ದೆಹಲಿ ಗಲಭೆಯ ಆರೋಪಿಗಳಾಗಿರುವ ಉಮರ್‌ ಖಾಲಿದ್‌ ಮತ್ತು ಶಾರ್ಜಿಲ್‌ ಇಮಾಂಗೆ ಸುಪ್ರೀಂ ಕೋರ್ಟ್‌ ಜಾಮೀನು ನಿರಾಕರಿಸಿದ ಬೆನ್ನಲ್ಲೇ, ಜವಾಹರಲಾಲ್‌ ನೆಹರು ವಿವಿಯ ಕೆಲ ವಿದ್ಯಾರ್ಥಿಗಳು ಪ್ರಧಾನಿ  ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ ಘಟನೆ ನಡೆದಿದೆ.

ನವದೆಹಲಿ: 2020ರ ದೆಹಲಿ ಗಲಭೆಯ ಪ್ರಮುಖ ಆರೋಪಿಗಳಾಗಿರುವ ಉಮರ್‌ ಖಾಲಿದ್‌ ಮತ್ತು ಶಾರ್ಜಿಲ್‌ ಇಮಾಂಗೆ ಸುಪ್ರೀಂ ಕೋರ್ಟ್‌ ಜಾಮೀನು ನಿರಾಕರಿಸಿದ ಬೆನ್ನಲ್ಲೇ, ಜವಾಹರಲಾಲ್‌ ನೆಹರು ವಿವಿಯ ಕೆಲ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಇದಕ್ಕೆ ಬಿಜೆಪಿ ಕಡೆಯಿಂದ ತೀವ್ರ ಖಂಡನೆ ವ್ಯಕ್ತವಾಗಿದ್ದು, ಜೆಎನ್‌ಯು ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದೆ.

ಆಗಿದ್ದೇನು?:

ಸೋಮವಾರ ರಾತ್ರಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ 30-35 ವಿದ್ಯಾರ್ಥಿಗಳು ಹಾಜರಿದ್ದರು. ಈ ವೇಳೆ ಕೆಲವರು, ‘ಜೆಎನ್‌ಯು ಮಣ್ಣಿನಲ್ಲಿ ಮೋದಿ ಮತ್ತು ಶಾ ಅವರ ಸಮಾಧಿ ತೋಡಲಾಗುವುದು’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ, ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

2016ರಲ್ಲಿ ಅಫ್ಜಲ್ ಗುರುವಿನ ಮರಣದಂಡನೆಯ ವಾರ್ಷಿಕೋತ್ಸವದಂದು ಪ್ರತಿಭಟನೆ ವೇಳೆ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಜೆಎನ್‌ಯುಎಸ್‌ಯು ಅಧ್ಯಕ್ಷನಾಗಿದ್ದ ಕನ್ಹಯ್ಯಾ ಕುಮಾರ್‌ನನ್ನು ಬಂಧಿಸಲಾಗಿತ್ತು. ಇದೀಗ ಈ ಪ್ರಕರಣದಲ್ಲೂ ಎಫ್‌ಐಆರ್‌ ಕೂಡ ದಾಖಲಾಗಿದ್ದು, ಘೋಷಣೆ ಕೂಗಿದವರ ಬಂಧನವಾಗುವ ಸಾಧ್ಯತೆಯಿದೆ.

ಬಿಜೆಪಿ ಖಂಡನೆ:

‘ಸುಪ್ರೀಂ ಕೋರ್ಟ್ ಆದೇಶದ ವಿರುದ್ಧದ ಪ್ರತಿಭಟನೆ ಸ್ವೀಕಾರಾರ್ಹವಲ್ಲ. ಇದು ವ್ಯವಸ್ಥೆಯ ಕುಸಿತಕ್ಕೆ ಕಾರಣವಾಗಬಹುದು’ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಆತಂಕ ವ್ಯಕ್ತಪಡಿಸಿದ್ದಾರೆ. ಕಾನೂನು ಸಚಿವ ಕಪಿಲ್ ಮಿಶ್ರಾ ಪ್ರತಿಕ್ರಿಯಿಸಿ, ‘ಹಾವುಗಳನ್ನು ಹೊಸಕಿ ಹಾಕಲಾಗುತ್ತಿರುವುದರಿಂದ ಅವುಗಳ ಮರಿಗಳು ಕಿರುಚುತ್ತಿವೆ. ಅಪರಾಧಿಗಳು, ನಕ್ಸಲೀಯರು ಮತ್ತು ಭಯೋತ್ಪಾದಕರನ್ನು ಬೆಂಬಲಿಸುವವರ ದುಷ್ಟ ಯೋಜನೆಗಳು ಭಗ್ನಗೊಳ್ಳುತ್ತಿರುವ ಕಾರಣ ಹತಾಶರಾಗಿದ್ದಾರೆ’ ಎಂದು ಹೇಳಿದ್ದಾರೆ.

ಜೆಎನ್‌ಯು ಪ್ರತಿಕ್ರಿಯೆ:

‘ಇದು ಸಾಂವಿಧಾನಿಕ ಸಂಸ್ಥೆಗೆ ಉದ್ದೇಶಪೂರ್ವಕ ಅಗೌರವವನ್ನು ತೋರಿಸುತ್ತದೆ. ಭಿನ್ನಾಭಿಪ್ರಾಯ, ನಿಂದನೆ ಮತ್ತು ದ್ವೇಷ ಭಾಷಣದ ವ್ಯತ್ಯಾಸಗಳನ್ನು ಅರಿತಿರಬೇಕು’ ಎಂದು ಜೆಎನ್‌ಯು ಅಸಮಾಧಾನ ವ್ಯಕ್ತಪಡಿಸಿದೆ. ಜತೆಗೆ ಘೋಷಣೆ ಕೂಗಿ ನ್ಯಾಯಾಂಗ ನಿಂದನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ಮನವಿ ಮಾಡಿ, ತನಿಖೆಯಲ್ಲಿ ಸಹಕರಿಸುವುದಾಗಿಯೂ ಹೇಳಿದೆ.