ಕಾಶ್ಮೀರದಲ್ಲಿ ಸದ್ದಿಲ್ಲದೆ ಕಾರ್ಯಾಚರಿಸುತ್ತಿದ್ದ ಅತ್ಯಾಧುನಿಕ ‘ಕ್ರಿಪ್ಟೋ ಹವಾಲಾ ನೆಟ್‌ವರ್ಕ್‌’ ಅನ್ನು ಭದ್ರತಾ ಸಂಸ್ಥೆಗಳು ಭೇದಿಸಿದ್ದು, ಇದರ ಮೂಲಕ ರಾಜ್ಯದಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ವಿದೇಶದಿಂದ ಹಣಕಾಸು ನೆರವು ಹರಿದು ಬರುತ್ತಿರುವ ಕುರಿತು ಕಳವಳ ವ್ಯಕ್ತವಾಗಿದೆ.

ಹವಾಲಾ ನೆಟ್‌ವರ್ಕ್‌ ಭೇದಿಸಿದ ಭದ್ರತಾ ಸಂಸ್ಥೆಶ್ರೀನಗರ/ನವದೆಹಲಿ: ಕಾಶ್ಮೀರದಲ್ಲಿ ಸದ್ದಿಲ್ಲದೆ ಕಾರ್ಯಾಚರಿಸುತ್ತಿದ್ದ ಅತ್ಯಾಧುನಿಕ ‘ಕ್ರಿಪ್ಟೋ ಹವಾಲಾ ನೆಟ್‌ವರ್ಕ್‌’ ಅನ್ನು ಭದ್ರತಾ ಸಂಸ್ಥೆಗಳು ಭೇದಿಸಿದ್ದು, ಇದರ ಮೂಲಕ ರಾಜ್ಯದಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ವಿದೇಶದಿಂದ ಹಣಕಾಸು ನೆರವು ಹರಿದು ಬರುತ್ತಿರುವ ಕುರಿತು ಕಳವಳ ವ್ಯಕ್ತವಾಗಿದೆ.

ಭಾರತದ ಹಣಕಾಸು ಸುರಕ್ಷತಾ ಕ್ರಮಗಳ ಕಣ್ತಪ್ಪಿಸಿ ನಡೆಯುತ್ತಿದ್ದ ಈ ಕಳ್ಳ ನೆಟ್‌ವರ್ಕ್‌ ಮೂಲಕ ವಿದೇಶಗಳಿಂದ ಹರಿದು ಬರುತ್ತಿರುವ ಹಣಕಾಸು ನೆರವು, ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಪ್ರತ್ಯೇಕವಾದಿ ಹಾಗೂ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಹೊಸ ಜೀವ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹಿನ್ನೆಲೆಯಲ್ಲಿ ಭದ್ರಾಪಡೆಗಳು ಕಟ್ಟೆಚ್ಚರದಿಂದಿವೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಭದ್ರತಾ ಸಂಸ್ಥೆಗಳ ಜತೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ವಿಸ್ತೃತ ಅಧ್ಯಯನದಲ್ಲಿ ಚೀನಾ, ಮಲೇಷ್ಯಾ, ಮ್ಯಾನ್ಮಾರ್‌ ಮತ್ತು ಕಾಂಬೋಡಿಯಾದಲ್ಲಿ ಕೂತವರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ಜನ ಖಾಸಗಿ ಕ್ರಿಪ್ಟೋ ವ್ಯಾಲೆಟ್‌ ತೆರೆಯುವಂತೆ ನಿರ್ದೇಶನ ನೀಡಲಾಗುತ್ತದೆ. ಈ ವ್ಯಾಲೆಟ್‌ಗಳನ್ನು ವಿಪಿಎನ್‌ ಬಳಸಿಕೊಂಡು ತೆರೆಯಲಾಗುತ್ತದೆ. ಇಂಥ ವ್ಯಾಲೆಟ್‌ಗಳಿಗೆ ಕೆವೈಸಿ ಅಗತ್ಯವೇ ಬೀಳವುದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ವಿಪಿಎನ್‌ ಬಳಕೆಯನ್ನು ಕಾಶ್ಮೀರ ಕಣಿವೆಯಲ್ಲಿ ನಿರ್ಬಂಧಿಸಿದ್ದಾರೆ.

ಹೇಗೆ ನಡೆಯುತ್ತೆ ಅಕ್ರಮ?:

ವಿದೇಶದಿಂದ ಖಾಸಗಿ ವ್ಯಾಲೆಟ್‌ಗಳಿಗೆ ಬರುವ ಕ್ರಿಪ್ಟೋಕರೆನ್ಸಿಗಳನ್ನು ದೆಹಲಿ, ಮುಂಬೈನಂಥ ನಗರಗಳಲ್ಲಿರುವ ಅಕ್ರಮ ಪೀರ್‌-ಟು-ಪೀರ್‌(ಪಿಟುಪಿ) ಟ್ರೇಡರ್‌ಗಳನ್ನು ಸಂಪರ್ಕಿಸಿ ನಗದೀಕರಣ ಮಾಡಿಕೊಳ್ಳಲಾಗುತ್ತದೆ. ಇಂಥ ಹಣಕಾಸು ನೆಟ್‌ವರ್ಕ್‌ಗೆ ನಕಲಿ ಖಾತೆಗಳೇ ಮುಖ್ಯ. ಇದಕ್ಕಾಗಿ ಸಿಂಡಿಕೇಟ್‌ಗಳು ಪ್ರತಿ ಖಾತೆಗೆ 0.08ರಿಂದ 1.8ರಷ್ಟು ಕಮಿಷನ್‌ಗಳನ್ನು ನೀಡುತ್ತವೆ. ಈ ರೀತಿಯ ಖಾತೆಗಳು ಹೆಚ್ಚಾಗಿ ಜನಸಾಮಾನ್ಯರದ್ದೇ ಆಗಿರುತ್ತದೆ. ಕಮಿಷನ್‌ ಆಸೆ ತೋರಿಸಿ ಕ್ರಿಪ್ಟೋಕರೆನ್ಸಿ ನಗದೀಕರಣದಿಂದ ಬರುವ ಹಣವನ್ನು ಈ ಖಾತೆಗಳಲ್ಲಿ ತಾತ್ಕಾಲಿಕವಾಗಿ ಇಡಲಾಗುತ್ತದೆ. ಈ ಅವಧಿಯಲ್ಲಿ ಅವರ ಬ್ಯಾಂಕ್‌ ಖಾತೆಗಳು, ಬ್ಯಾಂಕ್‌ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್‌ಗಳನ್ನು ವಂಚಕರೇ ನಿಯಂತ್ರಿಸುತ್ತಾರೆ.