ಥಾಯ್ಲೆಂಡ್ ಪ್ರಧಾನಿ ಹುದ್ದೆಯಿಂದ ಶಿನವಾತ್ರ ಅಮಾನತು

| Published : Jul 02 2025, 12:21 AM IST

ಥಾಯ್ಲೆಂಡ್ ಪ್ರಧಾನಿ ಹುದ್ದೆಯಿಂದ ಶಿನವಾತ್ರ ಅಮಾನತು
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಬೋಡಿಯಾದ ಮಾಜಿ ನಾಯಕನೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಯ್ಲೆಂಡ್ ಪ್ರಧಾನಿ ಹುದ್ದೆಯಿಂದ ಪೀಟೋಂಗ್ಟಾರ್ನ್ ಶಿನವಾತ್ರ ಅವರನ್ನು ಅಮಾನತುಗೊಳಿಸಲಾಗಿದೆ. ಮುಂದಿನ ತೀರ್ಪು ನೀಡುವವರೆಗೆ ಅಮಾನತು ಜಾರಿಗೊಳಿಸಿ ಥಾಯ್ಲೆಂಡ್‌ನ ಸಾಂವಿಧಾನಿಕ ನ್ಯಾಯಾಲಯ ಆದೇಶ ಹೊರಡಿಸಿದೆ.

ಫೋನ್ ಸಂಭಾಷಣೆ ಸೋರಿಕೆ ಪ್ರಕರಣ

ಸಾಂವಿಧಾನಿಕ ಕೋರ್ಟ್ ಆದೇಶ

ಬ್ಯಾಂಕಾಕ್: ಕಾಂಬೋಡಿಯಾದ ಮಾಜಿ ನಾಯಕನೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆ ಸೋರಿಕೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಯ್ಲೆಂಡ್ ಪ್ರಧಾನಿ ಹುದ್ದೆಯಿಂದ ಪೀಟೋಂಗ್ಟಾರ್ನ್ ಶಿನವಾತ್ರ ಅವರನ್ನು ಅಮಾನತುಗೊಳಿಸಲಾಗಿದೆ. ಮುಂದಿನ ತೀರ್ಪು ನೀಡುವವರೆಗೆ ಅಮಾನತು ಜಾರಿಗೊಳಿಸಿ ಥಾಯ್ಲೆಂಡ್‌ನ ಸಾಂವಿಧಾನಿಕ ನ್ಯಾಯಾಲಯ ಆದೇಶ ಹೊರಡಿಸಿದೆ.

ಶಿನವಾತ್ರ ಅವರು ನೈತಿಕತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಸಲ್ಲಿಕೆಯಾದ ಆರ್ಜಿ ವಿಚಾರಣೆ ನಡೆಸಿದ ಕೋರ್ಟ್, 7-2 ಬಹುಮತದೊಂದಿಗೆ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿತು. ಕಾಂಬೋಡಿಯಾ ಜತೆಗಿನ ಗಡಿ ವಿವಾದದ ಹಿನ್ನೆಲೆಯಲ್ಲಿ ಮೇ 28ರಂದು ಸಶಸ್ತ್ರ ಸಂಘರ್ಷ ನಡೆದಿತ್ತು. ಈ ವೇಳೆ ಕಾಂಬೋಡಿಯಾದ ಸೈನಿಕನೊಬ್ಬ ಸಾವನ್ನಪ್ಪಿದ್ದ. ಈ ವಿಚಾರವಾಗಿ ಕಾಂಬೋಡಿಯಾದ ಮಾಜಿ ನಾಯಕನ ಜತೆ ಶಿನವಾತ್ರ ನಡೆಸಿದ ಫೋನ್ ಸಂಭಾಷಣೆ ಸೋರಿಕೆಯಾಗಿತ್ತು ಹಾಗೂ ನೈತಿಕ ಉಲ್ಲಂಘಿಸಿದ್ದಾರೆ ಎಂದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತ ವಿಚಾರಣೆ ನಡೆಸಿದ ಕೋರ್ಟ್, ಅವರನ್ನು ಪ್ರಧಾನಿ ಹುದ್ದೆಯಿಂದ ಅಮಾನತುಗೊಳಿಸಿದೆ.

==

ಗೋ ಆರಾಧಕ ಭಾರತೀಯರು ಕಳ್ಳರು: ಬ್ರಿಟನ್‌ ವ್ಲಾಗರ್‌ ಕೀಳು ನುಡಿ

ನವದೆಹಲಿ: ‘ಭಾರತಲ್ಲಿ 140 ಕೋಟಿ ಸಮಸ್ಯೆಗಳಿವೆ. ನನಗೆ ಆ ದೇಶ ಇಷ್ಟವಿಲ್ಲ. ಅಲ್ಲಿ ಮನುಷ್ಯರ ಬದಲು ಹಸುವನ್ನು (ಗೋವು) ಪೂಜಿಸುತ್ತಾರೆ. ಭಾರತೀಯರೆಲ್ಲ ಕಳ್ಳರು’ ಎಂದ ಬ್ರಿಟನ್‌ನ ವ್ಲಾಗರ್‌ ಒಬ್ಬ ಗೋವನ್ನು ಪೂಜಿಸುವ ಹಿಂದೂಗಳು ಮತ್ತು ಅವರ ಆಚರಣೆಗಳ ಬಗ್ಗೆ ಅವಹೇಳನಕಾರಿಯಾಗಿ ಟೀಕೆ ಮಾಡಿದ್ದಾನೆ.ಮೈಲ್ಸ್ ರೂಟ್ಲೆಡ್ಜ್ ಎಂಬಾತನಿಗೆ ದುಬೈನಲ್ಲಿ ಕಳೆದುಕೊಂಡಿದ್ದ ಏರ್‌ಪಾಡ್‌ ಒಂದು ವರ್ಷದ ಬಳಿಕ ಸಿಕ್ಕಿತ್ತು. ಆಗ ಅದನ್ನು ಕದ್ದ ಆರೋಪವನ್ನು ಭಾರತೀಯರ ಮೇಲೆ ಹೊರಿಸಿರಿರುವ ಆತ, ‘ಅನೇಕ ಭಾರತೀಯರು ಭ್ರಷ್ಟ ವ್ಯವಸ್ಥೆಯಿಂದ ಬಂದವರು. ಅವರು ಮನುಷ್ಯನ ಬದಲು ಹಸುವನ್ನು ಪೂಜಿಸುತ್ತಾರೆ, ಅದಕ್ಕಾಗಿಯೇ ಭಾರತೀಯರು ಮನುಷ್ಯರೇ ಅಲ್ಲ ಎಂಬುದು ನನ್ನ ಅಭಿಪ್ರಾಯ. ಕೋಣೆ ಸ್ವಚ್ಛಗೊಳಿಸುವ ನೆಪದಲ್ಲಿ ಬಂದು ನನ್ನ ಏರ್‌ಪಾಡ್ಸ್‌ ಕದ್ದು ಪಾಕಿಸ್ತಾನಿಗೆ ಮಾರಿ ನಂಬಿಕೆದ್ರೋಹ ಮಾಡಿದ್ದಾರೆ’ ಎಂದು ಬಾಯಿಗೆ ಬಂದಂತೆ ಮಾತನಾಡಿದ್ದಾನೆ.ಈತನ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ.

==

ತಮಿಳ್ನಾಡು ಲಾಕಪ್‌ ಡೆತ್: 5 ಪೊಲೀಸರ ಬಂಧನ

6 ಪೊಲೀಸರು ಸಸ್ಪೆಂಡ್‌, ಎಸ್ಪಿಗೆ ಕಡ್ಡಾಯ ರಜೆ

ವಿಪಕ್ಷಕ್ಕೆ ಮಣಿದು ಸಿಬಿಐ ತನಿಖೆಗೆ ಸ್ಟಾಲಿನ್‌ ಆದೇಶ

ಪೊಲೀಸರಿಗೆ ಅಧಿಕಾರದ ಅಮಲು: ಕೋರ್ಟ್ ಕಿಡಿ

ಏನಿದು ಪ್ರಕರಣ?

ಕಳ್ಳತನ ಆರೋಪದಲ್ಲಿ ಸೆಕ್ಯುರಿಟಿ ಗಾರ್ಡ್‌ ಬಂಧನ

ಪೊಲೀಸರಿಂದ ಹಲ್ಲೆ, ಬಳಿಕ ಆಸ್ಪತ್ರೆಯಲ್ಲಿ ಸಾವು

ಚೆನ್ನೈ: ಕಳ್ಳತನ ಪ್ರಕರಣದಲ್ಲಿ ಬಂಧಿತನಾದ ತಮಿಳುನಾಡಿನ ಶಿವಗಂಗಾ ಜಿಲ್ಲೆಯ ತುರುಪ್ಪುವನಂನ ದೇಗುಲವೊಂದರ ಭದ್ರತಾ ಸಿಬ್ಬಂದಿ ಬಿ. ಅಜಿತ್ ಕುಮಾರ್ (27) ಪೊಲೀಸ್ ದೌರ್ಜನ್ಯದಿಂದಾಗಿ, ಪೊಲೀಸ್‌ ವಶದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಪ್ರಕರಣ ಸಂಬಂಧ 6 ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್‌ ಮಾಡಲಾಗಿದ್ದು, 5 ಪೊಲೀಸರನ್ನು ಬಂಧಿಸಲಾಗಿದೆ. ಶಿವಗಂಗಾ ಪೊಲೀಸ್ ವರಿಷ್ಠಾಧಿಕಾರಿ ಆಶಿಷ್ ರಾವತ್‌ರನ್ನು ಕಡ್ಡಾಯ ರಜೆ ಮೇಲೆ ಕಳಿಸಲಾಗಿದೆ.ಪ್ರಕರಣದ ಬಗ್ಗೆ ತೀವ್ರ ಕಿಡಿಕಾರಿರುವ ಹೈಕೋರ್ಟ್‌, ‘ಪೊಲೀಸರಿಗೆ ಅಧಿಕಾರದ ಅಮಲೇರಿ ಇಂಥ ಕೃತ್ಯ ಎಸಗುತ್ತಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಆದೇಶಿಸಿದೆ. ಆದರೆ ವಿಪಕ್ಷಗಳ ಒತ್ತಾಯದ ಮೇರೆಗೆ ಸಿಎಂ ಎಂ.ಕೆ. ಸ್ಟಾಲಿನ್‌ ಸಿಬಿಐ ತನಿಖೆಗೆ ಆದೇಶಿಸಿದ್ದಾರೆ.

ಏನಿದು ಪ್ರಕರಣ?:ಅಜಿತ್ ಕುಮಾರ್ ಶಿವಗಂಗಾ ಜಿಲ್ಲೆಯ ತುರುಪ್ಪುವನಂನ ಮಾದಾಪುರಂ ಭದ್ರಕಾಳಿಯಮ್ಮನ್ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ದೇವಸ್ಥಾನದ ಆವಾರದಲ್ಲಿ ನಿಲ್ಲಿಸಿದ್ದ ಭಕ್ತರೊಬ್ಬರ ಕಾರ್‌ನಲ್ಲಿದ್ದ ಚಿನ್ನ ಕಳುವಾದ ಆರೋಪದಲ್ಲಿ ಜೂ.27ರಂದು ಅವರನ್ನು ಬಂಧಿಸಲಾಗಿತ್ತು.ವಿಚಾರಣೆ ಬಳಿಕ ಬಿಡುಗಡೆ ಮಾಡಿ, ಮರುದಿನ ಪುನಃ ಬಂಧಿಸಲಾಗಿತ್ತು. ಆಗ ಪೊಲೀಸರು ನಡೆಸಿದ ಹಲ್ಲೆಯಿಂದ ತೀವ್ರ ಅಸ್ವಸ್ಥರಾಗಿದ್ದ ಅವರು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದರು. ಈ ಕುರಿತು ಸಾರ್ವಜನಿಕ ಆಕ್ರೋಶ ಭುಗಿಲೆದ್ದ ಬೆನ್ನಲ್ಲೆ, ಮದ್ರಾಸ್ ಹೈಕೋರ್ಟ್ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪೊಲೀಸರ ವಿರುದ್ಧ ಕ್ರಮಕ್ಕೆ ಆದೇಶಿಸಿತ್ತು.

ಭಾರಿ ದೌರ್ಜನ್ಯ:ಮೃತ ಅಜಿತ್ ಗುದದ್ವಾರದ ಬಳಿ ಲಾಠಿ ಪ್ರಹಾರ ನಡೆಸಲಾಗಿದೆ. ತಲೆ ಸೇರಿ ದೇಹದ ವಿವಿಧೆಡೆ 30ರಿಂದ 40 ಗಾಯದ ಗುರುತುಗಳಿವೆ. ಅವರಿಗೆ ತೀವ್ರ ರಕ್ತಸ್ರಾವವಾಗುತ್ತಿದ್ದು, ನಡೆಯಲು ಸಹ ಸಾಧ್ಯವಾಗುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

==

ಜೂನ್‌ ಜಿಎಸ್ಟಿ ಸಂಗ್ರಹ ಶೇ.6.2 ಏರಿಕೆ: ₹1.84 ಲಕ್ಷ ಕೋಟಿ ಸಂಗ್ರಹ

ನವದೆಹಲಿ: ಜೂನ್‌ ತಿಂಗಳಿನಲ್ಲಿ 1.84 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ, ಶೇ.6.2ರಷ್ಟು ಅಧಿಕ. ಕರ್ನಾಟಕವು 13,409 ಕೋಟಿ ರು. ಸಂಗ್ರಹಿಸಿ ದೇಶದಲ್ಲಿ 2ನೇ ಸ್ಥಾನ ಪಡೆದಿದೆ.ಕಳೆದ ವರ್ಷ ಜೂನ್‌ನಲ್ಲಿ ಶೇ.1.73 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿತ್ತು. ಕಳೆದ ತಿಂಗಳು 2.01 ಲಕ್ಷ ಕೋಟಿ ರು. ತೆರಿಗೆ ಸಂಗ್ರಹವಾಗಿತ್ತು ಎಂದು ವರದಿ ಹೇಳಿದೆ.

ಜೂನ್‌ನಲ್ಲಿ ಒಟ್ಟು ಕೇಂದ್ರ ಜಿಎಸ್ಟಿ 34,558 ಕೋಟಿ ರು., ರಾಜ್ಯ ಜಿಎಸ್ಟಿ 43,268 ಕೋಟಿ ರು., ಸಂಯೋಜಿತ ಜಿಎಸ್ಟಿ 93,280 ಕೋಟಿ ರು. ಸಂಗ್ರಹವಾಗಿದೆ. ಇದಲ್ಲದೇ ಸೆಸ್‌ನಿಂದ 13,491 ಕೋಟಿ ರು. ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರದ ವರದಿ ತಿಳಿಸಿದೆ.