ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಸಹಕಾರ ಸಂಘಗಳಿಗೆ ನಬಾರ್ಡ್ ನೀಡುತ್ತಿದ್ದ ಅನುದಾನವನ್ನು ಶೇ.೪೦ ರಿಂದ ಶೇ.೧೦ಕ್ಕೆ ಇಳಿಸಿದೆ. ಆ ಮೂಲಕ ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ಸಹಕಾರ ಸಂಘಗಳನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ ಆಯೋಜಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳು ರೈತರ ಪಾಲಿಗೆ ಸಂಜೀವಿನಿ ಇದ್ದಂತೆ. ನಬಾರ್ಡ್‌ನಿಂದ ಸಮರ್ಪಕವಾಗಿ ಅನುದಾನ ಬರದಿದ್ದರೆ ಸಂಘಗಳು ರೈತರಿಗೆ ಸಾಲ ನೀಡುವುದಕ್ಕೆ ತೊಂದರೆಯಾಗಲಿದೆ. ಸಹಕಾರ ಸಂಘಗಳಿಂದ ಬೆಳೆ ಸಾಲವನ್ನು ಸಮರ್ಪಕವಾಗಿ ನೀಡಲಾಗುವುದಿಲ್ಲ. ನಬಾರ್ಡ್ ಅನುದಾನ ಕಡಿತಗೊಳಿಸಿರುವ ಕೇಂದ್ರ ಬಿಜೆಪಿ ಸರ್ಕಾರ ರೈತರ ಪರವಾಗಿದೆಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ೩ ಲಕ್ಷ ರು.ವರೆಗಿದ್ದ ಬಡ್ಡಿರಹಿತ ಸಾಲದ ಮಿತಿಯನ್ನು ೫ ಲಕ್ಷ ರು.ಗೆ ಏರಿಸಿದೆ. ರೈತರಿಗೆ ಬಡ್ಡಿ ಹೊರೆಯಾಗದಂತೆ ಸರ್ಕಾರವೇ ಬಡ್ಡಿಯನ್ನು ಪಾವತಿಸುತ್ತಿದೆ. ನಿಜವಾದ ರೈತಪರ ಸರ್ಕಾರ ನಮ್ಮದು. ಗ್ಯಾರಂಟಿ ಯೋಜನೆಗಳ ಜೊತೆಗೆ ಹಾಲಿಗೆ ಪ್ರೋತ್ಸಾಹಧನ, ಬಡ್ಡಿರಹಿತ ಸಾಲವನ್ನು ನೀಡುತ್ತಾ ರೈತರಿಗೆ ನೆರವಾಗುತ್ತಾ ಬಂದಿದೆ ಎಂದು ನುಡಿದರು.ಮಂಡ್ಯ ಡಿಸಿಸಿ ಬ್ಯಾಂಕ್ ೪೫೦೦ ಕೋಟಿ ರು. ವಹಿವಾಟನ್ನು ಹೊಂದಿದ್ದು, ೧೩೦೦ ಕೋಟಿ ರು.ಗಳನ್ನು ಬಡ್ಡಿರಹಿತ ಸಾಲವಾಗಿ ನೀಡಿದೆ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ರೈತರು ಮತ್ತು ಜನಪರವಾಗಿ ಸರ್ಕಾರ ಕೆಲಸ ಮಾಡುತ್ತಿದ್ದರೂ ಚುನಾವಣೆಯಲ್ಲಿ ಕೆಲವೊಮ್ಮೆ ಜನರ ತೀರ್ಮಾನಗಳು ಬೇಸರ ಉಂಟುಮಾಡುತ್ತವೆ. ಅಭಿವೃದ್ಧಿ ಪರವಾಗಿರುವವರಿಗೆ, ರೈತರ ಪರವಾಗಿ ಕೆಲಸ ಮಾಡುವವರನ್ನು ಜನರು ಬೆಂಬಲಿಸುವಂತೆ ಮನವಿ ಮಾಡಿದರು.
ಸಹಕಾರ ಸಂಘಗಳಲ್ಲಿ ಹೊಸಬರಿಗೆ ಆದ್ಯತೆ ನೀಡುವುದರ ಜೊತೆಗೆ ಪ್ರಾಮಾಣಿಕರಿಗೆ ಅವಕಾಶ ಮಾಡಿಕೊಡಬೇಕು. ಸಾಲ ಸೌಲಭ್ಯಗಳು ಎಲ್ಲರಿಗೂ ದೊರೆಯುವಂತಾಗಬೇಕು. ಸಾಲ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದರೆ ಸಹಕಾರ ರಂಗದ ಉದ್ದೇಶ ಸಾರ್ಥಕಗೊಳ್ಳುವುದಿಲ್ಲ. ಸಾಲ ಪಡೆಯುವಾಗ ಇರುವ ಉತ್ಸಾಹ, ಆಸಕ್ತಿ ಮರುಪಾವತಿಸುವಾಗಲೂ ಇರಬೇಕು. ಇದರಿಂದ ಸಹಕಾರ ಸಂಘಗಳು, ಬ್ಯಾಂಕುಗಳ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಮಾತನಾಡಿ, ಸಹಕಾರ ಸಂಘಗಳಿಗೆ ಸುಸಜ್ಜಿತ ಕಟ್ಟಡಗಳಿಲ್ಲ, ಮೂಲ ಸೌಕರ್ಯಗಳನ್ನು ಹೊಂದಿಲ್ಲ. ಕೆಎಂಎಫ್, ಮನ್‌ಮುಲ್ ಹಾಗೂ ಇನ್ನಿತರ ಸಂಸ್ಥೆಗಳು, ಮುಖಂಡರ ಲೂಕ್ಷಿೃಕ್ಷಿನ್ನು ಪಡೆದು ಸ್ವಂತ ಕಟ್ಟಡವನ್ನು ನಿರ್ಮಿಸಿಕೊಳ್ಳಬೇಕು ಎಂದು ಹೇಳಿದರು.
ಕೆಎಂಎಫ್ ನಂದಿನಿ ಹಾಲು ದೆಹಲಿಯಲ್ಲಿ ಮಾರುಕಟ್ಟೆಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಸಹಕಾರ ಸಂಘಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಾ ಲಾಭದತ್ತ ಮುನ್ನಡೆಯಬೇಕು ಎಂದು ನುಡಿದರು.ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ತಿಮ್ಮರಾಯಿಗೌಡ, ಮನ್‌ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ, ದೇವಲಾಪುರ ರೈತ ಉತ್ಪನ್ನ ಕಂಪನಿ ಅಧ್ಯಕ್ಷ ಎನ್.ಜೆ.ರಾಜೇಶ್, ಡಿಸಿಸಿ ಬ್ಯಾಂಕ್ ಸಿಇಒ ವನಜಾಕ್ಷಿ, ಸಹಕಾರ ಅಭಿವೃದ್ಧಿ ಅಧಿಕಾರಿ ಶೋಭಾ ಇತರರಿದ್ದರು.