ಸದ್ಗುರುಗೆ ದಿಢೀರ್‌ ಮೆದುಳಿನ ಶಸ್ತ್ರಚಿಕಿತ್ಸೆ!

| Published : Mar 21 2024, 01:01 AM IST

ಸಾರಾಂಶ

ಢೀರ್‌ ಪ್ರಾಣಾಂತಿಕ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದ ಈಶ ಫೌಂಡೇಶನ್‌ನ ಸದ್ಗುರು (66) ಅವರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ

ನವದೆಹಲಿ: ದಿಢೀರ್‌ ಪ್ರಾಣಾಂತಿಕ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದ ಈಶ ಫೌಂಡೇಶನ್‌ನ ಸದ್ಗುರು (66) ಅವರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಸದ್ಗುರು ಚೇತರಿಸಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿಯಾಗಿ ಗಣ್ಯರು ಶೀಘ್ರ ಚೇತರಿಗೆ ಹಾರೈಸಿದ್ದಾರೆ.ಈ ನಡುವೆ ಆಸ್ಪತ್ರೆಯ ಬೆಡ್‌ನಿಂದಲೇ ಜಾಲತಾಣದಲ್ಲಿ ಪೋಸ್ಟ್‌ ಹಾಕಿರುವ ಸದ್ಗುರು, ಶೀಘ್ರ ಚೇತರಿಕೆಗೆ ಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.ದಿಢೀರ್‌ ಅನಾರೋಗ್ಯ: ಸದ್ಗುರು ಅವರಿಗೆ ಕೆಲ ದಿನಗಳ ಹಿಂದೆ ಸತತವಾಗಿ ತಲೆ ನೋವು ಕಾಣಿಸಿಕೊಂಡಿತ್ತು. ಅದು 4 ವಾರಗಳ ಕಾಲ ಹಾಗೆಯೇ ಮುಂದುವರೆದಿತ್ತು. ಇದರ ಹೊರತಾಗಿಯೂ ಅವರು ತಮ್ಮ ದೈನಂದಿನ ಕಾರ್ಯಕಲಾಪ, ಮಹಾಶಿವರಾತ್ರಿ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗಿಯಾಗಿದ್ದರು.ಆದರೆ ಮಾ.15ರಂದು ಸಮಸ್ಯೆ ತೀವ್ರಗೊಂಡಿತ್ತು. ಆಗ ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಡಾ.ಸೂರಿ ಅವರನ್ನು ಸಂಪರ್ಕಿಸಿದ್ದರು. ಬಳಿಕ ಅವರ ಸಲಹೆಯಂತೆ ಎಂಆರ್‌ಐ ಸ್ಕ್ಯಾನ್‌ ಮಾಡಿಸಲಾಗಿತ್ತು. ಈ ವೇಳೆ ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಕಂಡುಬಂದಿತ್ತು. ಪರೀಕ್ಷೆ ವೇಳೆ 3-4 ವಾರಗಳಿಂದ ರಕ್ತಸ್ರಾವ ಆಗಿದ್ದು ಖಚಿತಪಟ್ಟಿತ್ತು. ಹೀಗಾಗಿ ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದರು.ಆದರೆ ಮಾ.15-16ರಂದು ಪೂರ್ವನಿಗದಿತ ಕಾರ್ಯಕ್ರಮಗಳಿದ್ದ ಕಾರಣ ನೋವು ನಿವಾರಕ ಔಷಧ ಸೇವಿಸಿ ಸದ್ಗುರು ತಮ್ಮ ದೈನಂದಿನ ಕಾರ್ಯಕಲಾಪ ನಡೆಸಿಕೊಟ್ಟಿದ್ದರು.ಆದರೆ ಮಾ.17ರ ವೇಳೆಗೆ ಅವರಲ್ಲಿ ನಿಶ್ಯಕ್ತಿ, ಪ್ರಜ್ಞಾವಸ್ಥೆಯಲ್ಲಿ ಇಳಿಕೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಅಂದೇ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಯ್ತು ಎಂದು ಡಾ.ಸೂರಿ ತಿಳಿಸಿದ್ದಾರೆ.ವೇಗದ ಚೇತರಿಕೆ: ಶಸ್ತ್ರಚಿಕಿತ್ಸೆ ಬಳಿಕ ಸದ್ಗುರು ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದೆ. ಸದ್ಯ ಆತಂಕಕ್ಕೆ ಯಾವುದೇ ಕಾರಣವಿಲ್ಲ. ನಮ್ಮ ಚಿಕಿತ್ಸೆಯ ಜೊತೆಗೆ ಸ್ವತಃ ಸದ್ಗುರು ತಮ್ಮ ಶಕ್ತಿಯಿಂದ ತಾವೇ ಚೇತರಿಸಿಕೊಳ್ಳುತ್ತಿದ್ದಾರೆ. ಗಂಭೀರ ಪರಿಸ್ಥಿತಿಯ ಹೊರತಾಗಿಯೂ ಅದನ್ನು ಹೇಗೆ ಧೈರ್ಯವಾಗಿ ಎದುರಿಸಬಹುದು ಎಂಬುದನ್ನು ಸದ್ಗುರು ತೋರಿಸಿಕೊಟ್ಟಿದ್ದಾರೆ ಎಂದು ಡಾ.ಸೂರಿ ಹೇಳಿದ್ದಾರೆ.ಬೆಡ್‌ ಮೇಲೂ ಹಾಸ್ಯ: ಈ ನಡುವೆ ತಮ್ಮ ಚಿಕಿತ್ಸೆ ಕುರಿತು ಲಘು ದಾಟಿಯಲ್ಲಿ ಮಾಹಿತಿ ಹಂಚಿಕೊಂಡಿರುವ ಸದ್ಗುರು, ‘ಅಪೋಲೋ ಆಸ್ಪತ್ರೆಯ ನರರೋಗ ತಜ್ಞರು, ನನ್ನ ತಲೆಬುರುಡೆಯನ್ನು ಕತ್ತರಿಸಿ ಏನಾದರೂ ಪತ್ತೆಯಾಗುವುದೇ ಎಂದು ಹುಡುಕಾಡಿದ್ದಾರೆ. ಆದರೆ ಅಲ್ಲಿ ಏನೂ ಸಿಕ್ಕಿಲ್ಲ; ಅದು ಸಂಪೂರ್ಣ ಖಾಲಿ ಎಂದು ಕೈಚೆಲ್ಲಿ ಹೊಲಿಗೆ ಹಾಕಿ ಸುಮ್ಮನಾಗಿದ್ದಾರೆ’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.