ಎಥೆನಾಲ್‌ ವಿಷಯದಲ್ಲಿ ನನ್ನ ವಿರುದ್ಧ ಅಪಪ್ರಚಾರ: ಗಡ್ಕರಿ

| Published : Sep 12 2025, 12:07 AM IST

ಸಾರಾಂಶ

ಕೇಂದ್ರದ ಎಥೆನಾಲ್‌ ಮಿಶ್ರಿತ ಇಂಧನ ಬಿಡುಗಡೆಯ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿರುವ ನಡುವೆಯೇ ‘ಈ ವಿಚಾರದಲ್ಲಿ ಹಣ ನೀಡಿ ನನ್ನ ಬಗ್ಗೆ ರಾಜಕೀಯ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಈಗ ಅದೆಲ್ಲ ಸುಳ್ಳು ಎನ್ನುವುದು ಸಾಬೀತಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಹಣ ಕೊಟ್ಟು ಅಪಪ್ರಚಾರ ಮಾಡಲಾಗುತ್ತಿತ್ತು: ಸಚಿವ ಕಿಡಿ

ನವದೆಹಲಿ: ಕೇಂದ್ರದ ಎಥೆನಾಲ್‌ ಮಿಶ್ರಿತ ಇಂಧನ ಬಿಡುಗಡೆಯ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿರುವ ನಡುವೆಯೇ ‘ಈ ವಿಚಾರದಲ್ಲಿ ಹಣ ನೀಡಿ ನನ್ನ ಬಗ್ಗೆ ರಾಜಕೀಯ ಅಪಪ್ರಚಾರ ಮಾಡಲಾಗುತ್ತಿದೆ. ಆದರೆ ಈಗ ಅದೆಲ್ಲ ಸುಳ್ಳು ಎನ್ನುವುದು ಸಾಬೀತಾಗಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.ಇ20 ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಕೆಲವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಜಾ ಬೆನ್ನಲ್ಲೇ ಕಾರ್ಯಕ್ರಮವೊಂದರಲ್ಲಿ ಬಗ್ಗೆ ಮಾತನಾಡಿದ ಅವರು, ‘ಕೈಗಾರಿಕೆಗಳು ಹೇಗೆ ಕೆಲಸ ಮಾಡುತ್ತವೆಯೋ ಅದೇ ರೀತಿ ರಾಜಕೀಯ ಕೂಡ. ನನ್ನ ವಿರುದ್ಧ ಹಣ ನೀಡಿ ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಲಾಯಿತು. ರಾಜಕೀಯವಾಗಿ ಟಾರ್ಗೆಟ್‌ ಮಾಡಲಾಯಿತು. ಆದರೆ ಅದರಲ್ಲಿ ಯಾವುದೇ ಸತ್ಯವಿಲ್ಲ. ಎಲ್ಲವೂ ಸ್ಪಷ್ಟವಾಗಿದೆ. ಎಲ್ಲಾ ಪರೀಕ್ಷಾ ಸಂಸ್ಥೆಗಳು ಎಥೆನಾಲ್ ಮಿಶ್ರಿತ ಇಂಧನದಿಂದ ಯಾವುದೇ ಸಮಸ್ಯೆಯಿಲ್ಲ ಎಂದು ಖಚಿತ ಪಡಿಸಿವೆ’ ಎಂದು ಹೇಳಿದರು.

ಇದಲ್ಲದೆ, ಹಳೆಯ ಕಾರನ್ನು ಸ್ಕ್ರಾಪ್‌ಗೆ ಹಾಕಿ ಹೊಸ ಕಾರು ಖರೀದಿಸುವವರಿಗೆ ಜಿಎಸ್ಟಿ ವಿನಾಯ್ತಿ ನೀಡಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಆಗ್ರಹಿಸಿದರು. ಅಲ್ಲದೆ, ಖಾಸಗಿ ಕಾರಿನಂತೆ ಟ್ರಕ್‌, ಬಸ್‌ಗಳಿಗೂ ವಾರ್ಷಿಕ ಟೋಲ್‌ ಪಾಸ್ ಆರಂಭಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.ಗಡ್ಕರಿ ಅವರ ಪುತ್ರನೇ ಎಥೆನಾಲ್‌ ಉದ್ಯಮ ನಡೆಸುತ್ತಾರೆ. ಹೀಗಾಗಿ ಅವರ ಲಾಭಕ್ಕೋಸ್ಕರ ಗಡ್ಕರಿ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಪರ ಬ್ಯಾಟ್‌ ಬೀಸುತ್ತಿದ್ದಾರೆ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು.

==

ಇನ್ಫಿಯಿಂದ 18 ಸಾವಿರ ಕೋಟಿ ರು. ಷೇರು ಮರುಖರೀದಿ

ನವದೆಹಲಿ: ಐಟಿ ಸೇವೆಗಳ ದೈತ್ಯ ಇನ್ಫೋಸಿಸ್ ಗುರುವಾರ ತನ್ನ ಇದುವರೆಗಿನ ಅತಿದೊಡ್ಡ 18,000 ಕೋಟಿ ರು. ಮೌಲ್ಯದ ಷೇರು ಮರುಖರೀದಿಗೆ ಅನುಮೋದನೆ ನೀಡಿದೆ. ಇನ್ಫೋಸಿಸ್ ಒಟ್ಟು ಈಕ್ವಿಟಿ ಷೇರು ಬಂಡವಾಳದ ಶೇ. 2.41ರಷ್ಟು ಪ್ರತಿನಿಧಿಸುವ ತಲಾ ₹5 ಮುಖಬೆಲೆಯ 10 ಕೋಟಿ ಷೇರುಗಳು ಇವಾಗಿದ್ದು, ಇವನ್ನು ಪ್ರತಿ ಷೇರಿಗೆ ₹ 1,800ರಂತೆ ಖರೀದಿಸಲಿದೆ. ಇದು ಗುರುವಾರದ ಸೆನ್ಸೆಕ್ಸ್‌ ಮುಕ್ತಾಯದ ಬೆಲೆಗಿಂತ ಶೇ.19ರಷ್ಟು ಹೆಚ್ಚಿನ ಪ್ರೀಮಿಯಂ ಅನ್ನು ಪ್ರತಿಬಿಂಬಿಸುತ್ತದೆ.

==

ಇಂದು ರಾಧಾಕೃಷ್ಣನ್‌ ಉಪರಾಷ್ಟ್ರಪತಿಯಾಗಿ ಶಪಥ

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಎನ್‌ಡಿಎ ಕೂಟದ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್‌ ಅವರು ಶುಕ್ರವಾರ ದೇಶದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಈಗಾಗಲೇ ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿರುವ ಅವರು ರಾಷ್ಟ್ರಪತಿ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲು ಕಾರ್ಯಕ್ರಮದಲ್ಲಿ ಶಪಥ ಸ್ವೀಕರಿಸಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಲಿದ್ದಾರೆ.

ಮಂಗಳವಾರ ನಡೆದ ಚುನಾವಣೆಯಲ್ಲಿ ರಾಧಾಕೃಷ್ಣನ್‌ ಅವರು ಇಂಡಿಯಾ ಕೂಟದ ಅಭ್ಯರ್ಥಿ ಬಿ. ಸುದರ್ಶನ್‌ ರೆಡ್ಡಿ ಅವರ ವಿರುದ್ಧ 152 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.ದೇವವ್ರತ ಮಹಾ ಹಂಗಾಮಿ ಗೌರ್ನರ್:

ಈ ನಡುವೆ ಗುಜರಾತ್‌ ರಾಜ್ಯಪಾಲ ಆಚಾರ್ಯ ದೇವವ್ರತ್‌ ಅವರನ್ನು ಮಹಾರಾಷ್ಟ್ರ ಹೆಚ್ಚುವರಿ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಿಸಿದ್ದಾರೆ.

==

ಐಶ್‌ ಫೋಟೋ, ಹೆಸರು ಅಕ್ರಮ ಬಳಕೆಗೆ ನಿರ್ಬಂಧ

ದಿಲ್ಲಿ ಹೈಕೋರ್ಟ್ ಮಹತ್ವದ ಆದೇಶ

ಇಂಥ ಎಲ್ಲ ಅಂಶ ತೆಗೆದು ಹಾಕಲು ಸೂಚನೆ

ಪಿಟಿಐ ನವದೆಹಲಿಹೆಸರು, ಫೋಟೋ ದುರ್ಬಳಕೆಗೆ ತಡೆ, ಪ್ರಚಾರ ಮತ್ತು ವ್ಯಕ್ತಿತ್ವದ ಹಕ್ಕುಗಳ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದ ನಟಿ ಐಶ್ವರ್ಯ ರೈಗೆ ನ್ಯಾಯಾಲಯದಲ್ಲಿ ಗೆಲುವು ದೊರೆತಿದೆ, ಆನ್‌ಲೈನ್ ವೇದಿಕೆಗಳು ವಾಣಿಜ್ಯ ಲಾಭಕ್ಕಾಗಿ ಅವರ ಹೆಸರು, ಚಿತ್ರಗಳನ್ನು ಅಕ್ರಮವಾಗಿ ಬಳಸುವುದನ್ನು ನಿಷೇಧಿಸಿದೆ.

ಐಶ್‌ ದೂರಿನ ವಿಚಾರಣೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ತೇಜಸ್‌ ಕರಿಯಾ, ‘ಪ್ರಸಿದ್ಧ ವ್ಯಕ್ತಿಯ ಗುರುತನ್ನು ಅವರ ಒಪ್ಪಿಗೆ ಅಥವಾ ಅನುಮತಿಯಿಲ್ಲದೆ ಬಳಸಿದಾಗ, ಅದು ಸಂಬಂಧಪಟ್ಟ ವ್ಯಕ್ತಿಗೆ ವಾಣಿಜ್ಯಿಕವಾಗಿ ಹಾನಿ ಉಂಟುಮಾಡುತ್ತದೆ. ಅವರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಜತೆಗೆ ಘನತೆಯಿಂದ ಬದುಕುವ ಅವರ ಹಕ್ಕನ್ನು ದುರ್ಬಲಗೊಳಿಸುತ್ತದೆ’ ಎಂದಿತು,ಇದೇ ವೇಳೆ ಕೋರ್ಟ್‌ ಇಂತಹ ಘಟನೆಗಳನ್ನು ನೋಡಿಕೊಂಡು ನ್ಯಾಯಾಲಯ ಕಣ್ಣು ಮುಚ್ಚಿಕೊಂಡು ಇರಲು ಸಾಧ್ಯವಿಲ್ಲ ಎಂದು ಕಳವಳ ವ್ಯಕ್ತಪಡಿಸಿತು. ಜತೆಗೆ ಮುಂದಿನ 72 ಗಂಟೆಗಳಲ್ಲಿ ಐಶ್ವರ್ಯ ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದ ಲಿಂಕ್‌ಗಳನ್ನು ತೆಗೆದು ಹಾಕುವಂತೆ ಗೂಗಲ್‌ಗೆ ಸೂಚಿಸಿತು.

==

ಪಂಜಾಬ್ ಪ್ರವಾಹ ಸಂತ್ರಸ್ತರಿಗೆ ರಿಲಯನ್ಸ್‌ ಸಹಾಯ ಹಸ್ತ

ಚಂಡೀಗಢ: ಪಂಜಾಬ್‌ನಲ್ಲಿ ಸಂಭವಿಸಿದ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಲು ರಿಲಯನ್ಸ್ ಕಂಪನಿಯು ಕಳೆದ ಹಲವಾರು ದಿನಗಳಿಂದ ರಾಜ್ಯದ ಆಡಳಿತ, ಪಂಚಾಯತ್‌ಗಳು ಮತ್ತು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದೆ. ಪ್ರವಾಹ ಸಂತ್ರಸ್ತ 10,000 ಕ್ಕೂ ಹೆಚ್ಚು ಕುಟುಂಬಗಳಿಗೆ ಪಡಿತರ ಕಿಟ್‌ಗಳನ್ನು ನೀಡಲಾಗುತ್ತಿದೆ. ಮಹಿಳೆಯರು ಅಥವಾ ವೃದ್ಧರನ್ನು ಒಳಗೊಂಡಿರುವ 1,000 ಕುಟುಂಬಗಳಿಗೆ 5,000 ರು.ಗಳ ವೋಚರ್‌ ನೀಡಲಾಗುತ್ತಿದೆ. ಸುರಕ್ಷಿತ ಕುಡಿಯುವ ನೀರಿಗಾಗಿ ಪೋರ್ಟಬಲ್ ವಾಟರ್ ಫಿಲ್ಟರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ಅಗತ್ಯ ಪರಿಹಾರ ಸಾಮಗ್ರಿಗಳಾದ ಟಾರ್ಪಾಲಿನ್‌ಗಳು, ಸೊಳ್ಳೆ ಪರದೆಗಳು, ಹಗ್ಗಗಳು ಮತ್ತು ಹಾಸಿಗೆಗಳನ್ನು ವಿತರಿಸಲಾಗುತ್ತಿದೆ.