ಸಾರಾಂಶ
ತಮ್ಮ ದಿಟ್ಟತನದಿಂದ ಅಥವಾ ಅದೃಷ್ಟದಿಂದ ಸಾವನ್ನೇ ಜಯಿಸಿಬಂದ ಹಲವರ ಗಾಥೆಗಳಿವೆ. ಅವುಗಳ ಸಾಲಿಗೆ, ತಿಮಿಂಗಿಲದ ಹೊಟ್ಟೆಯೊಳಗೆ ಹೋಗಿ ಹೊರಬಂದ ನಾವಿಕನ ಕಥೆಯೂ ಇದೀಗ ಸೇರಿದೆ.
ಸ್ಯಾನ್ಟಿಯಾಗೋ(ಚಿಲಿ): ತಮ್ಮ ದಿಟ್ಟತನದಿಂದ ಅಥವಾ ಅದೃಷ್ಟದಿಂದ ಸಾವನ್ನೇ ಜಯಿಸಿಬಂದ ಹಲವರ ಗಾಥೆಗಳಿವೆ. ಅವುಗಳ ಸಾಲಿಗೆ, ತಿಮಿಂಗಿಲದ ಹೊಟ್ಟೆಯೊಳಗೆ ಹೋಗಿ ಹೊರಬಂದ ನಾವಿಕನ ಕಥೆಯೂ ಇದೀಗ ಸೇರಿದೆ.
ದಕ್ಷಿಣ ಅಮೆರಿಕದ ಚಿಲಿಯ ಪ್ಯಾಟಗೋನಿಯಾ ಎಂಬಲ್ಲಿ ಆಡ್ರಿಯನ್(24) ಎಂಬಾತ ತನ್ನ ತಂದೆಯೊಂದಿಗೆ ಕಯಾಕಿಂಗ್ ಮಾಡುತ್ತಿದ್ದ ವೇಳೆ ದೈತ್ಯ ತಿಮಿಂಗಿಲವೊಂದು ಆತನನ್ನು ನುಂಗಿ, ಮತ್ತೆ ಅತನನ್ನು ಹೊರಗೆ ಉಗಿದ ಅಚ್ಚರಿಯ ಘಟನೆ ನಡೆದಿದೆ. ಈ ದೃಶ್ಯವನ್ನು ಘಟನೆ ನಡೆದಲ್ಲಿಂದ ಕೊಂಚವೇ ದೂರದಲ್ಲಿದ್ದ ಆ್ಯಡ್ರಿಯನ್‌ನ ತಂದೆ ಡೆಲ್ ಸೆರೆಹಿಡಿದಿದ್ದಾರೆ.ತಿಮಿಂಗಿಲದ ಬಾಯಿಂದ ಹೊರಬಂದ ಆ್ಯಡ್ರಿಯನ್, ‘ನಾನು ಸತ್ತೇ ಹೋಗಿದ್ದೆ ಎಂದು ಭಾವಿಸಿದ್ದೆ’ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಆಗಿದ್ದೇನು?:ಸಮುದ್ರದಲ್ಲಿ ಕಯಾಕಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಂದ ತಿಮಿಂಗಿಲವೊಂದು ಆ್ಯಡ್ರಿಯನ್‌ನನ್ನು ನುಂಗಿದೆ. ಈ ದೃಶ್ಯವನ್ನು ಕೆಲವೇ ಮೀಟರ್ ದೂರದಲ್ಲಿದ್ದ ಅವರ ತಂದೆ ಡೆಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆದರೆ ಅದೃಷ್ಟವಶಾತ್ ತಿಂದ ಮರುಕ್ಷಣದಲ್ಲೇ ಆ್ಯಡ್ರಿಯನ್‌ನನ್ನು ಹೊರಗೆ ಉಗುಳಿದೆ.
ತಿಮಿಂಗಿಲದ ಬಾಯಿಂದ ಹೊರಬಂದ ಬಳಿಕ ಮಾತನಾಡಿದ ಆ್ಯಡ್ರಿಯನ್ ತಮ್ಮ ಅನುಭವ ಹಂಚಿಕೊಂಡಿದ್ದು, ‘ಹಿಂದಿನಿಂದ ಬಂದು ಏನೋ ತಾಗಿದಂತಾದಾಗ ನಾನು ಕೂಡಲೇ ಕಣ್ಮುಚ್ಚಿಕೊಂಡೆ. ಲೋಳೆಯಂತಹ ವಸ್ತು ನನ್ನ ಮುಖವನ್ನು ಮುಟ್ಟಿದಂತಾಯಿತು. ಮತ್ತೆ ಕಣ್ಬಿಟ್ಟಾಗ ತಿಮಿಂಗಿಲದ ಬಾಯೊಳಗಿದ್ದದ್ದು ಅರಿವಾಯಿತು. ಅದರ ಹೊಟ್ಟೆಯೊಳಗೆ ಕಡುನೀಲಿ, ಬಿಳಿ ಬಿಟ್ಟರೆ ಬೇರೆ ಬಣ್ಣ ಕಾಣುತ್ತಿರಲಿಲ್ಲ. ಮರುಕ್ಷಣವೇ ಅದು ನನ್ನನ್ನು ಹೊರಬಿಟ್ಟಾಗ ತಿಮಿಂಗಿಲ ನನ್ನನ್ನು ತಿನ್ನಲಿಲ್ಲ ಎಂದು ತಿಳಿಯಿತು. ಅದು ನನ್ನ ತಂದೆಗೇನಾದರೂ ಮಾಡಬಹುದು ಅಥವಾ ನಾನು ತಣ್ಣೀರಲ್ಲಿ ಸಾಯಬಹುದು ಎಂದು ಹೆದರಿದ್ದೆ. ಆದರೆ ಕೂಡಲೇ ತಂದೆಯವರ ದೋಣಿಗೆ ಬಂದೆ. ಅವರು ಚಿತ್ರೀಕರಿಸಿದ ವಿಡಿಯೋ ನೋಡಿದ ಮೇಲೆಯೇ ತಿಮಿಂಗಿಲ ಎಷ್ಟು ದೊಡ್ಡದಿತ್ತು ಎಂಬುದು ತಿಳಿಯಿತು. ಮೊದಲೇ ಅದನ್ನು ನೋಡಿದ್ದರೆ ಇನ್ನೂ ಭಯಭೀತನಾಗುತ್ತಿದ್ದೆ’ ಎಂದಿದ್ದಾರೆ.