ಕಾಂಗ್ರೆಸ್‌ ಗೆದ್ದರೆ ನಿಮ್ಮ ಆಸ್ತಿ ಜಪ್ತಿ ಮಾಡಿ ಎಲ್ಲರಿಗೂ ಹಂಚುತ್ತೆ: ಮೋದಿ

| Published : Apr 23 2024, 12:49 AM IST / Updated: Apr 23 2024, 07:30 AM IST

ಕಾಂಗ್ರೆಸ್‌ ಗೆದ್ದರೆ ನಿಮ್ಮ ಆಸ್ತಿ ಜಪ್ತಿ ಮಾಡಿ ಎಲ್ಲರಿಗೂ ಹಂಚುತ್ತೆ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ಜನರು ಉಳಿತಾಯ ಮಾಡಿದ ಹಣ, ಮಹಿಳೆಯರ ಮಂಗಳಸೂತ್ರದ ಮೇಲೂ ಕಣ್ಣಿಟ್ಟಿದ್ದಾರೆ. ನಿಮ್ಮ ಸಂಪಾದನೆ, ಆಸ್ತಿ ಬಗ್ಗೆ ತನಿಖೆ ನಡೆಸುವುದಾಗಿ ‘ಶೆಹಜಾದಾ’ ಈಗಾಗಲೇ ಹೇಳಿದ್ದಾರೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ಸಿಗರ ವಿರುದ್ಧ ಕಿಡಿ ಕಾರಿದ್ದಾರೆ.

ನವದೆಹಲಿ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ಜೀವಿತಾವಧಿಯ ಉಳಿತಾಯವನ್ನು ಕಸಿದುಕೊಳ್ಳಲು ಸಂಪತ್ತು ಸಮೀಕ್ಷೆ ನಡೆಸಲಿದೆ. ಬಳಿಕ ಆ ಆಸ್ತಿಯನ್ನು ಎಲ್ಲರಿಗೂ ಹಂಚಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾನುವಾರದ ಆರೋಪವನ್ನು ಪುನರುಚ್ಚರಿಸಿದ್ದಾರೆ.

ಉತ್ತರ ಪ್ರದೇಶದ ಅಲಿಗಢದಲ್ಲಿ ಸೋಮವಾರ ಬಿಜೆಪಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್‌ ನಿಮ್ಮ ಉಳಿತಾಯದ ಹಣದ ಮೇಲೂ ಕಣ್ಣಿಟ್ಟು ಅದನ್ನು ಕಸಿದುಕೊಳ್ಳಲಿದೆ. ಕಾಂಗ್ರೆಸ್ ಆಡಳಿತದಲ್ಲಿ ನಿಮ್ಮ ಮಂಗಳಸೂತ್ರ ಹಾಗೂ ನಿಮ್ಮ ಮನೆಯೂ ಸುರಕ್ಷಿತವಾಗಿರುವುದಿಲ್ಲ’ ಎಂದರು. ಆದರೆ ಭಾನುವಾರದಂತೆ ತಮ್ಮ ಭಾಷಣದಲ್ಲಿ ಅವರು ಯಾವುದೇ ಜಾತಿ-ಧರ್ಮದ ಹೆಸರು ಹೇಳಲಿಲ್ಲ.ಪ್ರಣಾಳಿಕೆಯಲ್ಲೇ ಇದೆ:

‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ, ತಾಯಿ ಮತ್ತು ಸಹೋದರಿಯರ ಚಿನ್ನವನ್ನು ಲೆಕ್ಕ ಹಾಕಿ ಅದರ ಬಗ್ಗೆ ಮಾಹಿತಿ ಪಡೆದು ನಂತರ ಆ ಆಸ್ತಿಯನ್ನು ಹಂಚುವುದಾಗಿ ಹೇಳಲಾಗಿದೆ. ಹೀಗಾಗಿ ನಾನು ನನ್ನ ದೇಶವಾಸಿಗಳಿಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಕಾಂಗ್ರೆಸ್ ಮತ್ತು ಭಾರತ ಮೈತ್ರಿಕೂಟವು ನಿಮ್ಮ ಗಳಿಕೆ ಮತ್ತು ನಿಮ್ಮ ಆಸ್ತಿಯ ಮೇಲೆ ಕಣ್ಣಿಟ್ಟಿದೆ. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಯಾರು ಎಷ್ಟು ಸಂಪಾದಿಸುತ್ತಾರೆ, ಯಾರು ಎಷ್ಟು ಆಸ್ತಿ ಹೊಂದಿದ್ದಾರೆಂದು ತನಿಖೆ ನಡೆಸುತ್ತೇವೆ ಎಂದು ಕಾಂಗ್ರೆಸ್‌ನ ‘ಶೆಹಜಾದಾ’ (ರಾಹುಲ್‌ ಗಾಂಧಿ) ಹೇಳುತ್ತಾರೆ.

 ಚಿನ್ನವನ್ನು ನಮ್ಮ ತಾಯಂದಿರು ಮತ್ತು ಸಹೋದರಿಯರ ಪಾಲಿಗೆ ‘ಸ್ತ್ರೀ ಧನ’ ಎಂದು ಪರಿಗಣಿಸಲಾಗಿದೆ, ಕಾನೂನು ಕೂಡ ಚಿನ್ನವನ್ನು ರಕ್ಷಿಸುತ್ತದೆ. ಆದರೆ ಈಗ ಅವರ (ಕಾಂಗ್ರೆಸ್‌) ದೃಷ್ಟಿಯು ನಿಮ್ಮ ಮಂಗಳಸೂತ್ರದ ಮೇಲೆ ಬಿದ್ದಿದೆ. ಅವರ ಉದ್ದೇಶವು ತಾಯಿ ಮತ್ತು ಸಹೋದರಿಯರ ಚಿನ್ನವನ್ನು ಕದಿಯುವುದು’ ಎಂದು ಮೋದಿ ವಾಗ್ದಾಳಿ ನಡೆಸಿದರು.‘ನಿಮ್ಮ ಗ್ರಾಮದಲ್ಲಿ ಪೂರ್ವಿಕರ ಮನೆ ಇದ್ದರೆ ಮತ್ತು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನಿಮ್ಮ ನಗರದಲ್ಲಿ ಒಂದು ಸಣ್ಣ ಫ್ಲಾಟ್ ಖರೀದಿಸಿದರೆ, ಅವರು ಎರಡರಲ್ಲಿ ಒಂದನ್ನು ಕಸಿದುಕೊಳ್ಳುತ್ತಾರೆ. ಇದು ಮಾವೋವಾದಿ ಚಿಂತನೆ, ಇದು ಕಮ್ಯುನಿಸ್ಟರ ಚಿಂತನೆ. ಹೀಗೆ ಮಾಡುವುದರಿಂದ ಅವರು ಈಗಾಗಲೇ ಅನೇಕ ದೇಶಗಳನ್ನು ಹಾಳು ಮಾಡಿದ್ದಾರೆ, ಈಗ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟವು ಅದೇ ನೀತಿಯನ್ನು ಭಾರತದಲ್ಲಿ ಜಾರಿಗೆ ತರಲು ಬಯಸಿದೆ’ ಎಂದು ಹಿಗ್ಗಾಮುಗ್ಗಾ ಟೀಕಿಸಿದರು.ಮೊನ್ನೆ ಏನೆಂದಿದ್ದರು?:

‘ರಾಜಸ್ಥಾನದ ಬನ್ಸ್‌ವಾರಾದಲ್ಲಿ ಭಾನುವಾರ ಸಂಜೆ ಮಾತನಾಡಿದ್ದ ಮೋದಿ, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುವ ಉದ್ದೇಶ ಹೊಂದಿದೆ. ಅದರಂತೆ ತಾಯಂದಿರ ಚಿನ್ನ, ಮಂಗಳಸೂತ್ರವನ್ನೂ ಕಿತ್ತುಕೊಳ್ಳಲಿದೆ. ಈ ಚಿನ್ನವನ್ನು ಒಳ ನುಸುಳುಕೋರರು ಹಾಗೂ ಹೆಚ್ಚು ಮಕ್ಕಳ ಹೆರುವವರಿಗೆ ನೀಡಲಿದೆ. ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಂ ಸಮುದಾಯಕ್ಕೆ ಮೊದಲ ಹಕ್ಕು ಇದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 2006ರಲ್ಲೇ ಹೇಳಿದ್ದು ಇದಕ್ಕೆ ಉದಾಹರಣೆ’ ಎಂದಿದ್ದರು.