2012ರಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕೇಂದ್ರ ಸಚಿವರು, ಕಾಂಗ್ರೆಸ್ಸಿಗರು ಮಾಡಿದ್ದ ಟೀಕೆಯಿಂದ ಬೇಸತ್ತು ನಾನು ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್‌ ಎದುರು ತೀವ್ರ ಅಸಮಾಧಾನ ಹೊರಹಾಕಿದ್ದೆ. ಆಗ ನೊಂದುಕೊಂಡಿದ್ದ ಡಾ. ಸಿಂಗ್ ಅವರು ನಾನು ಆತ್ಮ*ತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು.

ನವದೆಹಲಿ : 2012ರಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕೇಂದ್ರ ಸಚಿವರು, ಕಾಂಗ್ರೆಸ್ಸಿಗರು ಮಾಡಿದ್ದ ಟೀಕೆಯಿಂದ ಬೇಸತ್ತು ನಾನು ಅಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್‌ ಎದುರು ತೀವ್ರ ಅಸಮಾಧಾನ ಹೊರಹಾಕಿದ್ದೆ. ಆಗ ನೊಂದುಕೊಂಡಿದ್ದ ಡಾ. ಸಿಂಗ್ ಅವರು ನಾನು ಆತ್ಮ*ತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದರು.

ಇದು ಅಂದಿನ ಮುಖ್ಯ ಚುನಾವಣಾ ಆಯುಕ್ತ ಎಸ್‌.ವೈ.ಖುರೇಷಿ ಅವರು ಬರೆದ ‘ಇಂಡಿಯಾ ಆ್ಯಂಡ್‌ ಐ: ಎ ಹಂಡ್ರೆಡ್‌ ಮೆಮೊರೀಸ್‌, ನಾಟ್‌ ಎ ಮೆಮೊಯಿರ್‌’ ಕೃತಿಯಲ್ಲಿನ ಉಲ್ಲೇಖ.

‘ಡಾ. ಸಿಂಗ್‌ ಅವರು ಸಾಂವಿಧಾನ ಮೌಲ್ಯಗಳನ್ನು ಮಾತುಗಳಲ್ಲಷ್ಟೇ ಅಲ್ಲ, ಜೀವನದಲ್ಲೂ ಅಳವಡಿಸಿಕೊಂಡ ವ್ಯಕ್ತಿ. ಲೋಪಗಳಾದ ಕಾರಣ ಬೇಸತ್ತು ಅವರು ತೀರಾ ಮನಸ್ಸಿಗೆ ಹಚ್ಚಿಕೊಂಡು ಇಂಥ ಮಾತು ಆಡಿದ್ದರು’ ಎಂದು ಪುಸ್ತಕದಲ್ಲಿ ಬಣ್ಣಿಸಿದ್ದಾರೆ ಖುರೇಷಿ.

ಸಂದರ್ಭ ಏನು?:

2012ರ ಉತ್ತರ ಪ್ರದೇಶ ಚುನಾವಣೆ ವೇಳೆ ಅಂದಿನ ಕೇಂದ್ರ ಕಾನೂನು ಸಚಿವ ಸಲ್ಮಾನ್‌ ಖುರ್ಷಿದ್‌ ಅವರು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಉದ್ಯೋಗ ಮೀಸಲಾತಿಯನ್ನು ಶೇ.4.5ರಿಂದ ಶೇ.9ಕ್ಕೆ ಏರಿಸಲಾಗುತ್ತದೆ ಎಂದಿದ್ದರು. ಆ ಸಂಬಂಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಡಿ 4 ದಿನ ಕಾಲ ಖುರ್ಷಿದ್‌ರನ್ನು ವಿಚಾರಣೆ ನಡೆಸಲಾಗಿತ್ತು. ಆಗ ಕಾಂಗ್ರೆಸ್‌ನಲ್ಲಿ ಕೆಲವರು, ‘ಚುನಾವಣಾ ಆಯೋಗ ದುರಂಹಕಾರಿ, ಸ್ವೇಚ್ಛಾಚಾರಿ’ ಎಂದು ದೂರಲಾರಂಭಿಸಿದರು. ಇದರಿಂದ ಬೇಸತ್ತು ಖುರೇಷಿ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಸಿಂಗ್‌ ಅವರ ಪತ್ರಿಕಾ ಕಾರ್ಯದರ್ಶಿಯಾಗಿದ್ದ ಹರೀಶ್ ಖರೆ ಮುಂದೆ ಅಸಮಾಧಾನ ತೋಡಿಕೊಂಡಿದ್ದರು.

ಚುನಾವಣಾ ಆಯೋಗ ಭಾರತದ ಹೆಮ್ಮೆ

‘ಇದಾದ ಮರು ದಿನವೇ ಸಿಂಗ್‌ ಕರೆ ಮಾಡಿ ಮಾತನಾಡಿದರು ಹಾಗೂ ಸಂಜೆ ಸಭೆಗೆ ಕರೆದರು. ಆಗ ‘ಖರೆ ಅವರು ನೀವು ಹೇಳಿದ್ದನ್ನು ನನಗೆ ತಿಳಿಸಿದ್ದಾರೆ. ಚುನಾವಣಾ ಆಯೋಗ ಭಾರತದ ಹೆಮ್ಮೆ. ಅದು ಭಾರತದ ಪ್ರಜಾಪ್ರಭುತ್ವದ ಆತ್ಮ. ಅದನ್ನು ನಾವು ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ. ನೀವೇ ಬೇಸರಗೊಂಡರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂದು ಹೇಳಿಕೊಂಡಿದ್ದರು. ಆ ಮಾತು ಕೇಳಿ ನನಗೆ ಏನೂ ತೋಚದಂತಾಗಿತ್ತು. ಕೊನೆಗೆ ಆ ಆರೋಪ ಕೆಲ ಸಚಿವರ ಕುರಿತಾಗಿತ್ತು ಎಂಬುದನ್ನು ಸ್ಪಷ್ಟಪಡಿಸಿ ಡಾ। ಸಿಂಗ್‌ರನ್ನು ಸಮಾಧಾನ ಮಾಡಿದೆ’ ಎಂದು ಖುರೇಷಿ ಬರೆದಿದ್ದಾರೆ.