ಸಾರಾಂಶ
ಒಲಿಂಪಿಕ್ಸ್ ಪದಕ ವಿಜೇತೆಯರಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಹರ್ಯಾಣ ವಿಧಾನಸಭಾ ಚುನಾವಣೆಯ 31 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ.
ನವದೆಹಲಿ : 100 ಗ್ರಾಂ ತೂಕ ಹೆಚ್ಚಳ ಕಾರಣಕ್ಕೆ ಪ್ಯಾರಿಸ್ ಒಲಿಂಪಿಕ್ಸ್ ಪದಕದಿಂದ ವಂಚಿತರಾಗಿ ದೇಶದ ಹೃದಯ ಗೆದ್ದಿದ್ದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಹಾಗೂ ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿ ಆಟಗಾರ ಬಜರಂಗ್ ಪೂನಿಯಾ ಅವರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಹರಾರಯಣ ವಿಧಾನಸಭಾ ಚುನಾವಣೆಯ 31 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದೆ.ವಿನೇಶ್ ಫೋಗಟ್ ಜುಲಾನಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಬಜರಂಗ ಪುನಿಯಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಬದಲಾಗಿ ಅವರಿಗೆ ಕಿಸಾನ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹುದ್ದೆ ನೀಲಾಗಿದೆ. ಇಬ್ಬರೂ ಹರಾರಯಣ ಮೂಲದವರು. ಇದೇ ವೇಳೆ ಮಾಜಿ ಸಿಎಂ ಭೂಪಿಂದರ ಸಿಂಗ್ ಹೂಡಾ ಗಢಿ ಸಂಪ್ಲಾದಿಂದ ಸ್ಪರ್ಧಿಸಲಿದ್ದಾರೆ.
ಬಿಜೆಪಿ ವ್ಯಂಗ್ಯ: ವಿನೇಶ್ ನಡೆಗೆ ಬಿಜೆಪಿ ವ್ಯಂಗ್ಯವಾಡಿದೆ. ‘ದೇಶದ ಪುತ್ರಿಯಾಗಿದ್ದ ವಿನೇಶ್ ಅವರು ಕಾಂಗ್ರೆಸ್‌ನ ಪುತ್ರಿಯಾಗಲು ಹೊರಟರೆ ನಾವೇ ನು ಮಾಡಲಾದೀತು?’ ಎಂದು ಹರ್ಯಾಣದ ಬಿಜೆಪಿ ನಾಯಕ ಅನಿಲ್ ವಿಜ್ ತೀಕ್ಷವಾಗಿ ಹೇಳಿದ್ದಾರೆ. ಏಕೆಂದರೆ ಬಿಜೆಪಿಯ ಮಾಜಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಸಂಬಂಧ ದೆಹಲಿಯಲ್ಲಿ ನಡೆದ ಬೀದಿ ಹೋರಾಟದಲ್ಲಿ ಈ ಇಬ್ಬರೂ ಆಟ ಗಾರರು ಮುಂಚೂಣಿಯಲ್ಲಿದ್ದರು ಎಂಬುದು ಗಮನಾರ್ಹ.ಏತನ್ಮಧ್ಯೆ, ಕಾಂಗ್ರೆಸ್ ಸೇರ್ಪಡೆಗೂ ಮುನ್ನ ವಿನೇಶ್ ಫೋಗಟ್ ರೈಲ್ವೆ ನೌಕರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಬೇರೆಯವರಿಗೆ ನನ್ನ ಸ್ಥಿತಿ ಬೇಡ- ವಿನೇಶ್:
ದೆಹಲಿಯಲ್ಲಿ ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ವಿನೇಶ್ ಹಾಗೂ ಬಜರಂಗ್ ಪೂನಿಯಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಹರಾರಯಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಸಮ್ಮುಖ ಅಧಿಕೃತವಾಗಿ ಸೇರ್ಪಡೆಯಾದರು.ಬಳಿಕ ಮಾತನಾಡಿದ ವಿನೇಶ್, ‘ನನ್ನಷ್ಟುಯಾತನೆಯನ್ನು ಬೇರಾವ ಕ್ರೀಡಾಪಟುಗಳು ಅನುಭವಿಸುವುದು ನನಗೆ ಇಷ್ಟವಿಲ್ಲ. ಕಷ್ಟಕಾಲದಲ್ಲಿ ಯಾರು ನಿಮ್ಮ ಜತೆಗೆ ಇರುತ್ತಾರೆ ಎಂಬುದು ನಿಮಗೆ ತಿಳಿದಿದೆ. ನಮ್ಮನ್ನು ದಿಲ್ಲಿ ಬೀದಿಗಳಲ್ಲಿ ಎಳೆದಾಡಿದಾಗ ಬಿಜೆಪಿ ಬಿಟ್ಟು ಎಲ್ಲ ಪಕ್ಷಗಳು ಬೆಂಬಲಿಸಿವೆ’ ಎಂದರು.