ಕೆಮ್ಮಿನ ಸಿರಪ್‌ ಕುಡಿಸಿ ಮಗನ ಹತ್ಯೆ ಮಾಡಿದ್ಲಾ ಸೂಚನಾ?

| Published : Jan 11 2024, 01:31 AM IST / Updated: Jan 11 2024, 10:34 AM IST

ಸಾರಾಂಶ

ಗೋವಾ ಫ್ಲ್ಯಾಟ್‌ನಲ್ಲಿ ಕೆಮ್ಮಿನ 2 ಸಿರಪ್‌ ಬಾಟಲಿ ಪತ್ತೆಯಾಗಿದ್ದು, ಸಿರಪ್‌ ಕುಡಿದಾಗ ಮಗನಿಗೆ ಚೆನ್ನಾಗಿ ನಿದ್ದೆ ಬಂದಿತ್ತು. ಆಗ ಮುಖಕ್ಕೆ ದಿಂಬು ಒತ್ತಿ ಉಸಿರುಗಟ್ಟಿಸಿ ತಾಯಿ ಸೂಚನಾ ಸೇಠ್‌ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪಣಜಿ: ಗೋವಾದಲ್ಲಿ ತನ್ನ 4 ವರ್ಷದ ಮಗನನ್ನು ಕೊಂದಿರುವ ಬೆಂಗಳೂರಿನ ಸ್ಟಾರ್ಟಪ್‌ ಸಿಇಒ ಸೂಚನಾ ಸೇಠ್‌, ತನ್ನ ಬಾಲಕನನ್ನು ಟವೆಲ್ ಅಥವಾ ದಿಂಬನ್ನು ಬಳಸಿ ಕೊಂದಿದ್ದಾರೆ. ಇದಕ್ಕೆ ಸ್ಮಥರಿಂಗ್‌ ಎನ್ನುತ್ತಾರೆ ಎಂದು ಬಾಲಕನ ಪೋಸ್ಟ್‌ಮಾರ್ಟಂ ನಡೆಸಿದ ಕರ್ನಾಟಕದ ಹಿರಿಯೂರು ವೈದ್ಯರು ತಿಳಿಸಿದ್ದಾರೆ. 

ಏತನ್ಮಧ್ಯೆ, ‘ಬಾಲಕನ ಕೊಲೆಯು ಯೋಜಿತವಾಗಿದೆ. ಇದಕ್ಕೆ ಇಂಬು ನೀಡುವಂತೆ ಕೊಲೆ ನಡೆದ ಫ್ಲ್ಯಾಟ್‌ನಲ್ಲಿ 2 ಕೆಮ್ಮಿನ ಸಿರಪ್‌ ಬಾಟಲಿ ಲಭಿಸಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮಗನನ್ನು ಕೊಲೆ ಮಾಡುವ ಮುನ್ನ ಆತನಿಗೆ ಸೂಚನಾ ಚೆನ್ನಾಗಿ ಕೆಮ್ಮಿನ ಸಿರಪ್‌ ಕುಡಿಸಿರಬಹುದು. ಈ ಸಿರಪ್‌ಗಳು ನಿದ್ರೆ ಬರುವಂತೆ ಮಾಡುತ್ತವೆ. ಹೀಗಾಗಿ ಸಿರಪ್‌ ಕುಡಿದ ಬಾಲಕ ನಿದ್ದೆ ಹೋದಾಗ, ಆತನ ಮುಖಕ್ಕೆ ದಿಂಬು ಅಥವಾ ಟವಲ್‌ ಬಳಸಿ ಒತ್ತಿ ಸೂಚನಾ ಕೊಂದಿದ್ದಾಳೆ. 

ಬಾಲಕ ನಿದ್ರೆ ಹೋದ ಕಾರಣ ಸಾಯುವಾಗ ಯಾವುದೇ ಹೋರಾಡಿದ ಕುರುಹು ಪತ್ತೆಯಾಗಿಲ್ಲ ಎಂದು ಶವಪರೀಕ್ಷೆ ನಡೆಸಿದ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ನಡೆದ ಫ್ಲಾಟ್‌ನಲ್ಲಿ 23 ಕೆಮ್ಮಿನ ಸಿರಪ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 1 ಬಾಟಲಿಯನ್ನು ಸೂಚನಾ ತಂದಿದ್ದು, ಇನ್ನೊಂದನ್ನು ಆಕೆಯ ಕೋರಿಕೆಯ ಮೇರೆಗೆ ಅಪಾರ್ಟ್‌ಮೆಂಟ್‌ ಸಿಬ್ಬಂದಿ ಒದಗಿಸಿದ್ದರು ಎಂದು ಮೂಲಗಳು ಹೇಳಿವೆ.