ಸಾರಾಂಶ
ಸೋಲ್: ರಾತ್ರೋರಾತ್ರಿ ದೇಶದಲ್ಲಿ ತುರ್ತುಸ್ಥಿತಿ ಹೇರಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಕೊನೆಗೂ ವಾಗ್ದಂಡನೆಗೆ ಗುರಿ ಮಾಡಲಾಗಿದೆ.
ಈ ಮೊದಲೊಮ್ಮೆ ಅವರನ್ನು ವಾಗ್ದಂಡನೆ ಗುರಿ ಮಾಡಲಾಗಿತ್ತಾದರೂ ಬಹುಮತವಿಲ್ಲದ ಕಾರಣ ಅದು ಸಾಧ್ಯವಾಗಿರಲಿಲ್ಲ.
2ನೇ ಯತ್ನದಲ್ಲಿ, 300 ಸದಸ್ಯ ಬಲದ ಸಂಸತ್ತಿನಲ್ಲಿ 204 ಸಂಸದರು ವಾಗ್ದಂಡನೆ ಪರ ಮತ ಚಲಾಯಿಸಿದ್ದು, 85 ಮತಗಳು ಇದಕ್ಕೆ ವಿರುದ್ಧವಾಗಿದ್ದವು. ಇದರೊಂದಿಗೆ ಯೋಲ್‌ರ ಪದಚ್ಯುತಿಯಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ಹನ್ ಡಕ್ ಸೂ ಅವರನ್ನು ಮಧ್ಯಂತರ ಅಧ್ಯಕ್ಷರಾಗಿ ನೇಮಿಸಲಾಗಿದೆ.
ಪದಚ್ಯುತ ಯೋಲ್‌ರನ್ನು ಮತ್ತೆ ಅಧ್ಯಕ್ಷರಾಗಿ ನೇಮಿಸುವ ಅಥವಾ ತೆಗೆದುಹಾಕುವ ಬಗ್ಗೆ ಅಲ್ಲಿನ ನ್ಯಾಯಾಲಯ ನಿರ್ಧರಿಸಲಿದೆ.
ದಿಲ್ಲಿಯಲ್ಲಿ ಮತ್ತೆ 6 ಶಾಲೆಗಳಿಗೆ ಬಾಂಬ್ ಬೆದರಿಕೆ
ನವದೆಹಲಿ: ದೆಹಲಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ಕರೆ ಶನಿವಾರವೂ ಮಂದುವರೆದಿದ್ದು, ಮತ್ತೆ 6 ಶಾಲೆಗಳಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆಯನ್ನು ಹಾಕಿದ್ದಾರೆ. ಇದು ವಾರದಲ್ಲಿ ನಡೆದ ಮೂರನೇ ಘಟನೆಯಾಗಿದೆ.
ಶಾಲೆಗಳಿಗೆ ಬೆಳಿಗ್ಗೆ childrenofallah@outlook.com ವಿಳಾಸದಿಂದ ಬೆದರಿಕೆ ಕರೆ ಬರುತ್ತಿದ್ದಂತೆ ಪೊಲೀಸರು ತಪಾಸಣೆ ಕೈಗೊಂಡಿದ್ದರು. ಆದರೆ ಈ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.
ಕೇಜ್ರಿವಾಲ್ ಕಿಡಿ:ಮತ್ತೊಂದೆಡೆ ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಕಿಡಿ ಕಾರಿದ್ದಾರೆ. ‘ದೆಹಲಿಯನ್ನು ಅಪರಾಧದ ರಾಜಧಾನಿಯನ್ನಾಗಿ ಮಾಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ’ ಎಂದು ಶಾಗೆ ಪತ್ರ ಬರೆದಿದ್ದಾರೆ.
ಜ.1ರಿಂದ ರೈತರಿಗೆ 2ಲಕ್ಷ ವರೆಗೆ ಖಾತರಿ ರಹಿತ ಸಾಲ: ಆರ್‌ಬಿಐ ಆದೇಶ
ನವದೆಹಲಿ: ಮುಂದಿನ ವರ್ಷ ಜ.1ರಿಂದ ಜಾರಿಗೆ ಬರುವಂತೆ ರೈತರ ಖಾತರಿ ರಹಿತ ಸಾಲದ ಮಿತಿಯನ್ನು 1.6 ಲಕ್ಷ ದಿಂದ 2 ಲಕ್ಷ ರು.ಗೇರಿಸಿ ಆರ್‌ಬಿಐ ಆದೇಶಿಸಿದೆ. ಆರ್‌ಬಿಐನ ಈ ನಡೆಯಿಂದ ದೇಶದ ಸಣ್ಣ ಮತ್ತು ಬಡ ರೈತರಿಗೆ ಅನುಕೂಲ ಆಗಲಿದೆ.ಕೃಷಿ ಸಚಿವಾಲಯ ಪ್ರಕಾರ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಕ್ಕೆ ಪರಿಹಾರವಾಗಿ ಮತ್ತು ಕೃಷಿ ಸಾಲದಲ್ಲಿ ಸುಧಾರಣೆ ತರಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ದೇಶದಲ್ಲಿ ಶೇ.86ರಷ್ಟಿರುವ ಸಣ್ಣ ಮತ್ತು ಬಡ ರೈತರಿಗೆ ಅನುಕೂಲ ಆಗಲಿದೆ. ಶೇ.4 ಬಡ್ಡಿದರದಲ್ಲಿ 3ಲಕ್ಷ ವರೆಗೆ ಸಾಲ ನೀಡುವ ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಸುಧಾರಿತ ಬಡ್ಡಿ ಸಹಾಯಧನ ಯೋಜನೆಯ ಅನುಕೂಲ ಪಡೆಯುವುದು ರೈತರಿಗೆ ಮತ್ತಷ್ಟು ಸುಲಭವಾಗಲಿದೆ.
ಹಿರಿಯ ಕಾಂಗ್ರೆಸ್ ಮುಖಂಡ ಇಳಂಗೋವನ್ ಇನ್ನಿಲ್ಲ
ಚೆನ್ನೈ: ತಮಿಳುನಾಡಿನ ಈರೋಡ್ ಪೂರ್ವ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಇ.ವಿ.ಕೆ.ಎಸ್ ಇಳಂಗೋವನ್ (75) ನಿಧನರಾದರು.ಅನಾರೋಗ್ಯದ ಹಿನ್ನೆಲೆಯಲ್ಲಿ ಇಳಂಗೋವನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಇಳಂಗೋವನ್ 1984ರಲ್ಲಿ ಇಂದಿರಾಗಾಂಧಿ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಸತ್ಯಮಂಗಲದಿಂದ ಕಾಂಗ್ರೆಸ್ ಶಾಸಕರಾಗಿ ಪ್ರಥಮ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1996-2001ರವರೆಗೆ ತಮಿಳುನಾಡು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2004ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು, ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಜವಳಿ ಸಚಿವರಾಗಿದ್ದರು.
ಸಾವರ್ಕರ್ ಬಗ್ಗೆ ಹೇಳಿಕೆ ನಿಲ್ಲಿಸಿ: ಕಾಂಗ್ರೆಸ್‌ಗೆ ಶಿವಸೇನೆ ಆಗ್ರಹ
ಮುಂಬೈ: ಸ್ವಾತಂತ್ರ್ಯ ವೀರ ಸಾವರ್ಕರ್ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾಡಿದ ಟೀಕೆ ಇಂಡಿಯಾ ಕೂಟದಲ್ಲಿ ಒಡಕು ಸೃಷ್ಟಿಸಿದೆ. ‘ಕಾಂಗ್ರೆಸ್ ಹಾಗೂ ಬಿಜೆಪಿ ಸಾವರ್ಕರ್ ಮತ್ತು ನೆಹರು ಬಗ್ಗೆ ಟೀಕೆ ನಿಲ್ಲಿಸಬೇಕು’ ಎಂದು ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಆಗ್ರಹಿಸಿದ್ದಾರೆ. ಸಾವರ್ಕರ್ ಬಗ್ಗೆ ಮಹಾರಾಷ್ಟ್ರದಲ್ಲಿ ಸಾವರ್ಕರ್ ಬಗ್ಗೆ ಗೌರವ ಭಾವನೆ ಇದ್ದು, ಈ ಕಾರಣ ಆದಿತ್ಯ ಈ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಅರ್ಹತೆಯಿಂದ ನಾಯಕನಾಗಲಿ, ಹಕ್ಕು ಸಾಧಿಸಿ ಅಲ್ಲ: ಒಮರ್
ನವದೆಹಲಿ: ಐಎನ್‌ಡಿಐಎ ಒಕ್ಕೂಟದಲ್ಲಿ ನಾಯಕತ್ವವನ್ನು ಅರ್ಹತೆಯಿಂದ ಗಳಿಸಬೇಕೇ ಹೊರತು ಅತಿದೊಡ್ಡ ಪಕ್ಷ ಎಂಬ ಕಾರಣಕ್ಕೆ ತಾನೇ ನಾಯಕ ಎಂದು ಭಾವಿಸಬಾರದು. ಕಾಂಗ್ರೆಸ್ ತನ್ನ ನಾಯಕತ್ವಕ್ಕೆ ತಕ್ಕುದಾದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಸಮಾಧಾನ ಹೊರಹಾಕಿದ್ದಾರೆ.ಶನಿವಾರ ಪಿಟಿಐಗೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟದಲ್ಲಿ ಕಾಂಗ್ರೆಸ್ ನಾಯಕತ್ವದ ಕುರಿತು ಅಸಮಾಧಾನ ಹೆಚ್ಚುತ್ತಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ.
ದೇಶಾದ್ಯಂತ ಅಸ್ತಿತ್ವ ಹೊಂದಿರುವ ಮತ್ತು ಸಂಸತ್ತಿನಲ್ಲಿ ಕಾಂಗ್ರೆಸ್ ಅತಿದೊಡ್ಡ ಪ್ರತಿಪಕ್ಷ ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ಐಎನ್‌ಐಡಿಎ ಒಕ್ಕೂಟದಲ್ಲಿ ಕಾಂಗ್ರೆಸ್ ನಾಯಕನ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರಳಿಸುವಂತೆ ಹೋರಾಟದ ವಿಚಾರ ಮುಂದಿಟ್ಟುಕೊಂಡು ಒಮರ್ ಅಬ್ದುಲ್ಲಾ ಪ್ರಶ್ನೆ ಎತ್ತಿದ್ದಾರೆ.
ಕಾಂಗ್ರೆಸ್ ತನಗೆ ಸಿಕ್ಕಿರುವ ನಾಯಕತ್ವದ ಸ್ಥಾನಕ್ಕೆ ತಕ್ಕುದಾದ ಮತ್ತು ಅದನ್ನು ಉಳಿಸಿಕೊಳ್ಳುವ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂಬ ಅಸಮಾಧಾನ ಐಎನ್‌ಡಿಐಎ ಕೆಲ ಮಿತ್ರಪಕ್ಷಗಳಲ್ಲಿದೆ. ಈ ಕುರಿತು ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.