ಸಾರಾಂಶ
‘ಆರ್‌ಎಸ್‌ಎಸ್‌ನ ನಮಸ್ತೇ ಸದಾ ವತ್ಸಲೆ ಪ್ರಾರ್ಥನೆಯು ಮಾತೃಭೂಮಿ ಹಾಗೂ ದೇವರ ಕುರಿತು ಸ್ವಯಂಸೇವಕರ ಸಾಮೂಹಿಕ ಸಂಕಲ್ಪ ಹಾಗೂ ಸಮರ್ಪಣಾಭಾವವಾಗಿದೆ’ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ನಾಗ್ಪುರ: ‘ಆರ್‌ಎಸ್‌ಎಸ್‌ನ ಪ್ರಾರ್ಥನೆಯು ಮಾತೃಭೂಮಿ ಹಾಗೂ ದೇವರ ಕುರಿತು ಸ್ವಯಂಸೇವಕರ ಸಾಮೂಹಿಕ ಸಂಕಲ್ಪ ಹಾಗೂ ಸಮರ್ಪಣಾಭಾವವಾಗಿದೆ’ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಸಂಘದ ಪ್ರಾರ್ಥನಾ ಗೀತೆಯಾಗಿರುವ ‘ನಮಸ್ತೇ ಸದಾ ವತ್ಸಲೆ..’ ಅನ್ನು ಶಂಕರ್ ಮಹಾದೇವನ್ ಹಾಡಿರುವ, ಹಿಂದಿ ಹಾಗೂ ಮರಾಠಿಯಲ್ಲಿ ಹರೀಶ್ ಭಾಮನಿ ಮತ್ತು ನಟ ಸಚಿನ್ ಖೇಡ್ಕರ್ ವಿವರಿಸಿರುವ ಆಡಿಯೋ ಬಿಡುಗಡೆ ಮಾಡಿ ಭಾಗವತ್ ಮಾತನಾಡಿದರು.
‘ಇದು ಭಾರತ ಮಾತೆಯ ಬಗ್ಗೆ ನಮಗಿರುವ ಭಕ್ತಿ, ಪ್ರೀತಿ, ಸಮರ್ಪಣೆಯ ಅಭಿವ್ಯಕ್ತಿಯಾಗಿದೆ. ದೇಶಕ್ಕೆ ನಾವೇನು ಕೊಡಬಹುದು ಮತ್ತು ದೇಶಸೇವೆ ಮಾಡಲು ಸಹಕರಿಸುವಂತೆ ದೇವರಿಗೇನು ಕೊಡಬೇಕು ಎಂಬುದೇ ಇದರ ಅರ್ಥ’ ಎಂದು ವಿವರಿಸಿದರು.
ಮುಂಬೈ ವಿಮಾನ ಟಾಯ್ಲೆಟ್ಟಲ್ಲಿ ಧೂಮಪಾನ, ಪ್ರಯಾಣಿಕನ ಸೆರೆ
ಮುಂಬೈ: ಥಾಯ್ಲೆಂಡ್‌ನ ಫುಕೆಟ್‌ನಿಂದ ಮುಂಬೈಗೆ ಸಂಚರಿಸುತ್ತಿದ್ದ ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ಆರೋಪದಲ್ಲಿ 25 ವರ್ಷದ ಪ್ರಯಾಣಿಕನನ್ನು ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.ಶುಕ್ರವಾರ ರಾತ್ರಿ ವಿಮಾನ ಪ್ರಯಾಣಿಕರು ಶೌಚಾಲಯದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದರು. ಈ ವೇಳೆ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ವಾಯುಯಾನ ನಿಯಮಗಳ ಅಡಿಯಲ್ಲಿ ವಿಮಾನದಲ್ಲಿ ಧೂಮಪಾನ ನಿಷೇಧ ವಿದ್ದರೂ ನಿಯಮ ಉಲ್ಲಂಘಿಸಿದ್ದಕ್ಕಾಗಿ ಭವ್ಯ ಗೌತಮ್ ಜೈನ್ ಎಂಬ ಯುವಕನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಗಾಜಾ ಮೇಲೆ ಇಸ್ರೇಲ್ ವೈಮಾನಿಕ, ಗುಂಡಿನ ದಾಳಿ: 38 ಸಾವು
ಡೇರ್ ಅಲ್ ಬಲಾ: ಇಸ್ರೇಲ್ ಗಾಜಾದ ಮೇಲೆ ತನ್ನ ಯುದ್ಧ ಮುಂದುವರೆಸಿದ್ದು ಶನಿವಾರ ವೈಮಾನಿಕ ಮತ್ತು ಗುಂಡಿನ ದಾಳಿ ನಡೆಸಿದೆ. ಪರಿಣಾಮ ಘಟನೆಯಲ್ಲಿ 38 ನಾಗರಿಕರು ಸಾವನ್ನಪ್ಪಿದ್ದಾರೆ.ಗಾಜಾ ಜತೆಗಿನ ಸಂಘರ್ಷ ನಿಲ್ಲಿಸಿ, ಕದನ ವಿರಾಮ ಘೋಷಿಸಬೇಕು ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅವರಿಗೆ ಜಾಗತಿಕ ಒತ್ತಡಗಳು ಎದುರಾಗಿರುವ ನಡುವೆಯೂ ದಾಳಿ ನಡೆಸಿದೆ. ಗಾಜಾದ ನುಸೇರತ್ ನಿರಾಶ್ರಿತರ ಶಿಬಿರದ ಮನೆಯಲ್ಲಿ ಒಂದೇ ಕುಟುಂಬದ 9 ಮಂದಿಯನ್ನು ಹತ್ಯೆ ಮಾಡಲಾಗಿದೆ.
ಶುಕ್ರವಾರವಷ್ಟೇ ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಗಾಜಾ ಸಂಘರ್ಷ ಮುಂದುವರಿಸುವುದಾಗಿ ಎಚ್ಚರಿಸಿದ್ದರು. ಇದನ್ನು ವಿರೋಧಿಸಿ ಇಸ್ರೇಲ್ ವಿರೋಧಿ ರಾಷ್ಟ್ರಗಳ ಪ್ರತಿನಿಧಿಗಳು ಸಾಮೂಹಿಕ ಸಭಾತ್ಯಾಗ ಮಾಡಿದ್ದರು.
2029ಕ್ಕೆ ಮುಂಬೈ-ಅಹಮದಾಬಾದ್ ಸಂಪೂರ್ಣ ಬುಲೆಟ್ ರೈಲು ಸಂಚಾರ: ವೈಷ್ಣವ್
ಸೂರತ್: ಮುಂಬೈ ಮತ್ತು ಅಹಮದಾಬಾದ್ ನಡುವೆ ನಿರ್ಮಾಣವಾಗುತ್ತಿರುವ ಬುಲೆಟ್ ರೈಲು ಯೋಜನೆಯು 2029ರ ವೇಳೆಗೆ ಪೂರ್ಣಗೊಳ್ಳಲಿದ್ದು, ಅದೇ ವರ್ಷ ಪೂರ್ಣ ಪ್ರಮಾಣದಲ್ಲಿ ಎರಡೂ ನಗರಗಳ ಮಧ್ಯೆ ಬುಲೆಟ್ ರೈಲು ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.ಸೂರತ್‌ನ ಬುಲೆಟ್ ರೈಲು ನಿಲ್ದಾಣದ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ‘ಸೂರತ್ ಮತ್ತು ಬಿಲಿಮೋರಾ ನಡುವೆ 2027ಕ್ಕೆ ಬುಲೆಟ್ ರೈಲಿನ ಸಂಚಾರ ಆರಂಭವಾಗಲಿದೆ. 2028ಕ್ಕೆ ಥಾಣೆ ಮತ್ತು ಅಹಮದಾಬಾದ್ ಮಧ್ಯೆ ಮತ್ತು 2029ಕ್ಕೆ ಮುಂಬೈ ಮತ್ತು ಅಹಮದಾಬಾದ್ ನಡುವಿನ ಸಂಪೂರ್ಣ ಮಾರ್ಗ ಪ್ರಯಾಣಕ್ಕೆ ಮುಕ್ತವಾಗಲಿದೆ. ರೈಲುಗಳು 320 ಕಿ.ಮೀ. ವೇಗದಲ್ಲಿ ಸಂಚರಿಸಲಿವೆ’ ಎಂದರು.
ಐಸಿಸ್ ಸಿದ್ಧಾಂತ ಪ್ರಚಾರ ಪ್ರಕರಣ: ಇಬ್ಬರು ದೋಷಿ
ಕೊಚ್ಚಿ: 2019ರಲ್ಲಿ ನಿಷೇಧಿತ ಇಸ್ಲಾಮಿಕ್ ಸಂಘಟನೆ ಐಸಿಸ್‌ಗೆ ಜನರನ್ನು ಸೇರಿಸಲು ಮತ್ತು ಸಿದ್ಧಾಂತ ಹರಡಲು ಯತ್ನಿಸುತ್ತಿದ್ದ ಪ್ರಕರಣದಲ್ಲಿ ಕೊಯಮತ್ತೂರಿನ ಇಬ್ಬರು ನಿವಾಸಿಗಳನ್ನು ದೋಷಿ ಕೇರಳದ ಕೊಚ್ಚಿ ಎನ್‌ಐಎ ನ್ಯಾಯಾಲಯ ತೀರ್ಪಿತ್ತಿದೆ. ಶಿಕ್ಷೆ ಪ್ರಮಾಣವನ್ನು ಸೆ.29ರಂದು .ಮುಹಮ್ಮದ್ ಅಜರುದ್ದೀನ್ (27) ಮತ್ತು ಶೇಖ್ ಹಿದಾಯತ್ತುಲ್ಲಾ (35) ಶ್ರೀಲಂಕಾ ಸೇರಿ ಹಲವು ರಾಷ್ಟ್ರಗಳ ಐಸಿಸ್ ಉಗ್ರರ ಭಾಷಣಗಳು, ಗೃಂಥಗಳಿಂದ ಪ್ರಭಾವಿತರಾಗಿದ್ದರು. ಜೊತೆಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಉಗ್ರ ಕೃತ್ಯ ಎಸಗುವ ನಿಟ್ಟಿನಲ್ಲಿ ಯುವಕರನ್ನು ಐಸಿಸ್ ಕಡೆಗೆ ಸೆಳೆಯುವ ಕೆಲಸ ಮಾಡುತ್ತಿದ್ದರು. ಅವರ ಮನಃಪರಿವರ್ತನೆಗೊಳಿಸಿ, ನಿಯೋಜಿಸುತ್ತಿದ್ದರು. ಈ ಸಂಬಂಧ ಎನ್‌ಐಎ ಹೂಡಿದ ಪ್ರಕರಣದಲ್ಲಿ ಇಬ್ಬರೂ ದೋಷಿಗಳೆಂದು ಕೋರ್ಟ್ ಹೇಳಿದೆ.