ಸಾರಾಂಶ
ನವದೆಹಲಿ: ಖ್ಯಾತ ಸಾಹಿತಿ ಸಂಪೂರಣ್ ಸಿಂಗ್ ಕಾಲ್ರಾ (ಗುಲ್ಜಾರ್) ಮತ್ತು ಸಂಸ್ಕೃತ ಪಂಡಿತ ರಾಮಭದ್ರಾಚಾರ್ಯ ಅವರಿಗೆ 2023ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಯನ್ನು ಶುಕ್ರವಾರ ಪ್ರದಾನ ಮಾಡಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು, ಇಬ್ಬರಿಗೂ ಈ ಪ್ರಶಸ್ತಿ ಪ್ರದಾನ ಮಾಡಿದರು. ಗುಲ್ಜಾರ್ ಎಂದೇ ಜನಪ್ರಿಯರಾಗಿರುವ ಸಂಪೂರಣ್ ಸಿಂಗ್ ಕಾಲ್ರಾ ಹಿಂದಿ ಸಿನಿಮಾಗಳಿಗೆ ಅಪಾರ ಕೊಡುಗೆ ನೀಡಿದ್ದು, ಸಮಕಾಲೀನ ಶ್ರೇಷ್ಠ ಉರ್ದು ಕವಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಚಿತ್ರಕೂಟದ ‘ತುಳಸಿ ಪೀಠ’ದ ಸ್ಥಾಪಕರಾದ 75 ವರ್ಷದ ಜಗದ್ಗುರು ರಾಮಭದ್ರಾಚಾರ್ಯರು 4 ಮಹಾಕಾವ್ಯಗಳು ಸೇರಿದಂತೆ 240ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 82 ಮಂದಿ ಸಾವು
ಗಾಜಾ: ಗುರುವಾರ ಮಧ್ಯರಾತ್ರಿ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 82 ಜನರು ಸಾವನ್ನಪ್ಪಿದ್ದಾರೆ. ದೇರ್ ಅಲ್ ಬಲಾಹ್ ಮತ್ತು ಖಾನ್ ಯೂನಿಸ್ ನಗರ ಸೇರಿದಂತೆ ಗಾಜಾದಾದ್ಯಂತ ಗುರುವಾರ ರಾತ್ರಿಯಿಡೀ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ.
ಬಹಳಷ್ಟು ಶವಗಳು ದೊರೆತಿರುವ ಇಂಡೋನೇಷ್ಯನ್ ಆಸ್ಪತ್ರೆಯ ಪ್ರಕಾರ ಕನಿಷ್ಠ 66 ಜನರು ಸಾವನ್ನಪ್ಪಿದ್ದಾರೆ. ಇನ್ನೂ 16 ಶವಗಳನ್ನು ನಾಸರ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಹಲವರನ್ನು ಜಬಲಿಯಾ ಮತ್ತು ಬೀಟ್ ಲಹಿಯಾ ಪಟ್ಟಣದ ನಿರಾಶ್ರಿತರ ಶಿಬಿರಕ್ಕೆ ಕಳುಹಿಸಲಾಯಿತು ಎಂದು ಗಾಜಾದ ಆರೋಗ್ಯ ಸಚಿವಾಲಯ ಹೇಳಿದೆ.
ಟರ್ಕಿಗೆ ಇಂಡಿಗೋ ವಿಮಾನ ರದ್ದು: ಕೇಂದ್ರದ ಬಳಿ ಏರಿಂಡಿಯಾದ ಲಾಬಿ?
ನವದೆಹಲಿ: ಟರ್ಕಿ ದೇಶಕ್ಕೆ ಹೆಚ್ಚಿನ ವಿಮಾನ ಸಂಚಾರ ಹೊಂದಿರುವ ಇಂಡಿಗೋ ಸಂಸ್ಥೆಯ ವಿಮಾನ ಸಂಚಾರವನ್ನು ರದ್ದು ಮಾಡುವಂತೆ ಏರ್‌ಇಂಡಿಯಾ, ಕೇಂದ್ರ ಸರ್ಕಾರದ ಬಳಿ ಲಾಬಿ ಮಾಡುತ್ತಿದೆ ಎಂದು ವರದಿಗಳು ಹೇಳಿವೆ. ಬಾಯ್ಕಾಟ್ ಟರ್ಕಿ ಅಭಿಯಾನದ ಹೊರತಾಗಿಯೂ ಆ ದೇಶಕ್ಕೆ ವಿಮಾನ ಸಂಚಾರ ರದ್ದುಪಡಿಸುವ ಪ್ರಸ್ತಾಪ ಇಲ್ಲ. ಅದರಿಂದ ಭಾರತೀಯ ಪ್ರಯಾಣಿಕರಿಗೆ ಹೆಚ್ಚಿನ ಹೊರೆ ಇಲ್ಲ ಎಂದು ಇಂಡಿಗೋ ಹೇಳಿತ್ತು. ಅದರ ಬೆನ್ನಲ್ಲೇ ಏರ್ ಇಂಡಿಯಾ, ವಿಮಾನಯಾನ ಸಚಿವಾಲಯದ ಬಳಿ ಇಂಥದ್ದೊಂದು ಲಾಬಿ ಮಾಡಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಪಾಕ್ ಪರ ಗೂಢಚರ್ಯೆ: ಗುಜರಾತ್, ಹರ್ಯಾಣದಲ್ಲಿ ಇಬ್ಬರು ಗೂಢಚರರು ವಶಕ್ಕೆ
ಜಲಂಧರ್/ಪಾಣಿಪತ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಗೂಢಚರರನ್ನು ಗುಜರಾತ್‌ನ ಜಲಂಧರ್ ಮತ್ತು ಹರ್ಯಾಣದ ಪಾಣಿಪತ್‌ನಲ್ಲಿ ಬಂಧಿಸಲಾಗಿದೆ. ಗುಜರಾತ್‌ನಲ್ಲಿ ಸೆರೆ ಸಿಕ್ಕ ಆರೋಪಿಯನ್ನು ಮೊಹಮ್ಮದ್ ಮುರ್ತಾಜಾ ಅಲಿ ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನದ ಪರ ರಹಸ್ಯವಾಗಿ ಬೇಹುಗಾರಿಕೆ ನಡೆಸುತ್ತಿದ್ದ.
ಇತ್ತೀಚೆಗೆ ಪಾಕಿಸ್ತಾನದಲ್ಲಿ ಭಾರತೀಯ ಸುದ್ದಿವಾಹಿನಿ ಮತ್ತು ವೆಬ್‌ಸೈಟ್‌ಗಳ ಪ್ರಸಾರವನ್ನು ನಿರ್ಬಂಧಿಸಿದಾಗ, ಈತ ಭಾರತದ ಸುದ್ದಿವಾಹಿನಿಗಳನ್ನು ವೀಕ್ಷಿಸಿ, ಐಎಸ್‌ಐಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದ. ಈ ಕೆಲಸಗಳಿಗಾಗಿ ತಾನೇ ಸ್ವತಃ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಬಳಸುತ್ತಿದ್ದ.
ಇದಕ್ಕಾಗಿ ಐಎಸ್‌ಐ ಏಜೆಂಟ್‌ಗಳಿಂದ ಭಾರಿ ಹಣವನ್ನು ಕೇಳಿದ್ದ ಎನ್ನಲಾಗಿದೆ. ಇನ್ನು, ಪಾಣಿಪತ್‌ನಲ್ಲಿ ಬಂಧಿತನನ್ನು ಉತ್ತರ ಪ್ರದೇಶದ ಕೈರಾನಾದ ನೌಮನ್ ಇಲಾಹಿ (24) ಎಂದು ಗುರುತಿಸಲಾಗಿದ್ದು, ಈತ ಐಎಸ್‌ಐ ಏಜೆಂಟ್‌ನ ಸಂಪರ್ಕದಲ್ಲಿದ್ದ. ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಯನ್ನು ಪೂರೈಸುತ್ತಿದ್ದ ಎನ್ನಲಾಗಿದೆ.
ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: 180ರಲ್ಲಿ ಭಾರತಕ್ಕೆ 151ನೇ ಸ್ಥಾನ
ನವದೆಹಲಿ: ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಕಳೆದ ವರ್ಷ 159ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 151ನೇ ಸ್ಥಾನಕ್ಕೇರಿದೆ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಸಮೀಕ್ಷೆ ತಿಳಿಸಿದೆ. ‘ಭಾರತದಲ್ಲಿ ಸುಮಾರು 900 ಖಾಸಗಿ ಒಡೆತನದ ಟಿವಿ ಚಾನೆಲ್‌ಗಳಿವೆ. ಅವುಗಳಲ್ಲಿ ಅರ್ಧದಷ್ಟು ಕೇವಲ ಸುದ್ದಿಗಳಿಗೆ ಮೀಸಲಾಗಿವೆ.
ಸುಮಾರು 20,000 ದಿನಪತ್ರಿಕೆಗಳು ಸೇರಿದಂತೆ 1,40,000 ವಿವಿಧ ಪ್ರಕಾಶನಗಳು 20ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಟವಾಗುತ್ತಿವೆ. ದಿನಪತ್ರಿಕೆಗಳು 390 ಕೋಟಿ ಪ್ರತಿಗಳ ಒಟ್ಟು ಪ್ರಸರಣವನ್ನು ಹೊಂದಿವೆ. ಕಳೆದ ವರ್ಷ 159ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 151ನೇ ಸ್ಥಾನಕ್ಕೇರಿದ್ದು, ಪತ್ರಿಕಾ ಸ್ವಾತಂತ್ರ್ಯದಲ್ಲಿ ಪ್ರಗತಿ ಸಾಧಿಸಿದೆ’ ಎಂದು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಹೇಳಿದೆ.180 ದೇಶಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಆ ಪೈಕಿ ಫಿನ್ಲೆಂಡ್, ಎಸ್ಟೋನಿಯಾ ಮತ್ತು ನೆದರ್ಲೆಂಡ್ ಸ್ಥಾನ ಕುಸಿದಿದೆ.