ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರವಣಬೆಳಗೊಳ
ಮಕ್ಕಳ ಬೆಳವಣಿಗೆಗೆ ಪೌಷ್ಠಿಕ ಆಹಾರ ಅತ್ಯಂತ ಅವಶ್ಯಕವಾಗಿದ್ದು, ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಉತ್ತಮವಾದ ಆಹಾರ ಪದ್ಧತಿ ಅತ್ಯಂತ ಅವಶ್ಯಕವಾಗಿದೆ ಎಂದು ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ.ಕುಸುಮ ಹೇಳಿದರು.ಹೋಬಳಿಯ ಸುಂಡಹಳ್ಳಿಯ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಆಭಿವೃದ್ಧಿ ಇಲಾಖೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಪೌಷ್ಠಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಗತ್ಯವಿರುವ ಸಮತೋಲಿತ ಪೌಷ್ಠಿಕ ಆಹಾರ ಸೇವನೆಯಿಂದ ಮಕ್ಕಳ ದೇಹದ ಬೆಳವಣಿಗೆ ಹಾಗೂ ಬುದ್ಧಿಶಕ್ತಿ ಹೆಚ್ಚಾಗುತ್ತದೆ. ತೂಕ, ಎತ್ತರ ಮತ್ತು ಬೆಳವಣಿಗೆಗೆ ಯಾವ ಆಹಾರ ಸೇವಿಸಬೇಕು, ಪೌಷ್ಟಿಕಾಂಶಗಳು, ಪ್ರೋಟೀನ್, ಕಾರ್ಬೊಹೈಡ್ರೇಟ್, ಕೊಬ್ಬು, ವಿಟಮಿನ್, ಖನಿಜಗಳು ಮುಂತಾದವುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಸಹಾಯಕ ಅಭಿಯೋಜಕಿ ಸುನೀತ ಮಾತನಾಡಿ, ಮಕ್ಕಳ ಭವಿಷ್ಯವು ಅವರ ಆರೋಗ್ಯದ ಮೇಲೆ ಆಧಾರಿತವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪೋಷಕರು ಪೌಷ್ಠಿಕ ಆಹಾರ ಸೇವನೆಗಿಂತ ಜಂಕ್‌ಫುಡ್‌ಗೆ ಆದ್ಯತೆ ನೀಡುತ್ತಿದ್ದಾರೆ. ಇವು ತಾತ್ಕಾಲಿಕ ತೃಪ್ತಿಯನ್ನು ನೀಡಿದರೂ ದೀರ್ಘಕಾಲದ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ತ್ವರಿತ ಆಹಾರ (ಫಾಸ್ಟ್ ಫುಡ್) ಸೇವನೆಯಿಂದ ಪೌಷ್ಟಿಕಾಂಶದ ಕೊರತೆ ಹೆಚ್ಚುತ್ತಿದ್ದು, ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಲು, ಮೊಸರು, ತಾಜಾ ಹಣ್ಣು, ಹಸಿರು ತರಕಾರಿಗಳು, ಧಾನ್ಯಗಳು ಹಾಗೂ ನೈಸರ್ಗಿಕ ಆಹಾರ ಪದಾರ್ಥಗಳಲ್ಲಿ ಮಕ್ಕಳಿಗೆ ಬೇಕಾಗಿರುವ ವಿಟಮಿನ್‌ಗಳು, ಖನಿಜಗಳು ಮತ್ತು ಪ್ರೋಟೀನುಗಳು ದೊರೆಯುತ್ತವೆ. ಪೌಷ್ಠಿಕ ಆಹಾರ ಸೇವನೆ ಮೂಲಕ ಆರೋಗ್ಯವಂತರಾಗಿ ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಿ ಪೋಷಣೆ ಮಾಡಬೇಕು ಎಂದರು.
ನಂತರ ನ್ಯಾಯಾಧೀಶರು, ವಕೀಲರು, ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಎತ್ತಿನಗಾಡಿ ಮೆರವಣಿಗೆ ಮೂಲಕ ಪೌಷ್ಠಿಕ ಆಹಾರದ ಬಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಯರಾಮ್, ಗ್ರಾಮ ಪಂಚಾಯತಿ ಸದಸ್ಯ ಮಹೇಶ್, ವಕೀಲರ ಸಂಘದ ಉಪಾಧ್ಯಕ್ಷ ಡಿ.ಪಿ.ದಿನೇಶ್, ಕೆ.ಎಲ್.ಚೇತನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಂದಿರಾ, ಮೇಲ್ವಿಚಾರಕಿ ಮಮತಾ ಹಾಗೂ ಶ್ರವಣಬೆಳಗೊಳ ಹೋಬಳಿಯ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.