ಕೋವಿಡ್‌ ಅಕ್ರಮ ಕುರಿತು ರಾಜ್ಯದಲ್ಲಿ ಮೊದಲ ಎಫ್‌ಐಆರ್‌ ದಾಖಲಾಗಿದ್ದಕ್ಕೆ ಬಿಜೆಪಿಗರು ತೀವ್ರ ಗರಂ

| Published : Dec 15 2024, 02:01 AM IST / Updated: Dec 15 2024, 04:39 AM IST

ಕೋವಿಡ್‌ ಅಕ್ರಮ ಕುರಿತು ರಾಜ್ಯದಲ್ಲಿ ಮೊದಲ ಎಫ್‌ಐಆರ್‌ ದಾಖಲಾಗಿದ್ದಕ್ಕೆ ಬಿಜೆಪಿಗರು ತೀವ್ರ ಗರಂ
Share this Article
  • FB
  • TW
  • Linkdin
  • Email

ಸಾರಾಂಶ

ಕೋವಿಡ್‌ ಅಕ್ರಮ ಕುರಿತು ರಾಜ್ಯದಲ್ಲಿ ಮೊದಲ ಎಫ್‌ಐಆರ್‌ ದಾಖಲಾಗಿದ್ದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ದ್ವೇಷದ ರಾಜಕಾರಣ, ಪ್ರತಿಪಕ್ಷವನ್ನು ಬೆದರಿಸುವ ತಂತ್ರ ಎಂದು ಕಿಡಿಕಾರಿದೆ.

  ನವದೆಹಲಿ/ಬೆಂಗಳೂರು : ಕೋವಿಡ್‌ ಅಕ್ರಮ ಕುರಿತು ರಾಜ್ಯದಲ್ಲಿ ಮೊದಲ ಎಫ್‌ಐಆರ್‌ ದಾಖಲಾಗಿದ್ದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದು ದ್ವೇಷದ ರಾಜಕಾರಣ, ಪ್ರತಿಪಕ್ಷವನ್ನು ಬೆದರಿಸುವ ತಂತ್ರ ಎಂದು ಕಿಡಿಕಾರಿದೆ. ಅಲ್ಲದೆ ಕೊರೋನಾ ವೇಳೆ ಜನರನ್ನು ಬದುಕಿಸುವುದು ಮುಖ್ಯವಾಗಿತ್ತು. ಯಾವ ಔಷಧ, ಉಪಕರಣಗಳೂ ಇರಲಿಲ್ಲ. ಹೇಳಿದಷ್ಟು ದರ ಕೊಡುವುದು ಅನಿವಾರ್ಯವಾಗಿತ್ತು ಎಂದು ಹೇಳಿದೆ.

ಈ ಸಂಬಂಧ ಬಿಜೆಪಿ ಹಿರಿಯ ನಾಯಕರೂ ಸಂಸದರಾದ ಜಗದೀಶ್‌ ಶೆಟ್ಟರ್‌, ಗೋವಿಂದ ಕಾರಜೋಳ ಹಾಗೂ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಪ್ರತ್ಯೇಕ ಹೇಳಿಕೆ ನೀಡಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ ಕ್ರಮವನ್ನು ಖಂಡಿಸಿದ್ದಾರೆ.

ಇದು ದ್ವೇಷದ ರಾಜಕಾರಣ- ಶೆಟ್ಟರ್‌:

ದೆಹಲಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರು, ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ವಾಲ್ಮೀಕಿ ನಿಗಮದಲ್ಲಿ ನೂರಾರು ಕೋಟಿ ರು. ಹಗರಣ ಆಯ್ತು. ನಂತರ ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸ್ಥಿತಿ ಕೂಡ ಉದ್ಭವವಾಗಿತ್ತು. ಈ ಬಗ್ಗೆ ಬಿಜೆಪಿ ನಡೆಸಿದ ತೀವ್ರ ಹೋರಾಟದ ಹಿನ್ನೆಲೆಯಲ್ಲಿ ಕೌಂಟರ್ ಮಾಡಲು ಈಗ ಕೋವಿಡ್‌ ಎಫ್‌ಐಆರ್ ದಾಖಲಿಸಿದ್ದಾರೆಂದು ಆಪಾದಿಸಿದರು.

ಕೋವಿಡ್ ಪ್ರಕರಣ ಕುರಿತಂತೆ ತನಿಖೆಗೆ ನೇಮಿಸಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದ ಆಯೋಗದ ಅಂತಿಮ ವರದಿ ಇನ್ನೂ ಬಂದಿಲ್ಲ. ಮಧ್ಯಂತರ ವರದಿಯ ಆಧಾರದ ಮೇಲೆಯೇ ಎಫ್ಐಆರ್‌ ದಾಖಲಿಸಿದ್ದು ದ್ವೇಷ ರಾಜಕಾರಣದ ತಾಜಾ ಉದಾಹರಣೆ. ಕಾನೂನು ರೀತಿಯಲ್ಲಿ ಈ ಪ್ರಕರಣ ನಿಲ್ಲಲ್ಲ. ಎಫ್‌ಐಆರ್‌ ದಾಖಲಿಸಿದ ತಕ್ಷಣವೇ ಏನೂ ಆಗಲ್ಲ. ಅದನ್ನು ಗಂಭೀರ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದರು.

ತನಿಖೆಯೇ ತಪ್ಪು- ಕಾರಜೋಳ:

ಮಾಜಿ ಉಪ ಮುಖ್ಯಮಂತ್ರಿ, ಸಂಸದ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿ, ಕೋವಿಡ್ ವೇಳೆ ಜನರನ್ನು ಬದುಕಿಸುವುದು ಮುಖ್ಯ ಸವಾಲಾಗಿತ್ತು. ನಮ್ಮಲ್ಲಿ ಬೇಕಾದ ಔಷಧ, ಉಪಕರಣ ಇರಲಿಲ್ಲ. ಯಾರ ಬಳಿ ಔಷಧ, ಉಪಕರಣ ಇತ್ತೋ ಅವರಿಂದ ಅವರು ಹೇಳಿದ ದರಕ್ಕೆ ಖರೀದಿಸುವುದು ಅನಿವಾರ್ಯವಾಗಿತ್ತು. 3 ಲೇಯರ್ ಮಾಸ್ಕ್‌ ಈಗ 4-5 ರು.ಆಗುತ್ತೆ. ಆಗ 10 ರು. ಕೇಳಿದರೂ ಕೊಟ್ಟು ಖರೀದಿಸಬೇಕಾಯಿತು. ಈಗ ತನಿಖೆ ಮಾಡುತ್ತಿರುವುದು ತಪ್ಪು. ದ್ವೇಷದ ರಾಜಕಾರಣ ಎಂದರು. ಹೆದರಿಸುವ ಯತ್ನ- ಅಶೋಕ್‌:

ಮುಡಾ ಮತ್ತು ವಾಲ್ಮೀಕಿ ಹಗರಣವನ್ನು ಬಿಜೆಪಿಯು ಒಂದು ತಾರ್ಕಿಕ ಅಂತ್ಯದತ್ತ ಒಯ್ಯುತ್ತಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಕೋವಿಡ್ ಪ್ರಕರಣದಲ್ಲಿ ಎಫ್​ಐಅರ್ ದಾಖಲಿಸಿ ಹೆದರಿಸುವ ಪ್ರಯತ್ನ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಕೋವಿಡ್ ಹಾವಳಿ ಕೊನೆಗೊಂಡು 4 ವರ್ಷ ಕಳೆದಿವೆ. ಇಷ್ಟು ದಿನ ಕಾಂಗ್ರೆಸ್ ನಾಯಕರು ಕಳ್ಳೇಕಾಯಿ ತಿನ್ನುತ್ತಿದ್ದರಾ ಎಂದು ಆಕ್ಷೇಪಿಸಿದ ಅವರು, ಕೋವಿಡ್ ವೇಳೆ ನಾವೆಲ್ಲ ಆಗ 8-10 ಗಂಟೆ ಕೆಲಸ ಮಾಡಿದ್ದೇವೆ. ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ನಾಯಕರು ಮೂರು ತಿಂಗಳು ಮನೆಯಿಂದ ಹೊರಬಂದಿರಲಿಲ್ಲ ಎಂದು ಆರೋಪಿಸಿದರು.