ಸಾರಾಂಶ
ನವದೆಹಲಿ: ವಿದೇಶಗಳಿಗೆ ಅಮೆರಿಕದ ನೆರವು ತಡೆಹಿಡಿಯುವ ಡೊನಾಲ್ಡ್ ಟ್ರಂಪ್ ಘೋಷಣೆಯ ಪರಿಣಾಮ ಭಾರತದ ಮೇಲೂ ಆಗುವ ಆತಂಕ ಎದುರಾಗಿದೆ. ಅಮೆರಿಕದ ನೆರವಿನಿಂದ ನಡೆಯುತ್ತಿರುವ ಶಿಕ್ಷಣ, ಹವಾಮಾನ ಬದಲಾವಣೆ ತಡೆ, ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಹಣಕಾಸಿನ ಕೊರತೆ ಎದುರಾಗುವ ಭೀತಿ ಮೂಡಿದೆ.
ನೆರೆಯ ಬಾಂಗ್ಲಾದೇಶ, ಇತರೆ ದೇಶಗಳಿಗೆ ಹೋಲಿಸಿದರೆ ಅಮೆರಿಕದ ನೆರವಿನ ಕಡಿತ ಭಾರತದ ಮೇಲೆ ಅಷ್ಟೇನೂ ದೊಡ್ಡ ಪರಿಣಾಮ ಬೀರದಿದ್ದರೂ ತಳಮಟ್ಟದಲ್ಲಿ ಅಭಿವೃದ್ಧಿ ಮತ್ತು ಬದಲಾವಣೆಯ ಕಾರ್ಯ ಕೈಗೊಳ್ಳುತ್ತಿರುವ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಇದರ ಬಿಸಿ ಎದುರಿಸಬೇಕಾದೀತು ಎಂದು ಹೇಳಲಾಗಿದೆ.ಅಮೆರಿಕದ ನೆರವಿನ ಕಡಿತದಿಂದ ಅತಿದೊಡ್ಡ ಸಮಸ್ಯೆ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳಿಗೆ ಆಗಲಿದೆ. ಯುಎಸ್‌ಎಐಡಿ ವೆಬ್‌ಸೈಟ್ ಪ್ರಕಾರ, ಜನವರಿ 2021ರಿಂದ ಸಂಸ್ಥೆಯು ದೇಶದ ಆರು ರಾಜ್ಯಗಳಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸುಧಾರಣೆ ಕಾರ್ಯಕ್ರಮಗಳಿಗೆ ನೆರವು ನೀಡುತ್ತಿದೆ. ಅಲ್ಲದೆ ಹಲವು ನಗರಗಳಲ್ಲಿ ಶುದ್ಧ ಕುಡಿಯುವ ನೀರು, ಶುಚಿತ್ವ ಮತ್ತು ನೈರ್ಮಲ್ಯದಂಥ ಕಾರ್ಯಕ್ರಮಗಳ ಅನುಷ್ಠಾನಕ್ಕೂ ನೆರವು ನೀಡುತ್ತಿದೆ. ರಾಜ್ಯಗಳು ಹಾಗೂ ಕೆಲ ಖಾಸಗಿ ಸಂಸ್ಥೆಗಳ ಜತೆಗೆ ಸೇರಿಕೊಂಡು ಲಿಂಗಾಧಾರಿತ ದೌರ್ಜನ್ಯ ತಡೆಯುವ ಮತ್ತು ಅಂಗವಿಕಲರ ರಕ್ಷಣೆ ಮತ್ತು ನೆರವು ನೀಡುವಂಥ ಕಾರ್ಯಕ್ರಮಗಳಲ್ಲಿ ಕೈಜೋಡಿಸಿದೆ.
ಮೂಲಗಳ ಪ್ರಕಾರ ಅಮೆರಿಕವು 90 ದಿನಗಳವರೆಗೆ ಹಣದ ನೆರವು ತಡೆಹಿಡಿಯಲಿದೆ. ಈ ಸಂದರ್ಭದಲ್ಲಿ ಹಣವನ್ನು ಯಾವ ರೀತಿ ಬಳಸಲಾಗಿದೆ ಎಂದು ಪರಾಮರ್ಶಿಸಲಿದ್ದು, ಆ ಬಳಿಕ ಮತ್ತೆ ನೆರವು ಮುಂದುವರಿಸಲೂಬಹುದು. ಆದರೆ ಈ ಕುರಿತು ಯಾವುದೇ ಗ್ಯಾರಂಟಿ ಇಲ್ಲ. ಈ ಅನಿಶ್ಚಿತತೆ ತೀವ್ರ ಆತಂಕ ಸೃಷ್ಟಿಸಿದೆ.ಅಮೆರಿಕ ಪ್ರತಿ ವರ್ಷ ಅಂದಾಜು 3.50 ಲಕ್ಷ ಕೋಟಿ ರು.ನಷ್ಟು ಹಣವನ್ನು ವಿಶ್ವದ ವಿವಿಧ ದೇಶಗಳ ವಿವಿಧ ಯೋಜನೆಗಳ ಜಾರಿಗೆ ನೆರವಿನ ರೂಪದಲ್ಲಿ ನೀಡುತ್ತದೆ. ಭಾರತಕ್ಕೆ 1951ರಿಂದಲೂ ಈ ಯೋಜನೆ ಮೂಲಕ ಆರ್ಥಿಕ ನೆರವು ಹರಿದುಬರುತ್ತಿದೆ. ಆಹಾರದ ನೆರವು, ಮೂಲಸೌಕರ್ಯ ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ, ಮಲೇರಿಯಾ ನಿಯಂತ್ರಣ, ಆರೋಗ್ಯ ಕಾರ್ಯಕ್ರಮ, ರಸಗೊಬ್ಬರ ಉತ್ತೇಜನ, ಗ್ರಾಮೀಣ ವಿದ್ಯುದೀಕರಣ, ವಿಜ್ಞಾನ, ತಂತ್ರಜ್ಞಾನ ನವೀಕರಿಸಬಹುದಾದ ಇಂಧನ, ನೀರು ನಿರ್ವಹಣೆ, ಕುಟುಂಬ ಯೋಜನೆ, ಆರ್ಥಿಕ ಸುಧರಣೆ ಮೊದಲಾದ ಸರ್ಕಾರಿ ಯೋಜನೆಗಳಿಗೆ ಭಾರತಕ್ಕೆ ನೆರವು ಹರಿದುಬಂದಿದೆ.
10 ರು. ಭಿಕ್ಷೆ ನೀಡಿದ ಬೈಕ್ ಸವಾರಗೆ 1 ವರ್ಷ ಜೈಲು 5000 ರು. ದಂಡದ ಭೀತಿ!ಇಂಧೋರ್: ಭಿಕ್ಷಾಟನೆಗೆ ನಿಷೇಧವಿದ್ದರೂ ಭಿಕ್ಷೆ ಬೇಡಿದ ವ್ಯಕ್ತಿಗೆ 10 ರು.ನೀಡಿದ ಮಧ್ಯಪ್ರದೇಶದ ಇಂಧೋರ್‌ನ ಬೈಕ್ ಸವಾರನಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 5 ಸಾವಿರ ರು. ದಂಡದ ಭೀತಿ ಎದುರಾಗಿದೆ. ಇದು ಕಳೆದ 2 ವಾರದಲ್ಲಿದ ಇಂಧೋರ್‌ನಲ್ಲಿ ದಾಖಲಾದ 2ನೇ ಪ್ರಕರಣವಾಗಿದೆ. ಸೋಮವಾರ ಲಸುಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ದೇವಾಲಯದ ಬಳಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೆ ಬೈಕ್ ಸವಾರ 10 ರು. ನೀಡಿದ್ದ. ಹೀಗಾಗಿ ಆತನ ಬಿಎನ್‌ಎಸ್ ಕಾನೂನಿನಡಿ ಪ್ರಕರಣ ದಾಖಲಾಗಿದೆ. ಒಂದು ವೇಳೆ ಬೈಕ್ ಸವಾರ ತಪ್ಪೆಸಗಿರುವುದು ಸಾಬೀತಾದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 5 ಸಾವಿರ ರು.ಗಳವರೆಗೆ ದಂಡ ವಿಧಿಸಬಹುದು. ಅಥವಾ ಎರಡನ್ನೂ ವಿಧಿಸಬಹುದು. ಜ.23ರಂದು ಇದೇ ರೀತಿ ಘಟನೆ ನಡೆದಿತ್ತು ಖಾಂಡ್ವಾ ರಸ್ತೆಯ ದೇವಾಲಯದ ಮುಂದೆ ಭಿಕ್ಷುಕನಿಗೆ ಭಿಕ್ಷೆ ನೀಡಿದ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.