ಸಾರಾಂಶ
ತಿಪಟೂರು ನಗರದ ಎಪಿಎಂಸಿಯಲ್ಲಿ ಜಾರಿಗೆ ತಂದಿರುವ ಟೆಂಡರ್ ಪ್ರಕ್ರಿಯೆಯ ಹೊಸ ನಿಯಮಗಳಿಂದ ರೈತರಿಗೆ ಹಾಗೂ ಸಣ್ಣ ಕೊಬ್ಬರಿ ವರ್ತಕರಿಗೆ ನಷ್ಟವಾಗಲಿದ್ದು ಈ ಬಗ್ಗೆ ಪರಮಾರ್ಶಿಸಿ ನಿಯಮಗಳನ್ನು ಜಾರಿಗೆ ತರಬೇಕಿತ್ತು ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಎಪಿಎಂಸಿಯಲ್ಲಿ ಜಾರಿಗೆ ತಂದಿರುವ ಟೆಂಡರ್ ಪ್ರಕ್ರಿಯೆಯ ಹೊಸ ನಿಯಮಗಳಿಂದ ರೈತರಿಗೆ ಹಾಗೂ ಸಣ್ಣ ಕೊಬ್ಬರಿ ವರ್ತಕರಿಗೆ ನಷ್ಟವಾಗಲಿದ್ದು ಈ ಬಗ್ಗೆ ಪರಮಾರ್ಶಿಸಿ ನಿಯಮಗಳನ್ನು ಜಾರಿಗೆ ತರಬೇಕಿತ್ತು ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದರು. ನಗರದ ಅವರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿಯಲ್ಲಿ ಮೊದಲಿದ್ದ ನಿಯಮಗಳು ಸರಿಯಾಗಿದ್ದವು. ಆದರೆ ಹೊಸ ನಿಯಮಗಳು ದೊಡ್ಡ ವರ್ತಕರಿಗೆ ಅನುಕೂಲವಾಗಿವೆ ಎಂದು ರೈತರು ಹೇಳುತ್ತಿದ್ದಾರೆ. ಒಂದೊಂದು ಅಂಗಡಿಗಳಲ್ಲಿ ಒಂದೊಂದು ಬೆಲೆ ನಿಗದಿ ಮಾಡುವುದರಿಂದ ರೈತರು ಯಾವ ಅಂಗಡಿಗೆ ತಮ್ಮ ಕೊಬ್ಬರಿ ಬಿಡಬೇಕೆಂಬುದು ತಿಳಿಯುತ್ತಿಲ್ಲ. ಟೆಂಡರ್ ದರ ಒಂದು ರೀತಿ ಇದ್ದರೆ ದೊಡ್ಡ ವರ್ತಕರು ತಮ್ಮ ಅಂಗಡಿಯಲ್ಲಿ ಹೆಚ್ಚಿನ ಬೆಲೆಗೆ ಟೆಂಡರ್ ಕರೆಯುತ್ತಿದ್ದಾರೆ. ಇದರಿಂದ ಸಣ್ಣ ವರ್ತಕರು ಅಂಗಡಿ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿದ್ದಾರೆ. ಮೊದಲೆಲ್ಲಾ ಕೊಬ್ಬರಿ ಬಿಡುವ ಮುಂಚೆಯೇ ರೈತರು ತಮ್ಮ ಅಂಗಡಿಗಳಲ್ಲಿ ಮುಂಗಡ ಹಣ ಕೇಳಿ ಪಡೆದುಕೊಳ್ಳುತ್ತಿದ್ದರು. ಆದರೆ ನಿಯಮಗಳಿಂದ ಯಾವ ಅಂಗಡಿಯಲ್ಲಿ ಎಷ್ಟು ದರ ನಿಗದಿ ಮಾಡುತ್ತಾರೋ ಗೊತ್ತಿಲ್ಲ. ಆದ್ದರಿಂದ ಹೊಸ ನಿಯಮಗಳನ್ನು ಮತ್ತೊಮ್ಮೆ ಪರಮಾರ್ಶಿಸಿ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕೆಂದು ಶಾಸಕರು ಹಾಗೂ ಎಪಿಎಂಸಿ ಕಾರ್ಯದರ್ಶಿಗಳಿಗೆ ಶಾಂತಕುಮಾರ್ ಒತ್ತಾಯಿಸಿದರು.ಯುಜಿಡಿ ನೀರಿನಿಂದ ಸಮಸ್ಯೆ: ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಗೆ ಯುಜಿಡಿ ನೀರು ಮಿಶ್ರಿತವಾಗುತ್ತಿದ್ದು ಹಲವು ತಿಂಗಳಿನಿಂದಲೂ ನಗರವಾಸಿಗಳು ಇದೇ ನೀರನ್ನು ಬಳಸುತ್ತಿದ್ದಾರೆ. ಈ ಬಗ್ಗೆ ಶಾಸಕರು ಹಾಗೂ ನಗರಸಭೆ ಅಧಿಕಾರಿಗಳನ್ನು ಕೇಳಿದರೆ ಟೆಂಡರ್ ಆಗಿದೆ ಹೊಸ ಮೋಟರ್ ಅಳವಡಿಸುತ್ತೇವೆಂದು ಸಬೂಬು ಹೇಳಿತ್ತಿರುವುದು ಬಿಟ್ಟರೆ ಸರಿಪಡಿಸಿಲ್ಲ. ಕೊಳಚೆ ನೀರನ್ನು ಕುಡಿದು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದ್ದು ಶಾಸಕರು ಕೂಡಲೆ ಮೋಟರ್ ರಿಪೇರಿ ಮಾಡಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದಲ್ಲಿ ನಗರಸಭೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಅವೈಜ್ಞಾನಿಕ: ಎತ್ತಿನಹೊಳೆ ಕಾಮಗಾರಿಯಿಂದ ತಾಲೂಕಿನಲ್ಲಿ ನಾಲ್ಕೈದು ಜನರು ಪ್ರಾಣ ಬಿಟ್ಟಿದ್ದಾರೆ. ಗುತ್ತಿಗೆದಾರರ ಬೇಜವಾಬ್ದಾರಿಗೆ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಈಗಲಾದರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಎತ್ತಿನಹೊಳೆ ಯೋಜನೆಗೆ ಭೂಮಿ ಬಿಟ್ಟುಕೊಟ್ಟ ರೈತರಿಗೆ ಒಂದು ಎಕರೆಗೆ 30ಲಕ್ಷ ರು. ನೀಡುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದರು. ಆದರೆ ನಮ್ಮ ತಾಲೂಕಿನ ಬಹುತೇಕ ರೈತರಿಗೆ 10-15 ಲಕ್ಷ ನೀಡಲಾಗಿದೆ. ಇತ್ತ ಭೂಮಿಯೂ ಇಲ್ಲ. ಅತ್ತ ಸರಿಯಾದ ಪರಿಹಾರವೂ ಇಲ್ಲದೆ ರೈತ ನಷ್ಟವನ್ನು ಅನುಭವಿಸುವಂತಾಗಿದೆ ಎಂದರು.