ಸಾರಾಂಶ
ನಾಳೆಯಿಂದ ಅಮರನಾಥ ಯಾತ್ರೆ ಶುರು
- ಇಂದು ಯಾತ್ರೆಗೆ ಲೆ. ಗವರ್ನರ್ ಸಿನ್ಹಾ ಚಾಲನೆ- ಉಗ್ರ ದಾಳಿ ಭೀತಿ ಕಾರಣ ಭಾರಿ ಬಿಗಿ ಬಂದೋಬಸ್ತ್- ಭಕ್ತರಿಗೆ, ಸಾಧುಗಳಿಗೆ ಪ್ರತ್ಯೇಕ ನೋಂದಣಿ ವ್ಯವಸ್ಥೆ
ಜಮ್ಮು: ದಕ್ಷಿಣ ಕಾಶ್ಮೀರದ ಹಿಮಾಯಲದಲ್ಲಿರುವ ಅಮರನಾಥದ ಯಾತ್ರೆ ಗುರುವಾರದಿಂದ ಶುರುವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಬುಧವಾರ ಕಾಶ್ಮೀರ ಉಪರಾಜ್ಯಪಾಲ ಮನೋಜ್ ಸಿನ್ಹಾ, ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ 38 ದಿನದ ಯಾತ್ರೆಯ ನೋಂದಣಿಗಾಗಿ ದೇಶದ ವಿವಿಧ ಭಾಗಗಳಿಂದ ಭಕ್ತರ ಹರಿದುದಂಡು ಬರಲು ಶುರುವಾಗಿದೆ.
ಅನಂತ್‌ನಾಗ್ ಜಿಲ್ಲೆಯ 48 ಕಿ.ಮೀ. ಉದ್ದದ ನುನ್ವಾನ್-ಪಹಲ್ಗಾಂ ಮಾರ್ಗ ಹಾಗೂ ಗಂದೇರ್‌ಬಾಲ್ ಜಿಲ್ಲೆಯ 14 ಕಿ.ಮೀ. ಉದ್ದದ ಬಲ್ತಾಲ್ ಮಾರ್ಗದಲ್ಲಿ ಯಾತ್ರೆ ಸಾಗಲಿದೆ. ಇತ್ತೀಚೆಗೆ 26 ಪ್ರವಾಸಿಗರ ನರಮೇಧ ನಡೆದ ಪಹಲ್ಗಾಂ ಮಾರ್ಗದಲ್ಲೇ ಯಾತ್ರೆ ಸಾಗುವ ಕಾರಣ ಈ ಪ್ರದೇಶದಲ್ಲಿ ಈಗಾಗಲೇ ಭದ್ರತೆ ಮತ್ತು ಅಗತ್ಯ ಸೌಕರ್ಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಏನೇನು ವ್ಯವಸ್ಥೆಗಳು?:ಅಮರನಾಥ ಯಾತ್ರೆಗೆ ತೆರಳುವ ಭಕ್ತಾದಿಗಳು ನೋಂದಣಿ ಮಾಡಿಸಿಕೊಳ್ಳಬೇಕು. ಶಾಲಿಮಾರ್ ಪ್ರದೇಶದ ವೈಷ್ಣವಿ ಧಾಮ, ಪಂಚಾಯತ್ ಭವನ ಮತ್ತು ಮಹಾಜನ ಸಭಾದಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಸರಸ್ವತಿ ಧಾಮದಲ್ಲಿ ಮಾತ್ರವೇ ಟೋಕನ್ ವಿತರಿಸಲಾಗುತ್ತಿದೆ. 1600ಕ್ಕೂ ಅಧಿಕ ಭಕ್ತರು ಭಗವತಿ ನಗರ ಬೇಸ್ ಕ್ಯಾಂಪ್‌ನಲ್ಲಿ ತಂಗಿದ್ದಾರೆ. ಅತ್ತ ಸಾಧುಗಳಿಗಾಗಿ ಪುರಾನಿ ಮಂಡಿಯಲ್ಲಿರುವ ರಾಮ ದೇಗುಲದ ಸಂಕೀರ್ಣದಲ್ಲಿ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಅವರಿಗೆ ಅಲ್ಲೇ ಉಳಿದುಕೊಳ್ಳಲು ವ್ಯವಸ್ಥೆಗಳನ್ನೂ ಮಾಡಲಾಗಿದ್ದು, ಈಗಾಗಲೇ 300ಕ್ಕೂ ಅಧಿಕ ಸಾಧುಗಳು ಆಗಮಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಭಾಗೀಯ ಕಮೀಷನರ್ ರಮೇಶ್ ಕುಮಾರ್ ಮಾತನಾಡಿ, ‘ಜಮ್ಮು ಆದ್ಯಂತ 50,000 ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು, ಬಿಗಿ ಭದ್ರತೆಯಲ್ಲಿ ಜು.2ರಂದು ಯಾತ್ರೆಗೆ ಚಾಲನೆ ನೀಡಲಿದ್ದಾರೆ’ ಎಂದರು.