ಸೂರ್ಯಶಕ್ತಿ ಯೋಜನೆಗೆ 1 ಕೋಟಿ ನೋಂದಣಿ: ಮೋದಿ

| Published : Mar 17 2024, 01:46 AM IST / Updated: Mar 17 2024, 08:08 AM IST

ಸಾರಾಂಶ

ಹಲವು ರಾಜ್ಯಗಳಲ್ಲಿ 5 ಲಕ್ಷಕ್ಕೂ ಅಧಿಕ ನೋಂದಣಿಯಾಗಿದ್ದು, ರಾಷ್ಟ್ರದ ಒಟ್ಟು ನೋಂದಣಿ ಸಂಖ್ಯೆ 1 ಕೋಟಿ ದಾಟಿರುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.

ನವದೆಹಲಿ: ಪ್ರತಿಯೊಬ್ಬರ ಮನೆಯ ಮೇಲೂ ಸೌರಶಕ್ತಿ ಉತ್ಪಾದಿಸಿ ವಿದ್ಯುತ್‌ ಅವಲಂಬನೆಯನ್ನು ತಗ್ಗಿಸುವ ಮಹತ್ವಾಕಾಂಕ್ಷೆಯೊಂದಿಗೆ ಆರಂಭಿಸಲಾಗಿದ್ದ ಪ್ರಧಾನಮಂತ್ರಿ-ಸೂರ್ಯಘರ್‌-ಮಫ್ತ್‌ ಬಿಜ್ಲಿ ಯೋಜನೆಗೆ ಒಂದು ಕೋಟಿಗೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ಸೂರ್ಯಘರ್‌ ಯೋಜನೆಯಲ್ಲಿ ಅಸ್ಸಾಂ, ಬಿಹಾರ್‌, ಗುಜರಾತ್‌, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ಉತ್ತರ ಪ್ರದೇಶದಲ್ಲಿ 5 ಲಕ್ಷಕ್ಕೂ ಅಧಿಕ ನೋಂದಣಿಯಾಗಿದೆ. 

ಅಲ್ಲದೆ ದೇಶದ ಮೂಲೆ ಮೂಲೆಯಿಂದಲೂ ಜನರು ನೋಂದಣಿಯಾಗಿ ಯೋಜನೆ ಜಾರಿಯಾದ ಒಂದು ತಿಂಗಳಲ್ಲೇ ಒಂದು ಕೋಟಿ ತಲುಪಿದೆ. ಇನ್ನೂ ನೋಂದಣಿ ಮಾಡಿಕೊಳ್ಳದವರು ಯೋಜನೆಗೆ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ. 

ಏನಿದು ಯೋಜನೆ?
ಪ್ರಧಾನಮಂತ್ರಿ ಫೆ.13ರಂದು ಸೂರ್ಯಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದರು. ಈ ಮೂಲಕ ಪ್ರತಿ ಮನೆಯ ಮೇಲೆ ಸೌರಶಕ್ತಿ ಉತ್ಪಾದನಾ ಘಟಕ ಅಳವಡಿಕೆಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. 

ಈ ಮೂಲಕ ತಿಂಗಳಿಗೆ 300 ಯೂನಿಟ್‌ವರೆಗೂ ಉಚಿತ ವಿದ್ಯುತ್‌ ಉತ್ಪಾದಿಸಿ ಬಳಸಿಕೊಂಡು, ಹೆಚ್ಚುವರಿ ವಿದ್ಯುತ್ತನ್ನು ಮಾರಬಹುದು. 

ಪ್ರಸ್ತುತ ಒಂದು ಕಿಲೋವ್ಯಾಟ್‌ ಸಾಮರ್ಥ್ಯದ ಘಟಕಕ್ಕೆ ಸರ್ಕಾರ 30 ಸಾವಿರ ರು, 2 ಕಿಲೋವ್ಯಾಟ್‌ ಸಾಮರ್ಥ್ಯದ ಘಟಕಕ್ಕೆ 60 ಸಾವಿರ ರು. ಮತ್ತು 3 ಕಿಲೊವ್ಯಾಟ್‌ ಸಾಮರ್ಥ್ಯದ ಘಟಕಕ್ಕೆ 78 ಸಾವಿರ ರು. ಸಹಾಯಧನ ನೀಡಲಾಗುತ್ತಿದೆ. 

ಸಾರ್ವಜನಿಕರು ಇದನ್ನು ಪೋರ್ಟಲ್‌ ಮೂಲಕ ನೋಂದಣಿ ಮಾಡಿಕೊಂಡು ಅದನ್ನು ಇನ್‌ಸ್ಟಾಲ್‌ ಮಾಡಲು ಡೀಲರ್‌ಗಳನ್ನೂ ಸಹ ಅಲ್ಲೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ.