ಸತತ 4 ದಿನ ತಪಾಸಣೆ ಬಳಿಕ ಸಂಕಿರೆಡ್ಡಿ ಅರೆಸ್ಟ್‌ಹೈದ್ರಾಬಾದ್: ತೆಲಂಗಾಣದ ಡಿಎಸ್ಪಿ ಸಂಕಿರೆಡ್ಡಿ ಭೀಮ್ ರೆಡ್ಡಿಗೆ ಸೇರಿದ 15 ಆಸ್ತಿಗಳ ಮೇಲಿನ ದಾಳಿ, ಪರಿಶೀಲನೆ ಪೂರ್ಣಗೊಳಿಸಿರುವ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸೋಮವಾರ ಸಂಜೆ ಭ್ರಷ್ಟ ಅಧಿಕಾರಿಯನ್ನು ಬಂಧಿಸಿದ್ದಾರೆ.
ಈ ವೇಳೆ ಸಂಕಿ ರೆಡ್ಡಿ ಬಳಿ 4 ಕೆಜಿ ಚಿನ್ನ, 20 ಕೆಜಿಗೂ ಅಧಿಕ ಬೆಳ್ಳಿ, ಹಲವು ಕಡೆ ಮನೆ, ಫ್ಲ್ಯಾಟ್, ಕರ್ನಾಟಕ ಮತ್ತು ತೆಲಂಗಾಣದ ವಿವಿಧ ಭಾಗಗಳಲ್ಲಿ ಕೃಷಿ ಭೂಮಿ, ಸೈಟ್ ಸೇರಿ ಅಂದಾಜು 300 ಕೋಟಿ ರು.ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಮೊದಲು ಅಕ್ರಮ ಆಸ್ತಿ ಮೌಲ್ಯ 200 ಕೋಟಿ ರು.ಇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಜು.3ರಂದು ಆರಂಭವಾಗಿದ್ದ ದಾಳಿ ಸೋಮವಾರ ಸಂಜೆ ವೇಳೆಗೆ ಮುಗಿದ ಬಳಿಕ ಆಸ್ತಿ ಮೌಲ್ಯ 300 ಕೋಟಿ ರು.ಗೆ ಏರಿದೆ.ಸಂಕಿ ರೆಡ್ಡಿ ಇತ್ತೀಚೆಗೆ ಪತ್ನಿ ಜೊತೆ ಚಾರ್‌ಧಾಮ್ ಯಾತ್ರೆಗೆ ತೆರಳುವ ಮುನ್ನ ತಮ್ಮ ಮಕ್ಕಳಿಗೆ ವಾಟ್ಸಾಪ್ ಮೂಲಕ ತಾವು ಹೊಂದಿರುವ ಆಸ್ತಿ, ಅದು ಯಾವ್ಯಾವ ಬೇನಾಮಿ ಹೆಸರಲ್ಲಿದೆ. ಎಲ್ಲೆಲ್ಲಿದೆ ಎಂಬಿತ್ಯಾದಿ ಮಾಹಿತಿಯನ್ನು ರವಾನಿಸಿದ್ದರು. ಅದು ಅಧಿಕಾರಿಗಳಿಗೆ ಸುಲಭವಾಗಿ ಅಕ್ರಮ ಆಸ್ತಿ ಪತ್ತೆ ಹಚ್ಚಲು ನೆರವಾಗುವುದರ ಜೊತೆಗೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿ ಹೊರಹೊಮ್ಮಿದೆ.