ಪರೇಶ್‌ ರಾವಲ್‌ ನಿರ್ಮಾಣದ ಮುಂದಿನ ಸಿನಿಮಾ ‘ ದಿ ತಾಜ್‌ ಸ್ಟೋರಿ ’ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಅದರಲ್ಲಿ ಅದರಲ್ಲಿ ತಾಜ್‌ ಮಹಲ್‌ ಗುಮ್ಮಟದಿಂದ ಶಿವನ ವಿಗ್ರಹ ಹೊರಗೆ ಬರುತ್ತಿರುವುದು ಚಿತ್ರಿತವಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ: ಪರೇಶ್‌ ರಾವಲ್‌ ನಿರ್ಮಾಣದ ಮುಂದಿನ ಸಿನಿಮಾ ‘ ದಿ ತಾಜ್‌ ಸ್ಟೋರಿ ’ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಅದರಲ್ಲಿ ಅದರಲ್ಲಿ ತಾಜ್‌ ಮಹಲ್‌ ಗುಮ್ಮಟದಿಂದ ಶಿವನ ವಿಗ್ರಹ ಹೊರಗೆ ಬರುತ್ತಿರುವುದು ಚಿತ್ರಿತವಾಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಹಿಂದೂ ದೇವಾಲಯವಿದ್ದ ಸ್ಥಳದಲ್ಲಿ ತಾಜ್‌ ನಿರ್ಮಿಸಲಾಗಿದೆ ಎನ್ನುವ ವಾದ ಹಲವು ಸಮಯಗಳಿಂದಲೂ ಇದೆ. ಇದರ ನಡುವೆಯೇ ಪರೇಶ್‌ ಸಿನಿಮಾ ಹೊಸ ವಿವಾದ ಹುಟ್ಟುಹಾಕಿದೆ. ಟೀಕೆಗಳ ಬೆನ್ನಲ್ಲೇ ನಿರ್ಮಾಪಕ ಪರೇಶ್‌ ಸಿನಿಮಾದ ಮೂಲ ಪೋಸ್ಟರ್‌ ಜಾಲತಾಣದಿಂದ ಡಿಲೀಟ್‌ ಮಾಡಿದ್ದಾರೆ. ಮುಂದುವರೆದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಿತ್ರತಂಡ, ‘ಸಿನಿಮಾ ಯಾವುದೇ ಧಾರ್ಮಿಕ ವಿಷಯಗಳನ್ನು ಬಿಂಬಿಸುವುದಿಲ್ಲ. ತಾಜ್‌ ಮಹಲ್‌ ಒಳಗೆ ಶಿವ ದೇವಾಲಯವಿದೆ ಎಂದು ಹೇಳುವುದಿಲ್ಲ. ಕೇವಲ ಐತಿಹಾಸಿಕ ಸಂಗತಿಗಳ ಮೇಲೆ ಕೇಂದ್ರೀಕರಿಸುತ್ತದೆ’ ಎಂದಿದ್ದಾರೆ.

==

ಗಾಂಧೀ ಜಯಂತಿಗೂ ಮುನ್ನ ಲಂಡನ್‌ನಲ್ಲಿ ಗಾಂಧಿ ಪ್ರತಿಮೆ ವಿರೂಪ

ಲಂಡನ್‌: ಮಹಾತ್ಮ ಗಾಂಧಿ ಜನ್ಮದಿನಕ್ಕೆ ಕೇವಲ ಎರಡು ದಿನಗಳು ಬಾಕಿ ಇರುವ ಹೊತ್ತಲ್ಲೇ ಲಂಡನ್‌ನ ಟ್ಯಾವಿಸ್ಟಾಕ್‌ ಸ್ಕೇರ್‌ನಲ್ಲಿರುವ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ಪ್ರತಿಮೆಯ ಮೇಲೆ ದುಷ್ಕರ್ಮಿಗಳು ಗೀಚುಬರಹಗಳನ್ನು ಕೆತ್ತಿ ಗಾಂಧಿ ಪ್ರತಿಮೆಗೆ ಹಾನಿ ಮಾಡಿದ್ದಾರೆ. ಘಟನೆ ಖಂಡಿಸಿ ಜಾಲತಾಣದಲ್ಲಿ ಟ್ವೀಟ್‌ ಮಾಡಿರುವ ಭಾರತೀಯ ಹೈಕಮಿಷನರ್‌, ‘ ಇದೊಂದು ನಾಚಿಕೆಗೇಡಿನ ಕೃತ್ಯ. ಇದು ಕೇವಲ ವಿಧ್ವಂಸಕ ಕೃತ್ಯವಲ್ಲ. ಗಾಂಧಿಯವರ ಮೇಲೆ ನಡೆದ ಹಿಂಸಾತ್ಮಕ ದಾಳಿ’ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಭಾರತೀಯ ಹೈಕಮಿಷನರ್‌ ಸ್ಥಳೀಯ ಅಧಿಕಾರಿಗಳ ನೆರವಿನಿಂದ ಪ್ರತಿಮೆಯ ಪುನರ್‌ನಿರ್ಮಾಣಕ್ಕೆ ಕೆಲಸ ಮಾಡುತ್ತಿದೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

==

ಬೆಟ್ಟಿಂಗ್‌ ಆ್ಯಪ್‌ ಕೇಸ್‌: ಇ.ಡಿ. ವಿಚಾರಣೆಗೆ ನಟಿ ಊರ್ವಶಿ ಹಾಜರ್‌

ನವದೆಹಲಿ: 1xbet ಬೆಟ್ಟಿಂಗ್ ಆ್ಯಪ್‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ್ಯಪ್‌ ಪರ ಪ್ರಚಾರ ನಡೆಸಿದ್ದ ಕನ್ನಡ ಸೇರಿ ಹಲವು ಭಾಷೆಗಳಲ್ಲಿ ನಟಿಸಿದ್ದ ನಟಿ ಊರ್ವಶಿ ರೌಟೇಲಾ ಅವರು ಇ.ಡಿ ತನಿಖೆಗೆ ಹಾಜರಾಗಿ ವಿಚಾರಣೆ ಎದುರಿಸಿದರು. ಸಮನ್ಸ್ ಹಿನ್ನೆಲೆ ಅವರು ಜಾರಿ ನಿರ್ದೇಶಾನಲಯ ಅಧಿಕಾರಿಗಳ ಮುಂದೆ ಹಾಜರಾದರು. ಈ ಆ್ಯಪ್‌ನ ಭಾರತದ ರಾಯಭಾರಿಯಾಗಿರುವ ಊರ್ವಶಿ ಅವರನ್ನು ಪ್ರಕರಣದ ಬಗ್ಗೆಗಿನ ನಂಟಿನ ಬಗ್ಗೆ ಇ.ಡಿ ಕೆಲವು ಪ್ರಶ್ನೆಗಳನ್ನು ಕೇಳಿದೆ ಎನ್ನಲಾಗಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ರಾಬಿನ್‌ ಉತ್ತಪ್ಪ, ಶಿಖರ್‌ ಧವನ್, ಯುವರಾಜ್ ಸಿಂಗ್. ಮಿಮಿ ಚಕ್ರವರ್ತಿ ಸೇರಿದಂತೆ ಹಲವು ಖ್ಯಾತ ನಾಮರ ವಿಚಾರಣೆ ನಡೆಸಿತ್ತು. ಅಲ್ಲದೇ ಅವರ ಆಸ್ತಿ ಜಪ್ತಿ ಕುರಿತು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

==

ದೆಹಲಿ ಬಿಜೆಪಿ ಮೊದಲ ಅಧ್ಯಕ್ಷ, ಸಿಂಗ್‌ ಮಣಿಸಿದ್ದ ಮಲ್ಹೋತ್ರಾ ನಿಧನ

ನವದೆಹಲಿ: ದೆಹಲಿ ಬಿಜೆಪಿಯ ಮೊದಲ ಅಧ್ಯಕ್ಷ, 5 ಬಾರಿಯ ಸಂಸದ, ಆರ್‌ಎಸ್‌ಎಸ್‌ ಕಟ್ಟಾಳು ವಿಜಯ್ ಕುಮಾರ್‌ ಮಲ್ಹೋತ್ರಾ (94) ಅನಾರೋಗ್ಯದಿಂದ ಮಂಗಳವಾರ ನಿಧನರಾದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ ಕೆಲ ದಿನಗಳಿಂದ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1972- 75ರವರೆಗೆ ದೆಹಲಿಯಲ್ಲಿ ಭಾರತೀಯ ಜನ ಸಂಘದ ಅಧ್ಯಕ್ಷರಾಗಿದ್ದ ಮಲ್ಹೋತ್ರಾ, 1980ರಲ್ಲಿ ಬಿಜೆಪಿ ಸ್ಥಾಪನೆಯಾದಾಗ ದೆಹಲಿಯ ಮೊದಲ ಅಧ್ಯಕ್ಷರಾಗಿದ್ದರು. 5 ಬಾರಿ ಸಂಸದರಾಗಿ, 2 ಸಲ ಶಾಸಕರಾದ ಅನಭವ ಹೊಂದಿದ್ದರು. 1999ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮನ್‌ಮೋಹನ್‌ ಸಿಂಗ್‌ ಅವರನ್ನು ಭರ್ಜರಿ ಸೋಲಿಸಿದ ಹೆಗ್ಗಳಿಕೆ ಇವರದ್ದು. ವಿಜಯ್‌ ಕುಮಾರ್‌ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.