ಸಾರಾಂಶ
ವಿಶ್ವಸಂಸ್ಥೆ : ‘ಭಾರತ ಮೇನಲ್ಲಿ ನಡೆಸಿದ ಆಪರೇಷನ್ ಸಿಂದೂರವನ್ನು ಹಿಮ್ಮೆಟ್ಟಿಸಿ ನಾವೇ ಗೆದ್ದೆವು’ ಎಂದು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್‌ಗೆ ತಿರುಗೇಟು ನೀಡಿರುವ ಭಾರತ, ‘ನಾಶವಾದ ರನ್‌ವೇಗಳು ವಿಜಯದಂತೆ ಕಾಣುತ್ತಿವೆಯೇ?’ ಎಂದು ಅಣಕಿಸಿದೆ.
ಅಲ್ಲದೆ, ‘ಕದನ ನಿಲ್ಲಿಸಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್’ ಎಂದಿದ್ದ ಷರೀಫ್ ಹೇಳಿಕೆ ಸುಳ್ಳು ಎಂದಿರುವ ಭಾರತ. ‘ನವದೆಹಲಿ ಮತ್ತು ಇಸ್ಲಾಮಾಬಾದ್ ನಡುವಿನ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಯಾವುದೇ ಮೂರನೇ ವ್ಯಕ್ತಿಗೆ ಅವಕಾಶವಿಲ್ಲ. ದಾಳಿ ನಿಲ್ಲಿಸುವಂತೆ ಮೊದಲು ಕೇಳಿದ್ದೇ ಪಾಕ್’ ಎಂದು ಸ್ಪಷ್ಟಪಡಿಸಿದೆ.
ಷರೀಫ್ ಭಾಷಣಕ್ಕೆ ಪ್ರತ್ಯುತ್ತರದ ಹಕ್ಕು ಬಳಸಿಕೊಂಡು ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರತಿನಿಧಿ ಪೆಟಲ್ ಗೆಹ್ಲೋಟ್, ‘ತಾವೇ ಗೆದ್ದೆವು ಎಂದು ಪಾಕ್ ಪ್ರಧಾನಿ ಹೇಳಿದ್ದಾರೆ. ಹಾಗಿದ್ದರೆ, ನಾಶವಾದ ರನ್‌ವೇಗಳು ಮತ್ತು ಉಗ್ರ ನೆಲೆಗಳು ಅವರಿಗೆ ವಿಜಯದಂತೆ ಕಂಡುಬರುತ್ತವೆಯೆ? ಪಾಕಿಸ್ತಾನವು ಒಂದು ವೇಳೆ ಅದನ್ನೇ ವಿಜಯ ಎಂದು ಆನಂದಿಸಿದರೆ ನಾವು ಸ್ವಾಗತಿಸುತ್ತೇವೆ’ ಎಂದು ಕಿಚಾಯಿಸಿದರು.
‘ಮೇ 9ರವರೆಗೆ ಪಾಕಿಸ್ತಾನವು ಭಾರತದ ಮೇಲೆ ಹೆಚ್ಚಿನ ದಾಳಿಗಳ ಬೆದರಿಕೆ ಹಾಕುತ್ತಿತ್ತು. ಆದರೆ ಮೇ 10ರಂದು, ಅದರ ಸೇನೆಯು ನೇರವಾಗಿ ಹೋರಾಟ ನಿಲ್ಲಿಸುವಂತೆ ನಮಗೆ ಮನವಿ ಮಾಡಿತು. ಏಕೆಂದರೆ ಭಾರತೀಯ ಪಡೆಗಳು ಪಾಕಿಸ್ತಾನದ ಹಲವಾರು ವಾಯುನೆಲೆಗಳನ್ನು ನಾಶ ಮಾಡಿದವು. ಆ ಹಾನಿಯ ಚಿತ್ರಗಳು ಸಹಜವಾಗಿಯೇ ಸಾರ್ವಜನಿಕರಿಗೆ ಲಭ್ಯವಿವೆ’ ಎಂದರು.
‘ನಿನ್ನೆಯ ಭಾಷಣದಲ್ಲಿ ಪಾಕ್ ಪ್ರಧಾನಿ ಅಸಂಬದ್ಧ ನಾಟಕೀಯತೆಗೆ ಸಾಕ್ಷಿಯಾದರು. ಅವರು ಮತ್ತೊಮ್ಮೆ ತಮ್ಮ ವಿದೇಶಾಂಗ ನೀತಿಯ ಕೇಂದ್ರವಾಗಿರುವ ಉಗ್ರವಾದವನ್ನು ವೈಭವೀಕರಿಸಿದರು. ಯಾವುದೇ ಮಟ್ಟದ ನಾಟಕ ಅಥವಾ ಯಾವುದೇ ಮಟ್ಟದ ಸುಳ್ಳು ಸತ್ಯಗಳನ್ನು ಮರೆಮಾಚಲು ಸಾಧ್ಯವಿಲ್ಲ. ದ ರೆಸಿಸ್ಟನ್ಸ್ ಫ್ರಂಟ್ ಎಂಬ ಉಗ್ರ ಸಂಘಟನೆ ಪಹಲ್ಗಾಂ ಮೇಲೆ ದಾಳಿ ಮಾಡಿತು. ಆದರೆ ಅದಕ್ಕೂ ಮುನ್ನ ಏಪ್ರಿಲ್ 25, 2025ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನವು ತನ್ನದೇ ಪ್ರಾಯೋಜಿತ ಉಗ್ರ ಸಂಘಟನೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ ಪರ ವಾದ ಮಂಡಿಸಿ ರಕ್ಷಿಸಿತ್ತು’ ಎಂದು ಅವರು ಆರೋಪಿಸಿದರು.
ಅಲ್ಲದೆ, ‘ಪಾಕಿಸ್ತಾನದ ಹಿರಿಯ ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳು ಸಿಂದೂರ ಕಾರ್ಯಾಚರಣೆ ವೇಳೆ ಮೃತರಾದ ಕುಖ್ಯಾತ ಭಯೋತ್ಪಾದಕರನ್ನು ವೈಭವೀಕರಿಸಿ ಸಾರ್ವಜನಿಕವಾಗಿ ಗೌರವ ಸಲ್ಲಿಸಿದರು. ಇದು ಆ ದೇಶದ ಇಚ್ಛಾಶಕ್ತಿ’ ಎಂದು ಛೇಡಿಸಿದರು.‘ಪಾಕಿಸ್ತಾನವು ಭಯೋತ್ಪಾದನೆಯ ರಫ್ತು ದೇಶ. ಆದಾಗ್ಯೂ ತಾನು ಮಾಡಿದ್ದೇ ಸರಿ ಎಂಬ ಹಾಸ್ಯಾಸ್ಪದ ನಿರೂಪಣೆಗಳನ್ನು ಮುಂದಿಡಲು ಅದಕ್ಕೆ ಯಾವುದೇ ನಾಚಿಕೆ ಇಲ್ಲ. ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಪಾಲುದಾರನಂತೆ ನಟಿಸುವ ಪಾಕ್, 1 ದಶಕದ ಕಾಲ ಒಸಾಮಾ ಬಿನ್ ಲಾಡೆನ್‌ಗೆ ಆಶ್ರಯ ನೀಡಿತ್ತು ಎಂಬುದನ್ನು ಸ್ಮರಿಸೋಣ’ ಎಂದು ಛೇಡಿಸಿದರು.
‘ಅಲ್ಲದೆ, ಪಾಕ್ ಮಂತ್ರಿಗಳು ಇತ್ತೀಚೆಗೆ ದಶಕಗಳಿಂದ ಉಗ್ರ ಶಿಬಿರಗಳನ್ನು ನಿರ್ವಹಿಸುತ್ತಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಅವರು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ, ತಕ್ಷಣವೇ ಎಲ್ಲ ಉಗ್ರ ಶಿಬಿರ ಮುಚ್ಚಿ ಭಾರತಕ್ಕೆ ಬೇಕಾಗಿರುವ ಉಗ್ರರನ್ನು ನಮಗೆ ಹಸ್ತಾಂತರಿಸಬೇಕು’ ಎಂದು ಗೆಹ್ಲೋಟ್ ಆಗ್ರಹಿಸಿದರು.
ಚಳಿಗಾಲಕ್ಕೂ ಮೊದಲು ನುಸುಳಲು ಉಗ್ರರ ಯತ್ನ: ಬಿಎಸ್‌ಎಫ್
ಶ್ರೀನಗರ : ಪಾಕ್ ಭಾಗದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಿರ್ಮಿಸಿರುವ ನೆಲೆಗಳಿಂದ ಕಾಶ್ಮೀರ ಕಣಿವೆಯೊಳಗೆ ಚಳಿಗಲಕ್ಕೂ ಮುನ್ನ ನುಸುಳಲು ಸಾಕಷ್ಟು ಉಗ್ರರು ಕಾಯುತ್ತಿದ್ದಾರೆ. ಆದರೆ, ಭದ್ರತಾ ಪಡೆಗಳು ಇಂಥ ಒಳನುಸುಳುವ ಪ್ರಯತ್ನಗಳನ್ನು ತಡೆಯಲು ಸನ್ನದ್ಧವಾಗಿರುವುದಾಗಿ ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.ಬಿಎಸ್‌ಎಫ್ ಕಾಶ್ಮೀರ್ ಫ್ರಂಟಿಯರ್‌ನ ಇನ್ಸ್‌ಪೆಕ್ಟರ್ ಜನರಲ್ ಅಶೋಕ್ ಯಾದವ್ ಸುದ್ದಿಗಾರರ ಜತೆಗೆ ಮಾತನಾಡಿ, ‘ಸಾಮಾನ್ಯವಾಗಿ ಚಳಿಗಾಲಕ್ಕೂ ಮೊದಲು ಉಗ್ರರು ಗಡಿದಾಟಲು ಪ್ರಯತ್ನಿಸುತ್ತಲೇ ಇರುತ್ತಾರೆ.
ಚಳಿಗಾಲಕ್ಕಿನ್ನು 2 ತಿಂಗಳಷ್ಟೇ ಬಾಕಿ ಇದೆ. ನವೆಂಬರ್ ವರೆಗೂ ಗಡಿನುಸುಳುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಏಕೆಂದರೆ ಮುಂದಿನ ಆರು ತಿಂಗಳಲ್ಲಿ ಅವರಿಗೆ ಗಡಿದಾಟುವ ಅವಕಾಶ ಕಡಿಮೆ ಎಂಬ ಅರಿವು ಅವರಿಗಿದೆ. ಆದರೆ ಗಡಿಯಲ್ಲಿ ಭದ್ರತಾಪಡೆಗಳು ಎಚ್ಚರದಿಂದಿರುವ ಹಿನ್ನೆಲೆಯಲ್ಲಿ ಗಡಿನುಸುಳುವುದು ಅಷ್ಟು ಸುಲಭವಲ್ಲ’ ಎಂದರು.
ಬಿಎಸ್‌ಎಫ್ ಹಾಗೂ ಸೇನೆಯು ಹೈಅಲರ್ಟ್‌ನಲ್ಲಿದ್ದು, ಗಡಿಯುದ್ದಕ್ಕೂ ಹೈಟೆಕ್ ಉಪಕರಣಗಳನ್ನು ಬಳಸಿಕೊಂಡು ಕಣ್ಗಾವಲು ಇಡುತ್ತಿವೆ ಎಂದು ಹೇಳಿದರು.
;Resize=(128,128))
;Resize=(128,128))