ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣ ಮತ್ತು ತಾಲೂಕಿನ 346 ಹಳ್ಳಿಗಳು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ 106 ಗ್ರಾಮಗಳಿಗೆ ಭದ್ರಾ ಜಲಾಶಯದ ಬಲದಂಡೆ ನಾಲಾದ ಮೂಲಕ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಹರಿಸುವ ಕಾಮಗಾರಿ ಶೇಕಡ 70 ರಷ್ಟು ಮುಗಿಯುತ್ತ ಬಂದಿದೆ. ಯೋಜನೆಯಿಂದ ಅಚ್ಚುಕಟ್ಟು ರೈತರಿಗೆ ಯಾವ ತೊಂದರೆಯೂ ಇಲ್ಲ ಎಂದು ಶಾಸಕ ಡಿ.ಜಿ.ಶಾಂತನಗೌಡ ಸ್ಪಷ್ಟಪಡಿಸಿದರು.ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣ ಮತ್ತು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಗ್ರಾಮಗಳಿಗೆ ಭದ್ರಾ ಜಲಾಶಯದ ಬಲದಂಡೆಯ ನಾಲಾದ ಮೂಲಕ ನಾಲಾ ಸೀಳಿ ನೀರು ಒಯ್ಯಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ಸ್ಪಷ್ಟನೆ ನೀಡುವ ಸಲುವಾಗಿ ಜಿಲ್ಲೆಯ ಹರಿಹರ, ಮಾಯಕೊಂಡ, ಚನ್ನಗಿರಿ, ಹರಪನಹಳ್ಳಿ ಶಾಸಕರ ಜತೆ ಶನಿವಾರ ತಾಲೂಕಿನ ಕುಂದೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ವಿಪಕ್ಷದವರು ಈ ಯೋಜನೆಯ ಕುರಿತು ಜನ ಮತ್ತು ರೈತರಲ್ಲಿ ಆಧಾರರಹಿತ ಹೇಳಿಕೆಗಳನ್ನು ನೀಡುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆ ಜನ ಮತ್ತು ಭದ್ರಾ ನಾಲಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸರಿಯಾದ ಮಾಹಿತಿ ನೀಡುವ ಸಲುವಾಗಿ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಬಸವಂತಪ್ಪ, ಬಸವರಾಜ ಶಿವಗಂಗ, ಲತಾ ಮಲ್ಲಿಕಾರ್ಜುನ್, ಹರಿಹರದ ಮಾಜಿ ಶಾಸಕ ರಾಮಪ್ಪ, ಕಬ್ಬು ಬೆಳಗಾರರರ ಸಂಘದ ಅಧ್ಯಕ್ಷ ತೇತಸ್ವಿ ಪಟೇಲ್ ಸೇರಿದಂತೆ ಅನೇಕ ಮುಖಂಡರ ಜತೆ ರೈತರ ಸಭೆಯನ್ನು ಆಯೋಜಿಸುವ ಮೂಲಕ ಯೋಜನೆಯ ನಿಜವಾದ ಧ್ಯೇಯೋದ್ದೇಶಗಳ ಬಗ್ಗೆ ಸ್ಪಷ್ಟನೆ ನೀಡಲಾಗುತ್ತಿದೆ. ಇದರಿಂದ ಯಾರಿಗೂ ತೊಂದರೆಯಿಲ್ಲ ಎಂಬ ಭರವಸೆ ನೀಡಲಾಗುತ್ತಿದೆ ಎಂದು ಹೇಳಿದರು.ವಿಶೇಷವಾಗಿ ಕುಡಿಯುವ ನೀರಿನ ಯೋಜನೆಗಳಿಗೆ ಯಾರೂ ಕೂಡ ವಿರೋಧ ಮಾಡುವಂತಿಲ್ಲ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು ಭದ್ರಾ ನಾಲಾ ಕೊನೆ ಭಾಗದ ರೈತರಿಗೂ ಕೂಡ ನೀರು ಒದಗಿಸುವ ಇಚ್ಛಾಶಕ್ತಿಯೊಂದಿಗೆ ಸಂಬಂಧಿಸಿ ಇಲಾಖೆಗಳ ಎಂಜಿನಿಯರ್‌ಗಳನ್ನು ಇಟ್ಟುಕೊಂಡು ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ ಎಂದರು.
ರಾಜೀನಾಮೆ ನೀಡಲು ಸಿದ್ಧ:ಈ ತಾಲೂಕಿನಲ್ಲಿ ಯೂರಿಯಾ ಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ವಿಪಕ್ಷದವರು ಸುಳ್ಳು ಆರೋಪ ಮಾಡುತ್ತಿದ್ದು ಇದು ಸತ್ಯಕ್ಕೆ ದೂರವಾಗಿದ್ದು, ತಾಲೂಕಿನಲ್ಲಿ ಒಂದು ಚೀಲ ಕೂಡ ಕಾಳಸಂತೆಯಲ್ಲಿ ಮಾರಾಟವಾಗಿರುವುದನ್ನು ಸಾಬೀತು ಪಡಿಸಿದರೆ ತಾನು ರಾಜೀನಾಮೆ ನೀಡುವುದಾಗಿ ಹೇಳಿದರು.
ಶಾಸಕರಾದ ಬಸವಂತಪ್ಪ, ಬಸವರಾಜ ಶಿವಗಂಗಾ, ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್, ಶಾಸಕಿ ಲತಾ ಮಲ್ಲಿಕಾರ್ಜುನ್, ಹರಿಹರದ ಮಾಜಿ ಶಾಸಕ ರಾಮಪ್ಪ ಮಾತನಾಡಿದರು. ಕಾಂಗ್ರೆಸ್ ತಾ,ಅಧ್ಯಕ್ಷ ಎಚ್.ಎ.ಗದ್ದಿಗೇಶ್, ಡಿಸಿಸಿ. ಬ್ಯಾಂಕ್ ನಿರ್ದೇಶಕರಾದ ಡಿ.ಜಿ.ವಿಶ್ವನಾಥ್, ಸುರೇಂದ್ರಗೌಡ, ಶಿಮುಲ್ ನಿರ್ದೇಶಕ ಬಿ.ಜಿ.ಬಸವರಾಜಪ್ಪ, ಕೆಂಗಲಹಳ್ಳಿ ಷಣ್ಮುಖಪ್ಪ, ಎಂ.ಸಿ.ಮೋಹನ, ವರದರಾಜಪ್ಪಗೌಡ, ಎಚ್.ಎ.ಉಮಾಪತಿ, ಮಧುಗೌಡ, ಯುವ ಕಾಂಗ್ರೆಸ್‌ನ ಮನುವಾಲಜ್ಜಿ, ಆರ್. ನಾಗಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಮೇಶ್, ಕುಂದೂರು ಮಂಜುನಾಥ್ ಅನೇಕ ಮುಖಂಡರು ಇದ್ದರು.