ವಿದ್ಯಾರ್ಥಿಗಳು ಸ್ಮಾರ್ಟ್‌ಫೋನ್‌ಗಿಂತ ಸ್ಮಾರ್ಟ್ ಆಗಬೇಕು : ಆಧ್ಯಾತ್ಮ ಗುರು ಸದ್ಗುರು

| N/A | Published : Feb 16 2025, 01:46 AM IST / Updated: Feb 16 2025, 04:35 AM IST

ಸಾರಾಂಶ

ಸದ್ಯದಲ್ಲೇ ವಾರ್ಷಿಕ ಪರೀಕ್ಷೆಗೆ ಸಜ್ಜುಗೊಳ್ಳುತ್ತಿರುವ ಮಕ್ಕಳ ಜತೆಗೆ ಪ್ರಧಾನಿ ಮೋದಿ, ನಟಿ ದೀಪಿಕಾ ಪಡುಕೋಣೆ ಬಳಿಕ ಇದೀಗ ಆಧ್ಯಾತ್ಮ ಗುರು ಸದ್ಗುರು ಅವರು ನಡೆಸಿದ ಪರೀಕ್ಷಾ ಪೇ ಚರ್ಚೆ ಸಂವಾದ ಶನಿವಾರ ಪ್ರಸಾರ ಮಾಡಲಾಯಿತು. 

ನವದೆಹಲಿ: ಸದ್ಯದಲ್ಲೇ ವಾರ್ಷಿಕ ಪರೀಕ್ಷೆಗೆ ಸಜ್ಜುಗೊಳ್ಳುತ್ತಿರುವ ಮಕ್ಕಳ ಜತೆಗೆ ಪ್ರಧಾನಿ ಮೋದಿ, ನಟಿ ದೀಪಿಕಾ ಪಡುಕೋಣೆ ಬಳಿಕ ಇದೀಗ ಆಧ್ಯಾತ್ಮ ಗುರು ಸದ್ಗುರು ಅವರು ನಡೆಸಿದ ಪರೀಕ್ಷಾ ಪೇ ಚರ್ಚೆ ಸಂವಾದ ಶನಿವಾರ ಪ್ರಸಾರ ಮಾಡಲಾಯಿತು. ಪರೀಕ್ಷೆಯನ್ನು ಎದುರಿಸುವುದು ಹೇಗೆ?, ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬ ಕುರಿತು ಸಲಹೆ-ಸೂಚನೆಗಲನ್ನು ನೀಡಿದ ಸದ್ಗುರು ಅವರು, ಧ್ಯಾನದ ಮಹತ್ವದ ಬಗ್ಗೆಯೂ ಮಕ್ಕಳಿಗೆ ತಿಳಿಹೇಳಿದರು. ಮಕ್ಕಳ ಜತೆಗೆ ಸದ್ಗುರು ಅವರು ಒಟ್ಟಾರೆ ಹೇಳಿದ್ದಿಷ್ಟು.

- ಪಠ್ಯಪುಸ್ತಕ ನಿಮ್ಮ ಬುದ್ಧಿಮತ್ತೆಗೆ ಯಾವತ್ತೂ ಸವಾಲೇ ಅಲ್ಲ. ನೀವು ಪಠ್ಯಪುಸ್ತಕವನ್ನು ನೋಡುವ ಕ್ರಮ ಬದಲಾಗಬೇಕು, ನೀವು ಪಠ್ಯಪುಸ್ತಕವನ್ನು ಆಟದ ರೀತಿ ನೋಡಿದರೆ ಆಗ ಅದು ನಿಮಗೆ ಸವಾಲು ಅನಿಸುವುದೇ ಇಲ್ಲ.

- ಇನ್ನೊಬ್ಬ ವ್ಯಕ್ತಿಯಷ್ಟು ನಾನು ಬುದ್ಧಿವಂತನೇ ಎಂಬ ಪ್ರಶ್ನೆಯೇ ತಪ್ಪು. ಪ್ರತಿಯೊಬ್ಬರಲ್ಲೂ ಇನ್ನೊಬ್ಬರು ಊಹಿಸದ್ದನ್ನು ಮಾಡುವ ಸಾಮರ್ಥ್ಯ ಇದೆ. ಎಲ್ಲರಲ್ಲೂ ಕಿಚ್ಚು ಇರುತ್ತದೆ, ಆದರೆ ತುಡಿತದ ಕೊರತೆಯಿಂದ ಆ ಕಿಚ್ಚು ಹೊತ್ತಿಕೊಳ್ಳುವುದಿಲ್ಲ ಅಷ್ಟೆ.

- ಸ್ಮಾರ್ಟ್‌ ಫೋನ್‌ಗಳನ್ನು ನಾವು ನಿಯಂತ್ರಣ ಮಾಡಬೇಕೇ ಹೊರತು ಅದು ನಮ್ಮನ್ನು ನಿಯಂತ್ರಿಸಲು ಬಿಡಬಾರದು. ವಿದ್ಯಾರ್ಥಿಗಳು ಅವರ ಸ್ಮಾರ್ಟ್‌ ಫೋನ್‌ಗಿಂತ ಸ್ಮಾರ್ಟ್ ಆಗಬೇಕು. ಪರೀಕ್ಷೆಯನ್ನು ಯಾವತ್ತೂ ತಮ್ಮ ಬುದ್ಧಿವಂತಿಕೆಗಿರುವ ಸವಾಲು ಎಂದು ಪರಿಗಣಿಸಬಾರದು.

- ಒತ್ತಡವಾಗುತ್ತಿದೆಯೆಂದರೆ ನಿಮ್ಮ ಮಿದುಳಿಗೆ ಸರಿಯಾಗಿ ಆಯಿಲಿಂಗ್‌ ಆಗಿಲ್ಲ ಎಂದೇ ಅರ್ಥ. ಮಿದುಳನ್ನು ನೀವು ಚಟುವಟಿಕೆಯಿಂದಷ್ಟು ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

- ದೈಹಿಕವಾಗಿ ಒಂದು ಕಡೆ ಇದ್ದು, ಮನಸ್ಸು ಇನ್ನೊಂದು ಕಡೆ ಇರುವುದು ಸರಿಯಲ್ಲ. ಮನಸ್ಸು ಮತ್ತು ದೇಹವನ್ನು ನಿಮಗಾಗಿ ಕೆಲಸ ಮಾಡುವಂತೆ ಮಾಡಿ.

- ಓವರ್‌ ಥಿಂಕಿಂಗ್‌ ಅಥವಾ ಅತಿಯಾದ ಯೋಚನೆ ಎಂಬುದು ಇಲ್ಲ. ಯೋಗ್ಯವಾದುದನ್ನೇನಾದರೂ ಮಾಡಬೇಕಿದ್ದರೆ ಪ್ರತಿಯೊಬ್ಬರು ವಿಭಿನ್ನವಾಗಿ ಯೋಚಿಸಲೇಬೇಕು. ನೀವು ಅದನ್ನು ಒತ್ತಡ ಅಥವಾ ಆತಂಕ ಎಂದು ಕರೆಯಬಹುದು. ಆದರೆ ಮನಸ್ಸನ್ನು ಹೇಗೆ ಸರಿಯಾಗಿಟ್ಟುಕೊಳ್ಳಬೇಕು ಎಂಬುದು ಗೊತ್ತಿಲ್ಲದಿದ್ದಾಗ ಮಾತ್ರ ಘರ್ಷಣೆ, ಒತ್ತಡ ಸೃಷ್ಟಿಯಾಗುತ್ತದೆ.

- ಪರೀಕ್ಷೆಯ ಸಮಯದಲ್ಲಿ ಭೇದಿ ಮಾತ್ರೆ ಯಾಕೆ ಜಾಸ್ತಿ ಮಾರಾಟವಾಗುತ್ತದೆ ಎಂದು ನನಗೆ ಅಚ್ಚರಿಯಾಗಿತ್ತು. ನಂತರ ಇದು ಪರೀಕ್ಷಾ ಭಯದ ಪರಿಣಾಮ ಎಂಬುದು ಅರ್ಥವಾಯಿತು. ಶಿಕ್ಷಣ ಅಂದರೆ ಪರೀಕ್ಷೆ ಅಲ್ಲ, ನೀವು ಮುಂದಿನ ಹಂತಕ್ಕೆ ಹೋಗಲು ಸಮರ್ಥರೇ ಎಂಬುದನ್ನು ಪರಾಮರ್ಶೆ ಮಾಡುವ ಸಾಧನ ಅಷ್ಟೆ.