ತಿರುಪರಕುಂದ್ರಂ ಬೆಟ್ಟದ ಮೇಲಿರುವ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಕಲ್ಲುಗಂಬದ ಮೇಲೆ ಕಾರ್ತಿಕ ದೀಪ ಹಚ್ಚಲು ಹಿಂದೂಗಳಿಗೆ ಅನುಮತಿ ನೀಡಿ ಮದ್ರಾಸ್‌ ಹೈಕೋರ್ಟ್‌ನ ಮದುರೈ ವಿಭಾಗೀಯ ಪೀಠ ತೀರ್ಪು ನೀಡಿದೆ. ಈ ಮೂಲಕ ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿದಿದೆ.

ಮುದುರೈ: ತಿರುಪರಕುಂದ್ರಂ ಬೆಟ್ಟದ ಮೇಲಿರುವ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಕಲ್ಲುಗಂಬದ ಮೇಲೆ ಕಾರ್ತಿಕ ದೀಪ ಹಚ್ಚಲು ಹಿಂದೂಗಳಿಗೆ ಅನುಮತಿ ನೀಡಿ ಮದ್ರಾಸ್‌ ಹೈಕೋರ್ಟ್‌ನ ಮದುರೈ ವಿಭಾಗೀಯ ಪೀಠ ತೀರ್ಪು ನೀಡಿದೆ. ಈ ಮೂಲಕ ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿದಿದೆ.

ಇದೇ ವೇಳೆ, ‘ದೀಪ ಬೆಳಗುವಿಕೆಯಿಂದ ಸಾಮಾಜಿಕ ಶಾಂತಿಗೆ ಧಕ್ಕೆಯಾಗುತ್ತದೆ ಎಂಬ ಸರ್ಕಾರದ ವಾದ ಹಾಸ್ಯಾಸ್ಪದ. ರಾಜಕೀಯಕ್ಕಾಗಿ ಈ ಮಟ್ಟಕ್ಕೆ ಇಳಿಯಬಾರದು’ ಎಂದು ಡಿಎಂಕೆ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವುದಾಗಿ ಘೋಷಿಸಿದೆ.

ಕೋರ್ಟ್‌ ಹೇಳಿದ್ದೇನು?:

ತಿರುಪರಕುಂದ್ರಂ ಬೆಟ್ಟದ ಮೇಲಿರುವ ಕಂಬ ಮಸೀದಿಗೆ ಸೇರಿದ್ದು, ಅಲ್ಲಿ ದೀಪ ಬೆಳಗುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ದೂರು ದಾಖಲಾಗಿತ್ತು. ಜತೆಗೆ ಈ ಕ್ರಮ ಆಗಮಶಾಸ್ತ್ರ ನಿಯಮದ ಉಲ್ಲಂಘನೆ ಎಂದು ಸರ್ಕಾರ ವಾದಿಸಿತ್ತು. ಆದರೆ ಇದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾದ್ದರಿಂದ ಕೋರ್ಟ್‌ ಆ ವಾದವನ್ನು ಹಾಸ್ಯಾಸ್ಪದ ಎಂದು ಕರೆದಿದ್ದು, ದೀಪೋತ್ಸವಕ್ಕೆ ಅನುಮತಿ ನೀಡಿದೆ.

ಜತೆಗೆ, ತಿರುಪುರಕುಂದ್ರಂ ರಕ್ಷಿತ ಸ್ಮಾರಕವಾಗಿರುವುದರಿಂದ ಭಾರತೀಯ ಪುರಾತತ್ವ ಇಲಾಖೆ ಈ ಸಂಬಂಧ ಷರತ್ತುಗಳನ್ನು ವಿಧಿಸಲು ಮುಕ್ತವಾಗಿದೆ. ಬೆಟ್ಟದ ಮೇಲೆ ದೀಪ ಹಚ್ಚುವ ವೇಳೆ ದೇಗುಲದ ಪ್ರಾಧಿಕಾರದ ಜತೆಗೆ ಸಾರ್ವಜನಿಕರು ತೆರಳಬಾರದು. ಜಿಲ್ಲಾಧಿಕಾರಿ ಈ ಕಾರ್ಯಕ್ರಮವ ಉಸ್ತುವಾರಿ ವಹಿಸಿಕೊಳ್ಳಬೇಕು ಎಂದೂ ಸೂಚಿಸಿದೆ.

ಏನಿದು ವಿವಾದ?:

ಹಿಂದೂಗಳ ಪಾಲಿಗೆ ಪವಿತ್ರವಾಗಿರುವ ತಿರುಪರಕುಂದ್ರಂ ಬೆಟ್ಟದ ಮೇಲಿರುವ ಕಂಬದ ಮೇಲೆ ಕಾರ್ತಿಕ ದೀಪ ಬೆಳಗಲು ಹಿಂದೂಗಳು ಮುಂದಾಗಿದ್ದ ವೇಳೆ, ಬಳಿಯೇ ಮಸೀದಿಯಿದ್ದ ಕಾರಣ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣ ನೀಡಿ ಅದನ್ನು ತಡೆಯಲಾಗಿತ್ತು. ಇದರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಡಿ.1ರಂದು ನ್ಯಾ। ಸ್ವಾಮಿನಾಥನ್‌ ಅವರ ಏಕಸದಸ್ಯ ಪೀಠ ದೀಪ ಹಚ್ಚಲು ಅನುಮತಿ ನೀಡಿತ್ತು. ಆದರೆ, ಅದರ ಪಾಲನೆಯಾಗದಾಗ ಭಕ್ತರಿಗೆ ದೀಪ ಬೆಳಗಲು ಕೋರ್ಟ್‌ ಅನುಮತಿಸಿತ್ತು. ಇದನ್ನು ಸರ್ಕಾರ ಪಾಲಿಸದಿದ್ದಾಗ ಅದರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಈ ನಡುವೆ, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಕೆಯಾಗಿತ್ತು. ಅತ್ತ ನ್ಯಾ।ಸ್ವಾಮಿನಾಥನ್‌ ವಿರುದ್ಧ ವಾಗ್ದಂಡನೆಗೆ ಕೋರಿ ಕಾಂಗ್ರೆಸ್‌, ಡಿಎಂಕೆ ಹಾಗೂ ಮಿತ್ರಪಕ್ಷಗಳು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾರಿಗೆ ನೋಟಿಸ್‌ ಸಲ್ಲಿಸಿದ್ದವು.

ಬಿಜೆಪಿ ಪ್ರತಿಕ್ರಿಯೆ:

ವಿಭಾಗೀಯ ಪೀಠದ ತೀರ್ಪನ್ನು ಸ್ವಾಗತಿಸಿರುವ ಬಿಜೆಪಿ, ‘ಇದು ಹಿಂದೂಗಳಿಗೆ ಸಿಕ್ಕ ಜಯ’ ಎಂದು ಹರ್ಷಿಸಿದೆ. ‘ಡಿಎಂಕೆ ಹಾಗೂ ಮಿತ್ರಪಕ್ಷಗಳು ಹಿಂದೂ ಮತ್ತು ಸನಾತನ ವಿರೋಧಿ ನಿಲುವು ಹೊಂದಿವೆ. ಅವರಿಗೆ ಈ ತೀರ್ಪಿನಿಂದ ಕಪಾಳಮೋಕ್ಷ ಮಾಡಿದಂತಾಗಿದೆ’ ಎಂದು ಬಿಜೆಪಿ ಮುಖಂಡ ಪಿಯೂಷ್‌ ಗೋಯಲ್‌ ಹೇಳಿದ್ದಾರೆ.