ಅಹಮದಾಬಾದ್‌: ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ್ದ ಇನ್ನೇನು ಆತನನ್ನು ತಿನ್ನಲು ಸಜ್ಜಾಗಿದ್ದ ಸಿಂಹವೊಂದು, ಅರ್ಧ ಗಂಟೆ ಬಳಿಕ ಬಿಟ್ಟು ಕಳಿಸಿದ ಅಚ್ಚರಿ ಘಟನೆಯೊಂದು ಗುಜರಾತ್‌ನಲ್ಲಿ ನಡೆದಿದೆ. ಸೋಮವಾರ ಬೆಳಗ್ಗೆ ಕಾಳು ಪರ್ಮಾರ್‌ ತಮ್ಮ ಜಾನುವಾರುಗಳಿಗೆ ಮೇವು ಹಾಕಲೆಂದು ಮನೆಯಿಂದ ಹೊರಬಂದ ವೇಳೆ ಸಿಂಹಿಣಿಯೊಂದು ಅವರ ಮೇಲೆ ದಾಳಿ ಮಾಡಿದೆ. ನೆಲದ ಮೇಲೆ ಬಿದ್ದ ಪರ್ಮಾರ್‌ರ ಕಾಲನ್ನು ತನ್ನ ಕೈಗಳಿಂದ ಹಿಡಿದುಕೊಂಡು ಅದರ ಮೇಲೇ ಕೂತ ಅದು, ಅವರು ಏಳಲು ಯತ್ನಿಸಿದಾಗೆಲ್ಲಾ ತನ್ನ ಹಿಡಿತ ಬಿಗಿಗೊಳಿಸುತ್ತಾ ಹೋಗಿದೆ. ಇದನ್ನು ಕಂಡು ಗ್ರಾಮಸ್ಥರೆಲ್ಲಾ ಗದ್ದಲವೆಬ್ಬಿಸಿ ಸಿಂಹದ ಕಡೆಗೆ ಕಲ್ಲು ಎಸೆದಿದ್ದಾರೆ. ಆದರೆ ಮತ್ತೊಂದೆಡೆ ಸಾವೇ ಕಣ್ಣೆದುರು ನಿಂತಿದ್ದರೂ ಸಂಯಮದಿಂದಿದ್ದ ಪರ್ಮಾರ್‌, ಕಿರುಚಾಡುವ ಬದಲು ತಮ್ಮ ಕೈಗಳಿಂದ ಸಿಂಹಿಣಿಯ ಮೈದಡವುತ್ತಾ ಕುಳಿತಿದ್ದರು. ಕೊನೆಗೆ ಅದೇನಾಯ್ತೋ ಆತನ ವರ್ತನೆಯಿಂದ ಶಾಂತಗೊಂಡಂತೆ ಕಂಡ ಸಿಂಹ ಅರ್ಧ ಗಂಟೆಯ ಬಳಿಕ ಕೈಗೆ ಸಿಕ್ಕ ಬೇಟೆಯನ್ನು ಬಿಟ್ಟುಕಳಿಸಿದೆ.