ಇಂದಿನ ಆಧುನಿಕ ನಾಗಾಲೋಟದಿಂದ ಯುವಜನರು ಪುಸ್ತಕ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದು, ಯುವಜನರನ್ನು ಪುಸ್ತಕ ಓದುವಂತಾಗಲು ಹತ್ತಿರಕ್ಕೆ ತರುವಲ್ಲಿ ‘ಅಂಗಳದಲ್ಲಿ ತಿಂಗಳ ಪುಸ್ತಕ ಹಾಗೂ ಮನೆಗೊಂದು ಗ್ರಂಥಾಲಯ’ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಇಂದಿನ ಆಧುನಿಕ ನಾಗಾಲೋಟದಿಂದ ಯುವಜನರು ಪುಸ್ತಕ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದು, ಯುವಜನರನ್ನು ಪುಸ್ತಕ ಓದುವಂತಾಗಲು ಹತ್ತಿರಕ್ಕೆ ತರುವಲ್ಲಿ ‘ಅಂಗಳದಲ್ಲಿ ತಿಂಗಳ ಪುಸ್ತಕ ಹಾಗೂ ಮನೆಗೊಂದು ಗ್ರಂಥಾಲಯ’ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ತಿಳಿಸಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಕನ್ನಡ ಪುಸ್ತಕ ಪ್ರಾಧಿಕಾರದ ಯೋಜನೆ ‘ಮನೆಗೊಂದು ಗ್ರಂಥಾಲಯ’ ಕರಪತ್ರ ಬಿಡುಗಡೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದರು.ಯುವಜನರಲ್ಲಿ ಪುಸ್ತಕ ಸಂಸ್ಕೃತಿ ಭಿತ್ತಬೇಕು ಎಂಬ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ 30 ಜಿಲ್ಲೆಗಳಲ್ಲಿ ಕಾರ್‍ಯಕ್ರಮ ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಬಾಕಿ ಇದೆ ಎಂದು ಹೇಳಿದರು. ಜ್ಞಾನಪೀಠ ಪ್ರಶಸ್ತಿ ಪಡೆದವರು ಸೇರಿದಂತೆ ಹಲವು ಸಾಹಿತಿ ಹಾಗೂ ಕವಿಗಳ ಹೆಸರಿನಲ್ಲಿ ವಿಶೇಷ ದಿನದಂದು ಕಾರ್ಯಕ್ರಮ ಆಯೋಜಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಸಾಹಿತಿಗಳು ನೀಡಿರುವ ಕೊಡುಗೆಯನ್ನು ಸ್ಮರಿಸಲಾಗುತ್ತದೆ ಎಂದರು. ಕನ್ನಡಿಗರಲ್ಲಿ ಪುಸ್ತಕ ಓದುವ ಸಂಸ್ಕೃತಿ ಹೆಚ್ಚಿದ್ದು, ಇದನ್ನು ಮತ್ತಷ್ಟು ವಿಸ್ತರಿಸುವಲ್ಲಿ ಪುಸ್ತಕ ಪ್ರಾಧಿಕಾರ ಮುಂದಾಗಿದೆ. ಜ್ಞಾನಾಲಯವನ್ನು ಬಿತ್ತಲು ಪ್ರಯತ್ನಿಸಲಾಗುತ್ತಿದೆ. ಪ್ರತಿ ಮನೆಯಲ್ಲೂ ಪೂಜಾ ಕೊಠಡಿ ಇರುವಂತೆ ಗ್ರಂಥಾಲಯ ಭಂಡಾರ ಸಹ ಇದ್ದರೆ ಇಡೀ ಕುಟುಂಬದ ಎಲ್ಲರ ಜ್ಞಾನಾರ್ಜನೆ ಹೆಚ್ಚಲಿದೆ ಎಂದು ಡಾ. ಮಾನಸ ಹೇಳಿದರು.ಪ್ರತಿ ಜಿಲ್ಲೆಯಲ್ಲಿ 10 ಜನರನ್ನು ಜಾಗೃತಿ ಸದಸ್ಯರನ್ನಾಗಿ ನೇಮಿಸಲಾಗುತ್ತಿದ್ದು, ರಾಜ್ಯದಾದ್ಯಂತ ಆಂದೋಲನ ಮಾದರಿಯಲ್ಲಿ ನಡೆಸಲಾಗುತ್ತದೆ. ಸಾಹಿತಿ ದೇವನೂರು ಮಹಾದೇವ ಅವರು ಹೇಳಿದಂತೆ ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿತ್ತಿದ ಬೀಜ ಬೆಳೆಯಲೇಬೇಕು. ಆ ನಿಟ್ಟಿನಲ್ಲಿ ಪುಸ್ತಕ ಅಭಿರುಚಿ ಸಂಸ್ಕೃತಿಯನ್ನು ಹೆಚ್ಚಿಸಲಾಗುತ್ತದೆ ಎಂದರು.
ಕನ್ನಡದ ಮಹತ್ವ ಲೇಖಕಿ ಮತ್ತು ಮೊಟ್ಟ ಮೊದಲ ಮಹಿಳಾ ಪ್ರಕಾಶಕಿ, ನಂಜನಗೂಡು ತಿರುಮಲಾಂಬ ಪ್ರಶಸ್ತಿ, ಕನ್ನಡದ ಅಪ್ರತಿಮ ಪುಸ್ತಕ ಪ್ರೇಮಿ, ಪುಸ್ತಕ ಪ್ರೀತಿಗೆ ಮತ್ತೊಂದು ಹೆಸರು ಹಾ.ಮಾ. ನಾಯಕ ಪ್ರಶಸ್ತಿ, ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ತಮ್ಮ ಇಡೀ ಸಂಬಳವನ್ನೆಲ್ಲ ಅಕಾಡೆಮಿಯ ಪುಸ್ತಕಗಳ ಪ್ರಕಟಣೆಗೆ ಬಳಸಿದ ಪುಸ್ತಕ ಪ್ರೇಮಿ ಮತ್ತು ಕಲಾಯೋಗಿ ಪಿ.ಆರ್. ತಿಪ್ಪೇಸ್ವಾಮಿ ಪ್ರಶಸ್ತಿ, ಹಾಗೆಯೇ ತಮ್ಮ ಬದುಕಿನುದ್ದಕೂ ಪುಸ್ತಕಗಳನ್ನು ತಲೆಮೇಲೆ ಹೊತ್ತುಕೊಂಡು ಮನೆ ಮನೆಗೆ ತಲುಪಿಸಿದ ಮಹಾನ್ ಪುಸ್ತಕ ಪ್ರೇಮಿ ಗಳಗನಾಥ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಹಿಂದೆ ಚಂದಮಾಮ, ಬಾಲಮಿತ್ರ ಓದುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಪುಸ್ತಕ ಓದುವುದು ಕಡಿಮೆಯಾಗಿದೆ ಎಂದರು. ಮುಂದಿನ ಪೀಳಿಗೆಗೆ ಪುಸ್ತಕ ಓದುವ ಸಂಸ್ಕೃತಿ ಹೆಚ್ಚಬೇಕು. ಇದರಿಂದ ಜ್ಞಾನಾರ್ಜನೆ, ವಿಚಾರಧಾರೆ ತಿಳಿಯಬೇಕು ಎಂದರು. ಮನೆ ಮಂದಿಗೆ ಪುಸ್ತಕ ಮಹತ್ವದ ಜಾಗೃತಿ ಮೂಡಿಸಬೇಕು. ಕೊಡಗು ಜಿಲ್ಲೆಯಲ್ಲಿ ಬರಹಗಾರರ ಸಂಖ್ಯೆ ಹೆಚ್ಚಿದ್ದು. ಪ್ರಕಟವಾಗುವ ಪುಸ್ತಕಗಳು ಮಾರಾಟವಾಗಬೇಕು. ಎಲ್ಲರೂ ಯೋಚಿಸಬೇಕು ಎಂದರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿ, ಪುಸ್ತಕ ಓದುವ ಅಭಿರುಚಿ ಎಲ್ಲರಲ್ಲೂ ಇರಬೇಕು. ಕೊಡಗು ಜಿಲ್ಲೆಯಲ್ಲಿ ಪುಸ್ತಕ ಮಳಿಗೆ ಇರುವುದಿಲ್ಲ. ಆದ್ದರಿಂದ ಪುಸ್ತಕ ಪ್ರಾಧಿಕಾರದವರು ಪುಸ್ತಕ ಮಳಿಗೆ ಸ್ಥಾಪನೆಗೆ ಮುಂದಾಗಬೇಕು. ಹಾಗೆಯೇ ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಮೇಳಗಳನ್ನು ಆಯೋಜಿಸುವಂತಾಗಬೇಕು. ಆ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಮನೆಗೊಂದು ಗ್ರಂಥಾಲಯ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಮುಂದಿನ ದಿನಗಳಲ್ಲಿ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಲು ಮಕ್ಕಳ ಕವಿಗೋಷ್ಠಿ ಆಯೋಜಿಸಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಕನ್ನಡ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುತ್ತಿದೆ ಎಂದು ಹೇಳಿದರು. ಅರ್ಹತಾ ಪತ್ರವನ್ನು ಬಿ.ಎನ್. ಪ್ರಕಾಶ್, ಸುಬ್ರಾಯ ಸಂಪಾಜೆ, ಎಚ್.ಎಲ್. ದಿವಾಕರ, ರಂಜಿತ್ ಕವಲಪಾರ, ಮುರಳೀಧರ, ಕೆ.ವಿ. ಉಮೇಶ್, ಕೆ. ಜಯಲಕ್ಷ್ಮಿ, ಕೇಶವ ಕಾಮತ್, ಟಿ.ಪಿ. ರಮೇಶ್, ಪ್ರತಿಮಾ ರೈ ಅವರಿಗೆ ವಿತರಿಸಲಾಯಿತು. ಶ್ರೀನಿವಾಸ್ ಸ್ವಾಗತಿಸಿದರು, ಕೆ. ಜಯಲಕ್ಷ್ಮಿ ನಿರೂಪಿಸಿದರು.