ಸಾರಾಂಶ
ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ ದೃಷ್ಟಿಯಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಣಿಪುರದ ಇಂಫಾಲದಿಂದ ಮುಂಬೈಗೆ ಕಾಂಗ್ರೆಸ್ ವತಿಯಿಂದ ನಡೆಸಲು ಉದ್ದೇಶಿಸಲಾದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಕೊನೆಗೂ ಮಣಿಪುರ ಸರ್ಕಾರ ಷರತ್ತಿನ ಅನುಮತಿ ನೀಡಿದೆ.
ಇಂಫಾಲ್: ಲೋಕಸಭಾ ಚುನಾವಣೆಗೆ ಪಕ್ಷ ಸಂಘಟನೆ ದೃಷ್ಟಿಯಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಣಿಪುರದ ಇಂಫಾಲದಿಂದ ಮುಂಬೈಗೆ ಕಾಂಗ್ರೆಸ್ ವತಿಯಿಂದ ನಡೆಸಲು ಉದ್ದೇಶಿಸಲಾದ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಕೊನೆಗೂ ಮಣಿಪುರ ಸರ್ಕಾರ ಷರತ್ತಿನ ಅನುಮತಿ ನೀಡಿದೆ.
ಪೂರ್ವ ಇಂಫಾಲ್ ಜಿಲ್ಲಾಧಿಕಾರಿ ನೀಡಿರುವ ಅನುಮತಿಯಲ್ಲಿ ಯಾತ್ರೆಯನ್ನು ಸೀಮಿತ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಹಫ್ತಾ ಕಾಂಜೀಬಂಗ್ ಕ್ರೀಡಾಂಗಣದಲ್ಲಿ ಬಾವುಟ ಹಾಯಿಸಿ ಉದ್ಘಾಟನೆ ಮಾಡಲು ಅನುಮತಿ ನೀಡಲಾಗಿದೆ.
ಮಣಿಪುರದಲ್ಲಿ ಹಿಂಸಾಚಾರ ನಡೆದಾಗಿನಿಂದ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಹೆಚ್ಚು ಜನ ಸೇರಿದರೆ ಕಾನೂನು ಸುವ್ಯವಸ್ಥೆಗೆ ಹದಗೆಡುವ ಸಂಭವವಿರುವ ಕಾರಣ ಈ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.
ಈ ನಡುವೆ ಕಾಂಗ್ರೆಸ್ ಪಕ್ಷದಿಂದ ಸರ್ಕಾರ ಅನುಮತಿ ನೀಡಿದ ಕಡೆ ಯಾತ್ರೆಯನ್ನು ಉದ್ಘಾಟಿಸುವ ಕುರಿತು ಅಧಿಕೃತ ತೀರ್ಮಾನ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ಯಾವುದೇ ಷರತ್ತು ಇಲ್ಲದೆ ಬೃಹತ್ ಜನರನ್ನು ಸೇರಿಸುವ ಪ್ರದೇಶದಲ್ಲಿ ಅನುಮತಿ ಕೋರಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಪಕ್ಷದ ವಲಯದಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.
ಇದಕ್ಕೂ ಮೊದಲು ಇಂಫಾಲದ ಪ್ಯಾಲೆಸ್ ಗ್ರೌಂಡ್‌ನಲ್ಲಿ ಯಾತ್ರೆಗೆ ಕೋರಿದ್ದ ಅನುಮತಿಯನ್ನು ಮಣಿಪುರ ಸರ್ಕಾರ ತಿರಸ್ಕರಿಸಿತ್ತು. ಭಾರತ್ ಜೊಡೊ ನ್ಯಾಯ ಯಾತ್ರೆಯನ್ನು ಜ.14 ರಿಂದ ಮಾ.20ರವರೆಗೆ ಮಣಿಪುರದಿಂದ 12 ರಾಜ್ಯಗಳ ಮೂಲಕ 66 ದಿನಗಳ ಕಾಲ ಪಶ್ಚಿಮ ಅರಬ್ಬಿ ಸಮುದ್ರ ತೀರದಲ್ಲಿರುವ ಮುಂಬೈಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಲಾಗಿದೆ.