ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಹಿಡಿದ ‘ಸರ್ವರ್ ಗ್ರಹಣ’ ಸದ್ಯಕ್ಕೆ ತಪ್ಪುವ ಲಕ್ಷಣ ಕಾಣುತ್ತಿಲ್ಲ. ಹಲವು ತಿಂಗಳಿನಿಂದ ಕಾಡುತ್ತಿದ್ದ ಸರ್ವರ್ ಸಮಸ್ಯೆ ಕಳೆದ ಶನಿವಾರದಿಂದ ಬಹುತೇಕ ನೋಂದಣಿ ಪ್ರಕ್ರಿಯೆಯನ್ನೇ ಸ್ತಬ್ಧಗೊಳಿಸಿದೆ. ಇದರಿಂದ ರಾಜ್ಯಾದ್ಯಂತ ಆಸ್ತಿ ನೋಂದಣಿಗೆ ಸಾರ್ವಜನಿಕರು ಪರವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ರಾಜ್ಯದಲ್ಲಿ ಪ್ರತಿದಿನ ಸರಾಸರಿ 7ರಿಂದ 8 ಸಾವಿರ ದಸ್ತಾವೇಜುಗಳು ನೋಂದಣಿಯಾಗುತ್ತಿತ್ತು. ಆದರೆ, ಶನಿವಾರದಿಂದ ಕಾವೇರಿ 2.0 ತಂತ್ರಾಂಶ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ದಸ್ತಾವೇಜುಗಳ ನೋಂದಣಿ ಸಂಪೂರ್ಣ ಇಳಿಕೆಯಾಗಿದೆ. ರಾಜ್ಯದಲ್ಲಿನ 252 ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಶನಿವಾರದಿಂದ 600ಕ್ಕಿಂತ ಕಡಿಮೆ ದಸ್ತಾವೇಜುಗಳು ನೋಂದಣಿಯಾಗಿವೆ. ಎಲ್ಲ ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಶನಿವಾರ, ಸೋಮವಾರ ಮತ್ತು ಮಂಗಳವಾರ ಜನಜಂಗುಳಿ ಹೆಚ್ಚಾಗಿದ್ದರೂ ಕೆಲಸ ಮಾತ್ರ ಆಗಿಲ್ಲ.
ಇದಕ್ಕೆ ಕಾವೇರಿ 2.0 ತಂತ್ರಾಂಶದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ಕಾರಣ ಎನ್ನಲಾಗಿದ್ದು, ಮಂಗಳವಾರವೂ ಈ ಸಮಸ್ಯೆ ಮುಂದುವರಿದಿದೆ. ಇ-ಖಾತಾ ಕಡ್ಡಾಯ ಘೋಷಣೆಯಾದ ನಂತರ ರಾಜ್ಯದಲ್ಲಿ ಆಸ್ತಿ ನೋಂದಣಿಗೆ ತಾಂತ್ರಿಕ ಸಮಸ್ಯೆ ಎದುರಾಗುತ್ತಲೇ ಬಂದಿದೆ. ಇದು ಇದೀಗ ವಿಕೋಪಕ್ಕೆ ಹೋಗಿದ್ದು, ನೋಂದಣಿಯೇ ಸ್ಥಗಿತಗೊಂಡಿದೆ.ವಿಶೇಷವಾಗಿ ಶನಿವಾರದಿಂದ ಸಿಟಿಜನ್ ಲಾಗಿನ್ ಮತ್ತು ಸಬ್ ರಿಜಿಸ್ಟ್ರಾರ್ ಲಾಗಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ದಸ್ತಾವೇಜುಗಳ ನೋಂದಣಿ ಪ್ರಕ್ರಿಯೆ ಬಹುತೇಕ ಸ್ತಬ್ಧವಾಗಿದೆ. ಇದರಿಂದಾಗಿ ಸೋಮವಾರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾದು ಕಾದು ವಾಪಸಾಗಿದ್ದ ಸಾರ್ವಜನಿಕರ ಪರಿಸ್ಥಿತಿ ಮಂಗಳವಾರವೂ ಅದೇ ರೀತಿಯಲ್ಲಿತ್ತು. ಬೆಳಗ್ಗೆಯೇ ದಸ್ತಾವೇಜು ನೋಂದಣಿಗೆ ಬಂದಿದ್ದ ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ದಾಖಲೆ ಅಪ್‌ಲೋಡ್ ಮಾಡಲು ಸರ್ವರ್ ಇಲ್ಲದೆ ಪರದಾಡುವಂತಾಗಿತ್ತು.
ಸಂಜೆವರೆಗೆ ಕಾದು ವಾಪಸಾದರು:ಮತ್ತೊಂದೆಡೆ ಈಗಾಗಲೇ ದಾಖಲೆ ಅಪ್‌ಲೋಡ್ ಮಾಡಿ, ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕ ಪಾವತಿ ಮಾಡಿ ನೋಂದಣಿಯ ಸ್ಲಾಟ್ ಪಡೆದಿದ್ದ ಪಕ್ಷಗಾರರು ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸಂಜೆವರೆಗೆ ಕಾದು ವಾಪಸಾಗುವಂತಾಗಿತ್ತು. ಈ ಎಲ್ಲದರಿಂದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಮಂಗಳವಾರವೂ ಬಹುತೇಕ ಸ್ಥಗಿತಗೊಳ್ಳುವಂತಾಗಿದೆ.
ಕಾವೇರಿ 2.0 ತಂತ್ರಾಂಶದಲ್ಲಿನ ಸಮಸ್ಯೆ ಕುರಿತು ಸೋಮವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಋಣಮುಕ್ತ ಪ್ರಮಾಣಪತ್ರ (ಇಸಿ) ಪಡೆಯಲು ಹಾಗೂ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ತೊಂದರೆ ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಸರ್ಕಾರದ ಇ-ಆಡಳಿತ ವಿಭಾಗವು ಕಾವೇರಿ 2.0 ತಂತ್ರಾಂಶದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತಿದೆ. ಜತೆಗೆ ತಾಂತ್ರಿಕ ಸಮಸ್ಯೆ ಅರ್ಥ ಮಾಡಿಕೊಳ್ಳಲು ಇಲಾಖೆ ಪ್ರಯತ್ನಿಸುತ್ತಿದೆ. ಈ ಸಮಸ್ಯೆ ಪರಿಹರಿಸಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದ್ದರು. ಆದರೆ, ಮಂಗಳವಾರವೂ ಸಮಸ್ಯೆ ಬಗೆಹರಿಸುವಲ್ಲಿ ಇಲಾಖೆ ವಿಫಲವಾಗಿದೆ.ಕಾವೇರಿ 2.0 ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆ ನಿವಾರಿಸಲು ಅಧಿಕಾರಿಗಳು ಖಾಸಗಿ ಸಾಫ್ಟ್‌ವೇರ್ ಎಂಜಿನಿಯರ್‌ಗಳ ನೆರವು ಪಡೆಯುತ್ತಿದ್ದಾರೆ. ಆದರೂ ಸಮಸ್ಯೆ ಮಾತ್ರ ನಿವಾರಣೆಯಾಗಿಲ್ಲ.