ಸಾರಾಂಶ
ರಾಜಸ್ಥಾನದಿಂದ ನಗರಕ್ಕೆ ವಿಮಾನದಲ್ಲಿ ಬಂದು ಕಾರುಗಳನ್ನು ಕಳವು ಮಾಡುತ್ತಿದ್ದ ಗ್ಯಾಂಗ್‌ನ ಆರೋಪಿಯೊಬ್ಬನನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಸ್ಥಾನದಿಂದ ನಗರಕ್ಕೆ ವಿಮಾನದಲ್ಲಿ ಬಂದು ಕಾರುಗಳನ್ನು ಕಳವು ಮಾಡುತ್ತಿದ್ದ ಗ್ಯಾಂಗ್‌ನ ಆರೋಪಿಯೊಬ್ಬನನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾಜಸ್ಥಾನ ಮೂಲದ ಮುಕೇಶ್ ಕುಮಾರ್(30) ಬಂಧಿತ. ಈತ ನೀಡಿದ ಮಾಹಿತಿ ಮೇರೆಗೆ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಅನ್ನಪೂರ್ಣೇಶ್ವರಿನಗರ ಮತ್ತು ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗ್ಯಾಂಗ್‌ವೊಂದು ಐಷಾರಾಮಿ ಕಾರುಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವಿನ ಮೇರೆಗೆ ರಾಜಸ್ಥಾನಕ್ಕೆ ತೆರಳಿ ಆರೋಪಿ ಮುಕೇಶ್ ಕುಮಾರ್‌ನನ್ನು ಬಂಧಿಸಿ ಕರೆತರಲಾಗಿದೆ.ಬಂಧಿತ ಆರೋಪಿ ಮುಕೇಶ್ ಕುಮಾರ್ ಕೆಲ ವರ್ಷಗಳ ಹಿಂದೆ ಕಾಟನ್‌ಪೇಟೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಗ್ಯಾಂಗ್ ಕಟ್ಟಿಕೊಂಡು ಕಾರುಗಳ ಕಳ್ಳತನಕ್ಕೆ ಇಳಿದಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಬಂಧನದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.