ಸಾರಾಂಶ
ಏರ್‌ಫೋರ್ಸ್ ಒನ್ ಹಳೆಯದಾದ ಕಾರಣ ಉಡುಗೊರೆ
ಟ್ರಂಪ್ ಅವಧಿ ಬಳಿಕ ಮ್ಯೂಸಿಯಂ ಸೇರಲಿದೆ ಅರಮನೆವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಶ್ರೀಮಂತ ಕೊಲ್ಲಿ ದೇಶವಾದ ಕತಾರ್ 3400 ಕೋಟಿ ಮೌಲ್ಯದ ಐಷಾರಾಮಿ ವಿಮಾನವೊಂದನ್ನು ಉಡುಗೊರೆಯಾಗಿ ನೀಡಲು ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವಾರದ ಟ್ರಂಪ್ ಮಧ್ಯಪ್ರಾಚ್ಯ ದೇಶಗಳ ಪ್ರವಾಸದ ವೇಳೆ ಈ ವಿಮಾನ ಹಸ್ತಾಂತರಿಸುವ ಸಾಧ್ಯತೆ ಇದೆ.
ಉಡುಗೊರೆ ಏಕೆ?:ಹಾಲಿ ಅಮೆರಿಕ ಅಧ್ಯಕ್ಷರು ಬಳಸುವ ಏರ್‌ಫೋರ್ಸ್ 1 ಎಂದು ಕರೆಯುವ ವಿಮಾನ ಬಹಳ ಹಳೆಯದು. ಹೀಗಾಗಿ ಹೊಸ ವಿಮಾನ ಖರೀದಿಗೆ ಟ್ರಂಪ್ ತಾವು ಮೊದಲ ಅವಧಿಗೆ ಅಧ್ಯಕ್ಷರಾಗಿದ್ದಾಗಲೇ ಬೇಡಿಕೆ ಸಲ್ಲಿಸಿದ್ದರು. ಆದರೆ ಅದನ್ನು ಶ್ವೇತಭವನದ ಬೇಡಿಕೆ ಅನ್ವಯ ಸಿದ್ಧಪಡಿಸಲು 2 ವಿಮಾನಗಳಿಗೆ 17000 ಕೋಟಿ ರು.ವೆಚ್ಚದ ಅಂದಾಜು ಮಾಡಲಾಗಿತ್ತು. ಆದರೆ ಇದಕ್ಕೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಖರೀದಿ ವಿಳಂಬವಾಗಿತ್ತು. ಕೊನೆಗೆ ಎಲ್ಲಾ ಸರಿಯಾಗಿ ಬೇಡಿಕೆ ಸಲ್ಲಿಸಲಾಗಿದೆಯಾದರೂ ಅದು ಪೂರೈಕೆಯಾಗುವುದು 2029ರ ಹೊತ್ತಿಗೆ.
ಆದರೆ ಇನ್ನೂ 4 ವರ್ಷ ಹಳೆಯ ವಿಮಾನ ಬಳಸಲು ಟ್ರಂಪ್ ಸಿದ್ಧರಿಲ್ಲ. ಹೀಗಾಗಿ ದುಬೈ ದೊರೆಗಳು ತಮ್ಮ ಬಳಕೆಗೆಂದು ಖರೀದಿ ಮಾಡಿದ್ದ 747-8 ಬೋಯಿಂಗ್ ವಿಮಾನ ಉಡುಗೊರೆ ನೀಡಲು ಮುಂದಾಗಿದ್ದಾರೆ. ಬಳಿಕ ಈ ವಿಮಾನವನ್ನು ಅಮೆರಿಕ ಅಧ್ಯಕ್ಷರ ಬೇಡಿಕೆಗೆ ಅನ್ವಯ ಮರು ವಿನ್ಯಾಸಗೊಳಿಸಲಾಗುತ್ತದೆ ಎನ್ನಲಾಗಿದೆ.ಹಾರುವ ಅರಮನೆ:
ಹಾಲಿ ಕತಾರ್ ಬಳಿ ಇರುವ ವಿಮಾನವನ್ನು ಫ್ಲೈಯಿಂಗ್ ಪ್ಯಾಲೆಸ್ ಅಥವಾ ಹಾರುವ ಅರಮನೆ ಎಂದು ಕರೆಯಲಾಗುತ್ತದೆ, ಇದರಲ್ಲಿ ಅತ್ಯಾಧುನಿಕ ಸ್ನಾನಗೃಹಗಳು, ಖಾಸಗಿ ಮಲಗುವ ಕೋಣೆಗಳು. ಭವ್ಯವಾದ ಮೆಟ್ಟಿಲುಗಳಿಂದ ಕೂಡಿದ ಒಳಾಂಗಣವನ್ನು ಹೊಂದಿದೆ. ಇದನ್ನು ಆರಂಭದಲ್ಲಿ ಕತಾರ್ ರಾಜಮನೆತದವರು ಬಳಸುತ್ತಿದ್ದರು. ಆ ಬಳಿಕ ಟರ್ಕಿ ಇದನ್ನು ಬಳಸುತ್ತಿದ್ದರು.13 ವರ್ಷ ಹಳೆಯದಾದ ಕತಾರ್‌ನ ಈ ವಿಮಾನವನ್ನು ಟ್ರಂಪ್ ಅವಧಿ ಮುಗಿದ ನಂತರ ಅಧ್ಯಕ್ಷೀಯ ಗ್ರಂಥಾಲಯ ಪ್ರತಿಷ್ಠಾನಕ್ಕೆ ಸ್ಥಳಾಂತರಿಸಲಾಗುತ್ತದೆ.
ಏರ್‌ಪೋರ್ಸ್ ಒನ್ ವಿಶೇಷತೆ:ಏರ್‌ಪೋರ್ಸ್ ಒನ್ ಅಮೆರಿಕದ ಅಧ್ಯಕ್ಷರು ಬಳಕೆ ಮಾಡುವ ವಿಮಾನ. ಇದನ್ನು ಹಾರಾಡುವ ಶ್ವೇತ ಭವನ ಎಂದು ಕರೆಯುತ್ತಾರೆ. ಈ ವಿಮಾನದಲ್ಲಿ ಅಮೆರಿಕದ ಸಂಸತ್ ಶ್ವೇತ ಭವನದಲ್ಲಿ ಇರುವ ರೀತಿಯಲ್ಲಿಯೇ ಎಲ್ಲಾ ಸೌಲಭ್ಯಗಳು ಇರುತ್ತದೆ. ಈ ವಿಮಾನ 1990-91ರಿಂದಲೂ ಬಳಕೆಯಲ್ಲಿದೆ. ಇಂಧನ ಇಲ್ಲದೆಯೂ 20 ಗಂಟೆ ಹಾರಾಡುವ ಸಾಮಾರ್ಥ್ಯ ಹೊಂದಿರುವ ಅಧ್ಯಕ್ಷೀಯ ವಿಮಾನದಲ್ಲಿ ಅಧ್ಯಕ್ಷರಿಗೆ ಖಾಸಗಿ ಕಚೇರಿ, ವಿಶ್ರಾಂತಿಗೆ ಕೊಠಡಿ, ಸೆಮಿನಾರ್ ಹಾಲ್ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಹೊಂದಿದೆ.