ಉತ್ತರ ಪ್ರದೇಶ ಇಬ್ಬರು ಮಕ್ಕಳನ್ನು ಕೊಂದವನು ಎನ್‌ಕೌಂಟರ್!

| Published : Mar 21 2024, 01:00 AM IST / Updated: Mar 21 2024, 08:55 AM IST

ಸಾರಾಂಶ

5000 ರು. ಸಹಾಯ ಮಾಡಿ ಎನ್ನುತ್ತಾ ಮನೆಗೆ ಬಂದ ಕ್ಷೌರಿಕನೊಬ್ಬ, ಆಕೆಯ ಇಬ್ಬರು ಮಕ್ಕಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಪಿಟಿಐ ಬದಾಯೂಂ: ಪತ್ನಿ ಹೆರಿಗೆಗೆಂದು ಆಸ್ಪತ್ರೆ ಸೇರಿದ್ದಾಳೆ, 5000 ರು. ಸಹಾಯ ಮಾಡಿ ಎನ್ನುತ್ತಾ ಮನೆಗೆ ಬಂದ ಕ್ಷೌರಿಕನೊಬ್ಬ, ಗೃಹಿಣಿ ಹಣ ತರಲು ಮನೆಯೊಳಗೆ ಹೋದಾಗ ಆಕೆಯ ಇಬ್ಬರು ಮಕ್ಕಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಹೇಯ ಘಟನೆ ಉತ್ತರಪ್ರದೇಶದ ಬದಾಯೂಂನಲ್ಲಿ ನಡೆದಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. 

ಈ ಘಟನೆಯಲ್ಲಿ ಗೃಹಿಣಿಯ ಮತ್ತೊಬ್ಬ ಪುತ್ರ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.ಹತ್ಯೆ ಮಾಡಿದ ಬಳಿಕ ರಕ್ತದಲ್ಲಿ ತೋಯ್ದು ಹೋಗಿದ್ದ ಅಂಗಿ ಸಮೇತ ಹೊರಗೆ ಬಂದ ಆರೋಪಿಯು ‘ನನ್ನ ಕೆಲಸ ಮುಗೀತು’ ಎಂದು ಹೇಳುತ್ತಾ ಹೋಗಿದ್ದನ್ನು ಕಂಡು ಗೃಹಿಣಿ ಆಘಾತಕ್ಕೆ ಒಳಗಾಗಿದ್ದಾಳೆ. ಇ

ದರ ಬೆನ್ನಲ್ಲೇ ಸ್ಥಳೀಯರು ಸಾಜೀದ್‌ (22) ಎಂಬ ಹಂತಕನ ಅಂಗಡಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಹಲವು ದ್ವಿಚಕ್ರ ವಾಹನಗಳಿಗೂ ಬೆಂಕಿ ಬಿದ್ದಿದೆ. 

ಈ ನಡುವೆ, ಅರಣ್ಯವೊಂದರಲ್ಲಿ ಅಡಗಿ ಕೂತಿದ್ದ ಸಾಜೀದ್‌ನನ್ನು ಪೊಲೀಸರು ಎನ್‌ಕೌಂಟರ್‌ ನಡೆಸಿ ಕೊಂದಿದ್ದಾರೆ. ಘಟನಾ ಸ್ಥಳದಲ್ಲಿ ಸಾಜೀದ್‌ ಸೋದರ ಜಾವೇದ್ ಕೂಡ ಇದ್ದ ಎನ್ನಲಾಗಿದೆ. ಆತ ನಾಪತ್ತೆಯಾಗಿದ್ದು ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

ಆಗಿದ್ದು ಏನು?
ಬದಾಯೂಂನ ಬಾಬಾ ಕಾಲೋನಿಯಲ್ಲಿ ಇತ್ತೀಚೆಗೆ ಸಾಜಿದ್‌ ಎಂಬಾತ ಕ್ಷೌರದ ಅಂಗಡಿ ತೆರೆದಿದ್ದ. ಮಂಗಳವಾರ ರಾತ್ರಿ 7ರ ಸುಮಾರಿಗೆ ಅದೇ ಬಡಾವಣೆಯ ಗುತ್ತಿಗೆದಾರ ವಿನೋದ್‌ ಕುಮಾರ್‌ ಎಂಬುವರ ಮನೆಗೆ ಹೋಗಿದ್ದ. ಈ ವೇಳೆ ಆತನ ಸೋದರ ಜಾವೇದ್‌ ಕೂಡ ಇದ್ದ. ಆದರೆ ಆ ಸಂದರ್ಭ ವಿನೋದ್‌ ಕುಮಾರ್‌ ಮನೆಯಲ್ಲಿರಲಿಲ್ಲ. 

ಅವರ ಪತ್ನಿ, ತಾಯಿ, ಮೂವರು ಮಕ್ಕಳಷ್ಟೇ ಇದ್ದರು.ಹೆರಿಗೆಗಾಗಿ ಪತ್ನಿ ಆಸ್ಪತ್ರೆಗೆ ದಾಖಲಾಗಿರುವ ಕಾರಣ 5000 ರು. ಸಹಾ ಮಾಡಿ ಎಂದು ವಿನೋದ್‌ ಅವರ ಪತ್ನಿ ಬಳಿ ಸಾಜಿದ್‌ ಕೇಳಿದ್ದಾನೆ. 

ಅವರು ಹಣ ತರಲು ಮನೆ ಒಳಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮಹಡಿ ಮೇಲೆ ಸುತ್ತಾಡುತ್ತೇನೆ ಎಂದು ವಿನೋದ್‌ ಅವರ ಇಬ್ಬರು ಮಕ್ಕಳನ್ನು ಜತೆಯಲ್ಲಿ ಸಾಜಿದ್‌ ಕರೆದೊಯ್ದಿದ್ದಾನೆ. 

ಚಾಕುವಿನಿಂದ ಇರಿದು ಕೊಂದು ಕೆಳಕ್ಕೆ ಇಳಿದಿದ್ದಾನೆ. ಆ ವೇಳೆ ಮತ್ತೊಂದು ಮಗುವಿಗೂ ಇರಿದಿದ್ದಾನೆ. ಆತ ತಪ್ಪಿಸಿಕೊಂಡಿದ್ದಾನೆ. ರಕ್ತ ಸೋಕಿದ ಆತನ ಬಟ್ಟೆಯನ್ನು ನೋಡಿ ವಿನೋದ್‌ ಅವರ ಪತ್ನಿ ಭಯಭೀತರಾಗಿದ್ದಾರೆ. 

ನನ್ನ ಕೆಲಸ ಮುಗಿಯಿತು ಎಂದು ಹೇಳಿ ಸೋದರನ ಜತೆ ಆತ ತೆರಳಿದ್ದಾನೆ.ಈ ಹತ್ಯೆಗೆ ಏನು ಕಾರಣ ಎಂದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.