ಅಮೇಠಿ, ರಾಯ್‌ಬರೇಲಿ: ಗಾಂಧಿಗಳ ಸರ್ಧೆ ಇಲ್ಲ?

| Published : Mar 18 2024, 01:49 AM IST / Updated: Mar 18 2024, 07:57 AM IST

ಸಾರಾಂಶ

ಭದ್ರಕೋಟೆಯಲ್ಲಿ ‘ಕುಟುಂಬದ’ ಪ್ರಭಾವ ಇಳಿಕೆಯಾಗುತ್ತಿರುವ ಕಾರಣ ರಾಹುಲ್‌, ಪ್ರಿಯಾಂಕಾ ಸ್ಪರ್ಧೆ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಲಖನೌ: ಈ ಲೋಕಸಭೆ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಸದಸ್ಯರು ತಮ್ಮ ಕುಟುಂಬದ ಕೋಟೆಗಳು ಎನ್ನಿಸಿಕೊಂಡಿರುವ ಉತ್ತರ ಪ್ರದೇಶದ ರಾಯ್‌ ಬರೇಲಿ ಹಾಗೂ ಅಮೇಠಿಯಿಂದ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಕೇರಳದ ವಯನಾಡ್‌ನಿಂದ ರಾಹುಲ್ ಗಾಂಧಿ ಈಗಾಗಲೇ ಉಮೇದುವಾರಿಕೆ ಘೋಷಿಸಿಕೊಂಡಿದ್ದಾರೆ. ಆದರೆ ತಾವು 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರ ವಿರುದ್ಧ ಸೋತ ಅಮೇಠಿ ಕ್ಷೇತ್ರದ ಬಗ್ಗೆ ಮೌನ ತಾಳಿದ್ದಾರೆ. 

ಪ್ರಿಯಾಂಕಾ ಗಾಂಧಿ ಕೂಡ ತಾಯಿ ಸೋನಿಯಾ ಗಾಂಧಿ ಬಿಟ್ಟುಕೊಟ್ಟಿರುವ ರಾಯ್‌ಬರೇಲಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ಹೇಳಿಕೆ ನೀಡುತ್ತಿಲ್ಲ.

ಸಮೀಕ್ಷೆಯೊಂದರ ಪ್ರಕಾರ ಎರಡೂ ಕ್ಷೇತ್ರಗಳಲ್ಲಿ ಗಾಂಧಿ ಕುಟುಂಬದ ಪ್ರಭಾವ ಕಡಿಮೆಯಾಗುತ್ತಿದೆ. 2019ರಲ್ಲಿ ಅಮೇಠಿಯಲ್ಲಿ ರಾಹುಲ್ ಸೋತಿದ್ದರು.

ಸಮೀಕ್ಷೆಯ ಪ್ರಕಾರ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಜನಪ್ರಿಯತೆ ಕಡಿಮೆಯಾಗಿದೆ. ಹೀಗಾಗಿ ಗಾಂಧಿ ಕುಟುಂಬವು 2024ರ ಚುನಾವಣೆಗೆ ಈ ಅಮೂಲ್ಯ ಕ್ಷೇತ್ರಗಳನ್ನು ತ್ಯಜಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಈಗ ರಾಜ್ಯಸಭೆಗೆ ತೆರಳಿರುವ ಸೋನಿಯಾ ಗಾಂಧಿ ಮೊದಲು 1999ರಲ್ಲಿ ಅಮೇಠಿಯಲ್ಲಿ ಗೆದ್ದಿದ್ದರು. ನಂತರ ರಾಯ್‌ಬರೇಲಿಗೆ ವಲಸೆ ಹೋಗಿ ಪುತ್ರ ರಾಹುಲ್‌ ಗಾಂಧಿಗೆ ಅಮೇಠಿ ಬಿಟ್ಟುಕೊಟ್ಟಿದ್ದರು. 

ಆದರೆ ಮೊದಲು ಗೆದ್ದರೂ ರಾಹುಲ್‌ 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು. ಆದರೆ ಸೋಲಿನ ಸುಳಿವು ಅರಿತು ಕೇರಳದ ವಯನಾಡಿನಲ್ಲೂ ಸ್ಪರ್ಧಿಸಿದ್ದ ಕಾರಣ ಅಲ್ಲಿ ಗೆದ್ದಿದ್ದರು.