- ನಿರ್ಮಾಣ ಹಂತದಲ್ಲಿದ್ದ ಸುರಂಗ ಬಳಿ ಭಾರಿ ಮಣ್ಣು ಕುಸಿತ

- 2024ರ ದುರ್ಘಟನೆ ನೆನಪಿಸಿದ ದೃಶ್ಯಗಳು

- ಪ್ರಕೃತಿ ವಿಕೋಪ

---

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಬಸ್ಸು ನೀರುಪಾಲು


----

ಮಹಾರಾಷ್ಟ್ರ, ಕಾಶ್ಮೀರ, ದಿಲ್ಲಿ ಸೇರಿ

ಅನೇಕ ಕಡೆ ಮಳೆ ಅನಾಹುತ

- ವಿವರ ಪುಟ 9 ಪಿಟಿಐ ವಯನಾಡು

2024ರಲ್ಲಿ ಕೇರಳದ ವಯನಾಡಿನಲ್ಲಿ 250ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದ ಭೂಕುಸಿತವನ್ನೇ ಹೋಲುವಂಥ ಮತ್ತೊಂದು ಭೂಕುಸಿತದ ಘಟನೆ ಅದೇ ಜಿಲ್ಲೆ ಕಲ್ಲಾಡಿ ಎಂಬಲ್ಲಿ ಮಂಗಳವಾರ ಸಂಭವಿಸಿದೆ. 2 ವರ್ಷಗಳ ಹಿಂದೆ ಭೂಕುಸಿತ ಸಂಭವಿಸಿದ್ದ ಮುಂಡಾಯಕ್ಕಾಯ್‌ನಿಂದ ಕೇವಲ 6-8 ಕಿ.ಮೀ ದೂರದ ಕಲ್ಲಾಡಿಯಲ್ಲಿ ನಿರ್ಮಾಣದ ಹಂತದ ಅವಳಿ ಸುರಂಗದ ಬಳಿ ಭೂಕುಸಿತ ಸಂಭವಿಸಿದ ದುರಂತದಲ್ಲಿ ಐವರು ಸಾವನ್ನಪ್ಪಿದ್ದು, ಕನಿಷ್ಠ 5 ಜನರು ನಾಪತ್ತೆಯಾಗಿದ್ದಾರೆ. ಭೂಕುಸಿತದ ದೃಶ್ಯ ಸಿಸಿಟೀವಿಯೊಂದರಲ್ಲಿ ಸೆರೆಯಾಗಿದ್ದು ಮೈ ಝುಮ್ಮೆನಿಸುವಂತಿದೆ.

ಇದರ ಬೆನ್ನಲ್ಲೇ ಹವಾಮಾನ ಇಲಾಖೆ ವಯನಾಡು ಮತ್ತು ನೆರೆಯ ಕಲ್ಲಿಕೋಟೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ವಾಸವಾಗಿರುವವರನ್ನು ಅಲ್ಲಿಂದ ತೆರವು ಮಾಡಲಾಗಿದೆ. ತುರ್ತುಸ್ಥಿತಿಗಾಗಿ ರಕ್ಷಣಾ ತಂಡವೊಂದನ್ನು ತ್ರಿಶೂರಿನಲ್ಲಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.

ಏನಾಯ್ತು?:

ಕಲ್ಲಿಕೋಟೆ ಮತ್ತು ವಯನಾಡು ಸಂಪರ್ಕಿಸಲು ರಾಜ್ಯ ಸರ್ಕಾರ 8 ಕಿ.ಮೀ ಉದ್ದದ ಅವಳಿ ಸುರಂಗ ಮಾರ್ಗ ನಿರ್ಮಿಸುತ್ತಿದೆ. ಕಾಮಗಾರಿಯ ಭಾಗವಾಗಿ ಸುರಂಗದಿಂದ ತೆಗೆದ ಮಣ್ಣನ್ನು ಪಕ್ಕದಲ್ಲೇ 40 ಎಕರೆ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ರಾಶಿ ಹಾಕಲಾಗಿತ್ತು. ಸೋಮವಾರದಿಂದೀಚೆಗೆ ವಯನಾಡು ಪ್ರದೇಶದಲ್ಲಿ 25.6 ಸೆ.ಮೀನಷ್ಟು ಭಾರೀ ಮಳೆ ಸುರಿದ ಪರಿಣಾಮ ಕಲ್ಲಾಡಿಯಲ್ಲಿ ಮೀನಾಕ್ಷಿ ಸೇತುವೆ ಬಳಿ ಮಂಗಳವಾರ ಬೆಳಗ್ಗೆ 11 ಗಂಟೆ ವೇಳೆಗೆ ಸುರಂಗ ಮಾರ್ಗದ ಬಳಿ ರಾಶಿ ಹಾಕಿದ್ದ ಮಣ್ಣು ದಿಢೀರ್‌ ಕುಸಿದಿದೆ. ಪರಿಣಾಮ ಭಾರೀ ಪ್ರಮಾಣದಲ್ಲಿ ಮಣ್ಣು ರಸ್ತೆಯಲ್ಲಿ ಪ್ರವಾಹೋಪಾದಿಯಲ್ಲಿ ಹರಿದುಬಂದಿದ್ದು, ತನ್ನೊಂದಿಗೆ ದೊಡ್ಡ ಲಾರಿ, ಬೈಕ್‌, ಜನರನ್ನು ಕೊಚ್ಚಿಕೊಂಡು ಹೋಗಿದೆ. ಮಣ್ಣಿನಡಿಯಲ್ಲಿ ಒಂದು ಮನೆ ಮತ್ತು ಮಸೀದಿ ಸಮಾಧಿಯಾಗಿದೆ ಎನ್ನಲಾಗಿದೆ.

ಘಟನೆ ನಡೆದ ವೇಳೆ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಲಾಗಿದ್ದ ಕಾರಣ ಯಾವುದೇ ಕಾರ್ಮಿಕರು ಅಲ್ಲಿರದೆ, ಪ್ರಾಣಹಾನಿಯ ಸಂಭವ ತಗ್ಗಿದೆ. ಆದರೆ ಸ್ಥಳದಲ್ಲಿದ್ದ ಅಭಿಯಂತರರು ಮತ್ತು ಭದ್ರತಾ ಸಿಬ್ಬಂದಿ ಕುಸಿದ ಮಣ್ಣಿನಡಿ ಸಿಲುಕಿರುವ ಸಂಭವವಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಲ್ಲೇ ಇದ್ದ ಕಾರ್ಮಿಕರನ್ನು ಸಾಗಿಸುವ ಖಾಸಗಿ ಬಸ್ಸೊಂದು ಕೊಚ್ಚಿಕೊಂಡು ಹೋಗಿ ನದಿಗೆ ಬಿದ್ದಿದೆ. 2024ರಲ್ಲೂ ಇದೇ ಜಾಗದಲ್ಲಿ ಭೂಕುಸಿತ ಸಂಭವಿಸಿತ್ತು.

ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ವಿ.ಡಿ. ಸತೀಶನ್‌ ಅವರು ಭೇಟಿ ನೀಡಿದ್ದು, ‘ಅಧಿಕಾರಿಗಳು ಹೇಳಿದಂತೆ ಮಣ್ಣಿನ ರಾಶಿಯನ್ನು ಸರಿಯಾಗಿ ವಿಲೇವಾರಿ ಮಾಡದ ಗುತ್ತಿಗೆದಾರರ ಬೇಜವಾಬ್ದಾರಿತನದಿಂದ ಕಾರಣ ಹೀಗಾಗಿದೆ’ ಎಂದು ಕಿಡಿ ಕಾರಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದರು. ಅತ್ತ ಈ ಭೂಕುಸಿತವನ್ನು ರಾಜ್ಯದ ಕೃಷಿ ಸಚಿವರು ‘ಮಾನವನಿರ್ಮಿತ ದುರಂತ’ ಎಂದು ಕರೆದಿದ್ದಾರೆ.

ಪ್ರಿಯಾಂಕಾ ಸಂತಾಪ:

ತಮ್ಮ ಕ್ಷೇತ್ರದಲ್ಲಿ ಸಂಭವಿಸಿದ ಭೂಕುಸಿತದಿಂದ ಪ್ರಾಣ ಕಳೆದುಕೊಂಡವರಿಗೆ ಸಂಸದೆ ಪ್ರಿಯಾಂಕಾ ಗಾಂಧಿ ಸಂತಾಪ ಸೂಚಿಸಿದ್ದು, ‘ಸಿಎಂ ಸತೀಶನ್‌ ಅವರು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ನಾವು ಸದಾ ನಿಮ್ಮೊಂದಿಗಿರುತ್ತೇವೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಜನರಲ್ಲಿ ಧೈರ್ಯ ತುಂಬಿದ್ದಾರೆ.