ಸಾರಾಂಶ
ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಕಾರಣ ಕರೂರಿಗೆ ಹೋಗ್ಲಿಲ್ಲ
ಶೀಘ್ರವೇ ಮಡಿದವರ ಕುಟುಂಬಗಳ ಸದಸ್ಯರ ಭೇಟಿ ಮಾಡುವೆಚೆನ್ನೈ: ತಮ್ಮ ರ್‍ಯಾಲಿ ವೇಳೆ ಭಾರೀ ಕಾಲ್ತುಳಿತ ಸಂಭವಿಸಿ 41 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೊದಲ ಬಾರಿ ಮಾತನಾಡಿರುವ ದಳಪತಿ ವಿಜಯ್, ‘ನನಗೆ ಏನು ಬೇಕಾದರೂ ಮಾಡಿಕೊಳ್ಳಿ. ಆದರೆ ಪಕ್ಷದವರ ತಂಟೆಗೆ ಬರಬೇಡಿ’ ಎಂದು ನೇರವಾಗಿ ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೇ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ವಿಜಯ್, ‘ನಾವು 5 ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯಕ್ರಮ ಮಾಡಿದೆವು. ಆದರೆ ಕರೂರಲ್ಲಿ ಮಾತ್ರ ಕಾಲ್ತುಳಿತ ಏಕಾಯಿತು? ಜನ ಇದನ್ನು ನೋಡುತ್ತಿದ್ದಾರೆ ಹಾಗೂ ಅವರಿಗೆ ಸತ್ಯ ಗೊತ್ತಿದೆ. ಮುಖ್ಯಮಂತ್ರಿಯವರೇ, ನಿಮಗೆ ಪ್ರತೀಕಾರ ತೀರಿಸಿಕೊಳ್ಳಬೇಕಿದ್ದರೆ ನನಗೆ ಏನು ಬೇಕಾದರೂ ಮಾಡಿ. ಆದರೆ ನನ್ನ ಪಕ್ಷದವರನ್ನು ಮುಟ್ಟಬೇಡಿ. ನಾನು ಮನೆಯಲ್ಲೋ, ಕಚೇರಿಯಲ್ಲೋ ಇರುತ್ತೇನೆ. ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಕಾಲ್ತುಳಿತ ಹಿಂದೆ ರಾಜಕೀಯ ಸಂಚು ನಡೆದಿದೆ ಎಂದು ಪರೋಕ್ಷವಾಗಿ ಹೇಳುತ್ತಾ ಸ್ಟಾಲಿನ್ ಅವರಿಗೆ ನೇರವಾಗಿ ಸವಾಲೆಸೆದಿದ್ದಾರೆ.ಹಲವರ ಸಾವು ಸಂಭವಿಸಿದ ಹೊರತಾಗಿಯೂ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳದ್ದಕ್ಕೆ ಕೇಳಿಬರುತ್ತಿರುವ ಭಾರೀ ಟೀಕೆ ಪ್ರತಿಕ್ರಿಯಿಸುತ್ತಾ, ‘ನನ್ನ ಭೇಟಿಯಿಂದ ಕರೂರಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯಿತ್ತು. ಹಾಗಾಗಿ ನಾನಲ್ಲಿಗೆ ಹೋಗಲಿಲ್ಲ. ಇಂತಹ ನೋವಿನ ಸನ್ನಿವೇಶವನ್ನು ಜೀವನದಲ್ಲೇ ನೋಡಿರಲಿಲ್ಲ. ಸಂತ್ರಸ್ತರು ಮತ್ತು ಅವರ ಕುಟುಂಬವನ್ನು ಭೇಟಿಯಾಗುತ್ತೇನೆ’ ಎಂದು ವಿಜಯ್ ಹೇಳಿದ್ದಾರೆ. ಜತೆಗೆ, ‘ಆ ದುರ್ಘಟನೆಗೆ ಕಾರಣವೇನೆಂಬುದು ಆದಷ್ಟು ಬೇಗ ತನಿಖೆಯಿಂದ ಬಯಲಾಗುತ್ತದೆ. ಅದರ ಪರಿಣಾಮ ಎದುರಿಸಲು ಸಿದ್ಧನಿದ್ದೇನೆ. ನನ್ನ ರಾಜಕೀಯ ಜೀವನ ಹೊಸ ಚೈತನ್ಯದೊಂದಿಗೆ ಮುಂದುವರೆಯಲಿದೆ’ ಎಂದರು.
==ಎನ್‌ಡಿಎ ನಿಯೋಗದಿಂದ ಸತ್ಯಶೋಧನೆ
- ಗಾಯಾಳುಗಳ ಭೇಟಿಯಾದ ತೇಜಸ್ವಿ ಸೂರ್ಯ, ಹೇಮಾಕರೂರು: 41 ಜನರ ಬಲಿ ಪಡೆದ ಕರೂರು ಕಾಲ್ತುಳಿತ ದುರಂತದ ಸತ್ಯಶೋಧನೆಗೆ ರಚಿತವಾದ 8 ಮಂದಿ ಎನ್‌ಡಿಎ ಸಂಸದರ ನಿಯೋಗ ಮಂಗಳವಾರ ಸ್ಥಳಕ್ಕೆ ತೆರಳಿ ಪರಿಶೋಧನೆ ನಡೆಸಿತು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ನಿಯೋಗದ ಮುಖ್ಯಸ್ಥೆ ಹೇಮಮಾಲಿನಿ ಸೇರಿ ನಿಯೋಗದ ಹಲವು ಸದಸ್ಯರು ಕರೂರು ಸರ್ಕಾರಿ ಆಸ್ಪತ್ರೆಗೆ ತೆರಳಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ನಿಯೋಗದ ಮುಖ್ಯಸ್ಥೆ ಹೇಮಾ ಮಾಲಿನಿ, ‘ಜನರು ಚರಂಡಿಗಳಿಗೆ ಕುಸಿದು, ಇನ್ನೊಬ್ಬರ ಮೇಲೆ ಬಿದ್ದು ಸಾವನ್ನಪ್ಪಿದ್ದರು. ಇದು ತುಂಬಾ ದುಃಖಕರ. ರಾಜಕೀಯ ರ್‍ಯಾಲಿಗಳನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು ಮತ್ತು ಪೂರ್ತಿ ಭದ್ರತೆಯನ್ನು ಒದಗಿಸಬೇಕು. ಆಡಳಿತ ಎಚ್ಚರ ವಹಿಸಬೇಕಿತ್ತು, ಆದರೆ ಅದು ವಿಫಲವಾಯಿತು’ ಎಂದರು.
==ತ.ನಾಡಲ್ಲಿ ನೇಪಾಳ ರೀತಿ ಜೆನ್-ಝಿ ದಂಗೆಗೆ ಟಿವಿಕೆ ನಾಯಕ ಕರೆ: ಆಕ್ರೋಶ
ಚೆನ್ನೈ: ವಿಜಯ್ ರ್‍ಯಾಲಿಯಲ್ಲಿ ನಡೆದ ಕಾಲ್ತುಳಿತದಿಂದಾಗಿ ಟಿವಿಕೆ ಪಕ್ಷ ಇಕ್ಕಟ್ಟಿಗೆ ಸಿಲುಕಿರುವ ನಡುವೆಯೇ ಪಕ್ಷದ ಹಿರಿಯ ನಾಯಕ ಅಧವ್ ಅರ್ಜುನ್ ತಮಿಳುನಾಡಲ್ಲೂ ಜೆನ್ ಝಿ ಹೋರಾಟಕ್ಕೆ ಕರೆ ನೀಡಿದ್ದು, ಭಾರೀ ಟೀಕೆಗೆ ಕಾರಣವಾಗಿದೆ.ಕಾಲ್ತುಳಿತ ಘಟನೆಯ ಬಗ್ಗೆ ಪೊಲೀಸರನ್ನು ದೂಷಿಸಿ ಮಾತನಾಡಿರುವ ಅರ್ಜುನ್ ‘ಪೊಲೀಸರು ಸರ್ಕಾರದ ಸೇವಕರಾಗಿದ್ದಲ್ಲಿ, ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಶ್ರೀಲಂಕಾ ಮತ್ತು ನೇಪಾಳದಲ್ಲಿ ನಡೆದಂತೆ ತಮಿಳುನಾಡಿನಲ್ಲೂ ಜೆನ್ ಝಿ ದಂಗೆ ಆಗಬೇಕು’ ಎಂದು ಅವರು ಪೋಸ್ಟ್ ಮಾಡಿದ್ದರು. ಬಳಿಕ ಅದನ್ನು ಡಿಲೀಟ್ ಮಾಡಿದರಾದರೂ, ಪಕ್ಷದಿಂದ ಅವರನ್ನು ಉಚ್ಛಾಟಿಸುವಂತೆ ಆಡಳಿತಾರೂಢ ಡಿಎಂಕೆ ಆಗ್ರಹಿಸುತ್ತಿದೆ.ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಎ.ರಾಜಾ ಪ್ರತಿಕ್ರಿಯಿಸಿ, ‘ರಾಷ್ಟ್ರೀಯ ಸರಾಸರಿಗಿಂತ ತಮಿಳುನಾಡಿನ ಬೆಳವಣಿಗೆ ದರ ಉತ್ತಮವಾಗಿದೆ. ಆದರೆ ಅರ್ಜುನ್, ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆಯಾಗುವಂತ ಪೋಸ್ಟ್ ಮಾಡಿದ್ದರು. ಜನರಿಂದ ಆಕ್ರೋಶ ವ್ಯಕ್ತವಾಗಿದ್ದರಿಂದ ತೆಗೆದುಹಾಕಿದರು’ ಎಂದು ಕಿಡಿಕಾರಿದ್ದಾರೆ. ಜತೆಗೆ, ವಿಜಯ್ ಪ್ರತಿಕ್ರಿಯೆಗೂ ಆಗ್ರಹಿಸಿದ್ದಾರೆ.