ್ಯಕರ್ತರಿಗೆ ಏರ್ಪಡಿಸುವ ಕಾರ್ಯಾಗಾರಗಳಿಗೆ ಅಗತ್ಯ ಸಹಕಾರ ಕಲ್ಪಿಸಲಾಗುವುದು. ಅಲ್ಲದೆ, ಗ್ರಂಥಾಲಯಕ್ಕೆ ₹10 ಲಕ್ಷ ಅನುದಾನ ನೀಡುವುದಾಗಿಯೂ ಅವರು ಭರವಸೆ ನೀಡಿದರು.ಎಐಎಫ್‌ಟಿಪಿ ರಾಷ್ಟ್ರೀಯ ಉಪಾಧ್ಯಕ್ಷ ಸಿಎ ಎಸ್. ವೆಂಕಟರಮಣಿ ಮಾತನಾಡಿ, ತೆರಿಗೆ ಸಲಹೆಗಾರರ ಸಂಘದ ಸ್ಥಾಪನೆಗೆ ಮೂಲಪುರುಷರಾದ ಹೊಂಬಾಳೆ ಅವರ ಹೆಸರಲ್ಲಿ ಸಭಾ ಭವನ ನಿರ್ಮಿಸಿರುವುದು ಹೆಮ್ಮೆಯ ಸಂಗತಿ. ಇಲ್ಲಿ ತಿಂಗಳಿಗೆ ಕನಿಷ್ಠ ಎರಡಾದರೂ ತರಬೇತಿ ಮತ್ತು ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ತರಬೇತಿ ನೀಡಲು ನಾನು ಸಿದ್ಧ. ಆ ಮೂಲಕ ಎಲ್ಲ ತೆರಿಗೆ ಸಲಹೆಗಾರರಿಗೆ ಇದೊಂದು ಜ್ಞಾನದ ಖಣಜವಾಗಲಿ ಎಂದು ಹಾರೈಸಿದರು.
ಸಮುದಾಯ ಭವನ: ಕೆಎಸ್‌ಟಿಪಿಎ ಹೊಂಬಳ ಸಭಾ ಭವನವನ್ನು ಮೂರುಸಾವಿರು ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಭಾಭವನಕ್ಕೆ ಧನಸಹಾಯ ಮಾಡಿದವರನ್ನು ಮತ್ತು ಅತಿಥಿಗಳನ್ನು ಸನ್ಮಾನಿಸಲಾಯಿತು. ಕೆಎಸ್‌ಟಿಪಿಎ ರಾಜ್ಯಾಧ್ಯಕ್ಷ ಎಸ್. ನಂಜುಂಡಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮುಕುಂದ ಪೋತ್ನಿಸ್, ರಾಘವೇಂದ್ರ ಹುಬ್ಳೀಕರ್, ರವೀಂದ್ರ ಶೆಟ್ಟಿ, ಅರವಿಂದ ಲಿಂಬಿಕಾಯಿ, ಕೆ.ಸಿ, ಆನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸೋಮಲಿಂಗಪ್ಪ ಸೋಲಾರಗೊಪ್ಪ ನಿರೂಪಿಸಿದರು.