ಸಕ್ಕರೆ ನಾಡು ಮಂಡ್ಯದಲ್ಲೂ ಮೇಲೆದ್ದ ‘ಹಿಂದುತ್ವದ ಅಲೆ’..!

| Published : Sep 12 2025, 12:06 AM IST

ಸಕ್ಕರೆ ನಾಡು ಮಂಡ್ಯದಲ್ಲೂ ಮೇಲೆದ್ದ ‘ಹಿಂದುತ್ವದ ಅಲೆ’..!
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಾತಂತ್ರ್ಯ ಚಳವಳಿ, ಕಾವೇರಿ ಹೋರಾಟ, ರೈತ ಚಳವಳಿಗೆ ಹೆಸರಾಗಿದ್ದ ಮಂಡ್ಯ ಜಿಲ್ಲೆಯೊಳಗೆ ಹಿಂದುತ್ವದ ಅಲೆ ಆಗಾಗ ಮೇಲೇಳುತ್ತಿದೆ. ನೀರಿಗಾಗಿ, ಅನ್ನದಾತರ ಸಮಸ್ಯೆ ವಿರುದ್ಧ ಸಿಡಿದೇಳುತ್ತಿದ್ದ ಸಕ್ಕರೆ ಜಿಲ್ಲೆಯ ಜನರು ಇದೀಗ ಧಾರ್ಮಿಕ ಹೋರಾಟಕ್ಕೆ ಹೆಚ್ಚು ಮನ್ನಣೆ ನೀಡಲಾರಂಭಿಸಿದ್ದಾರೆ. ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಕಂಡುಬಂದ ಜನಸ್ತೋಮ ಈ ಅನುಮಾನಕ್ಕೆ ಪುಷ್ಠಿ ನೀಡುವಂತಿತ್ತು.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ವಾತಂತ್ರ್ಯ ಚಳವಳಿ, ಕಾವೇರಿ ಹೋರಾಟ, ರೈತ ಚಳವಳಿಗೆ ಹೆಸರಾಗಿದ್ದ ಮಂಡ್ಯ ಜಿಲ್ಲೆಯೊಳಗೆ ಹಿಂದುತ್ವದ ಅಲೆ ಆಗಾಗ ಮೇಲೇಳುತ್ತಿದೆ. ನೀರಿಗಾಗಿ, ಅನ್ನದಾತರ ಸಮಸ್ಯೆ ವಿರುದ್ಧ ಸಿಡಿದೇಳುತ್ತಿದ್ದ ಸಕ್ಕರೆ ಜಿಲ್ಲೆಯ ಜನರು ಇದೀಗ ಧಾರ್ಮಿಕ ಹೋರಾಟಕ್ಕೆ ಹೆಚ್ಚು ಮನ್ನಣೆ ನೀಡಲಾರಂಭಿಸಿದ್ದಾರೆ. ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಕಂಡುಬಂದ ಜನಸ್ತೋಮ ಈ ಅನುಮಾನಕ್ಕೆ ಪುಷ್ಠಿ ನೀಡುವಂತಿತ್ತು.

ಮಂಡ್ಯ ಜಿಲ್ಲೆ ಮೂಲತಃ ಒಕ್ಕಲಿಗರ ಭದ್ರಕೋಟೆ. ಇಲ್ಲಿಯವರೆಗೆ ಮಂಡ್ಯ ಮಣ್ಣಿನಲ್ಲಿ ಹಿಂದುತ್ವದ ಹೋರಾಟಕ್ಕೆ ಜನಮನ್ನಣೆಯೇ ದೊರಕಿರಲಿಲ್ಲ. ಧರ್ಮ ಹೋರಾಟದ ಪ್ರಭಾವಕ್ಕೆ ಒಳಗಾಗಿರಲಿಲ್ಲ. ಕಾವೇರಿ, ರೈತ ಚಳವಳಿ ವಿಚಾರದಲ್ಲಿ ಇಡೀ ದೇಶದ ಗಮನವನ್ನೇ ಸೆಳೆದಿತ್ತು. ಚಳವಳಿಯಿಂದಲೇ ಮಂಡ್ಯ ಜಿಲ್ಲೆಗೊಂದು ವಿಶೇಷ ಸ್ಥಾನವಿತ್ತು. ಅದರಿಂದಲೇ ‘ಮಂಡ್ಯ’ ಎಂದರೆ ‘ಇಂಡಿಯಾ’ ಎಂಬ ನಾಣ್ಣುಡಿ ಹುಟ್ಟಿಕೊಂಡಿತ್ತು.

ಧರ್ಮವನ್ನು ಮುಂದಿಟ್ಟು ಹೋರಾಟ ಮಾಡಲಿಲ್ಲ:

ಜಿಲ್ಲೆಯ ರಾಜಕೀಯ ನಾಯಕರೂ ಕೂಡ ಧರ್ಮವನ್ನು ಮುಂದಿಟ್ಟುಕೊಂಡು ಎಂದಿಗೂ ಹೋರಾಟ ಮಾಡಿದವರಲ್ಲ. ಧರ್ಮದ ಸೋಂಕಿಲ್ಲದೆ ರೈತಪರ ಸಮಸ್ಯೆಗಳನ್ನೇ ಪ್ರಧಾನವಾಗಿಸಿಕೊಂಡು ಎಲ್ಲರೂ ಚಳವಳಿ, ಹೋರಾಟ ನಡೆಸಿದವರಾಗಿದ್ದರು. ಆದರೆ, ಕಳೆದ ಒಂದೂವರೆ ವರ್ಷದಿಂದ ಧರ್ಮದ ಹೋರಾಟ ಜಿಲ್ಲೆಯೊಳಗೆ ಮುಂಚೂಣಿಗೆ ಬರಲಾರಂಭಿಸಿತು.

ಇದೇ ಸಮಯದಲ್ಲಿ ನಡೆದ ಕಾವೇರಿ ಚಳವಳಿ, ರೈತ ಹೋರಾಟ, ಮೈಷುಗರ್ ಉಳಿವಿನ ಹೋರಾಟಕ್ಕೆ ಸ್ಥಳೀಯ ಜನರಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗಲಿಲ್ಲ. ಅದೇ ಜಿಲ್ಲೆಯೊಳಗೆ ಹಿಂದುತ್ವವನ್ನು ಒಳಗೊಂಡ ಕೆರಗೋಡು ಹನುಮ ಧ್ವಜ ವಿವಾದ, ನಾಗಮಂಗಲ ಗಣೇಶ ಗಲಾಟೆ, ಇದೀಗ ಮದ್ದೂರಿನ ಗಣೇಶೋತ್ಸವ ವೇಳೆ ನಡೆದ ಕಲ್ಲು ತೂರಾಟ ವಿಷಯಗಳಿಗೆ ಸ್ಥಳೀಯರು ಆಕರ್ಷಿತರಾದರು. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಹಿಂದೂ ಧರ್ಮದ ಬಗೆಗಿನ ಕೆಚ್ಚನ್ನು ಪ್ರದರ್ಶಿಸಿದರು.

ಹಿಂದುತ್ವ ಹೋರಾಟಕ್ಕೆ ದಾಖಲೆಯ ಜನಸ್ತೋಮ:

ಪ್ರತಿ ವರ್ಷ ಹನುಮ ಜಯಂತಿ ಸಮಯದಲ್ಲಿ ನಡೆಯುವ ಸಂಕೀರ್ತನಾ ಯಾತ್ರೆಯಲ್ಲೂ ಇತ್ತೀಚಿನ ವರ್ಷಗಳಲ್ಲಿ ಯುವಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಕಂಡುಬರುತ್ತಿದೆ. ಹನುಮ ಸಂಕೀರ್ತನೆ ಯಾತ್ರೆ, ಕೆರಗೋಡು ಹನುಮ ಧ್ವಜ ವಿವಾದ, ನಾಗಮಂಗಲ ಗಣೇಶೋತ್ಸವ ಗಲಾಟೆ ವೇಳೆ ಸೇರಿದ್ದ ಜನರಿಗಿಂತ ೧೦ ಸಾವಿರಕ್ಕೂ ಮಿಗಿಲಾಗಿ ಮದ್ದೂರಿನಲ್ಲಿ ನಡೆದ ಸಾಮೂಹಿಕ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಸ್ಥಳೀಯರು ಅದರಲ್ಲೂ ಯುವಕರು ಭಾಗವಹಿಸಿದ್ದು ವಿಶೇಷವಾಗಿತ್ತು. ಹಿಂದುತ್ವದ ಹೋರಾಟಕ್ಕೆ ಸ್ಥಳೀಯರಿಂದ ಇಷ್ಟೊಂದು ಬೆಂಬಲ ವ್ಯಕ್ತವಾಗಿರುವುದು ಮಂಡ್ಯ ಜಿಲ್ಲೆಯ ಮಟ್ಟಿಗೆ ಇದೊಂದು ದಾಖಲೆಯಾಗಿದೆ.

ಇಂದಿನ ಯುವ ಜನಾಂಗ ಕಾವೇರಿ, ರೈತ ಹಾಗೂ ಕಾರ್ಖಾನೆ ಉಳಿವಿನ ಹೋರಾಟಕ್ಕಿಂತಲೂ ಹೆಚ್ಚಾಗಿ ಹಿಂದುತ್ವದ ಹೋರಾಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇಂತಹ ಹೋರಾಟಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸುತ್ತಿರುವುದು ಜಿಲ್ಲೆಯ ಮಟ್ಟಿಗೆ ಹೊಸ ಬೆಳವಣಿಗೆಯಂತೆ ಕಂಡುಬಂದಿದೆ.

ಧರ್ಮ ಪ್ರಚೋದನೆಗೆ ಒಳಗಾಗಿರಲಿಲ್ಲ:

ಕರಾವಳಿಯಲ್ಲಿ ಹಿಂದೂ-ಮುಸ್ಲಿಂ ಸಂಘರ್ಷಗಳು ಸಾಮಾನ್ಯವಾಗಿ ನಡೆದಿದ್ದರೂ ಮಂಡ್ಯ ಜಿಲ್ಲೆಯ ಜನರು ಧರ್ಮ ಪ್ರಚೋದನೆಗೆ ಎಂದಿಗೂ ಒಳಗಾಗುತ್ತಿರಲಿಲ್ಲ. ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯೊಳಗೆ ರೈತಾಪಿ ವಿಷಯಗಳೇ ಹೆಚ್ಚು ಪ್ರಾಧಾನ್ಯತೆ ಪಡೆದುಕೊಂಡಿದ್ದವು. ಹಿಂದೆಲ್ಲಾ ನಡೆಯುತ್ತಿದ್ದ ಗಣೇಶೋತ್ಸವಗಳೆಲ್ಲವೂ ಶಾಂತಿಯುತವಾಗಿಯೇ ನಡೆಯುತ್ತಿದ್ದವು. ಯಾವೊಂದು ಗಣೇಶ ಹಬ್ಬದ ಸಮಯದಲ್ಲೂ ಅಹಿತಕರ ಘಟನೆಗಳು ನಡೆದ ನಿದರ್ಶನಗಳೇ ಇರಲಿಲ್ಲ. ಮುಸಲ್ಮಾನರೂ ಕೂಡ ಜಿಲ್ಲೆಯೊಳಗೆ ಹಿಂದೂಗಳೊಂದಿಗೆ ಸಂಘರ್ಷಕ್ಕೆ ಇಳಿದವರೇ ಅಲ್ಲ.

ಧರ್ಮ ಹೋರಾಟದ ಪ್ರಭಾವ:

ಆದರೆ, ಶ್ರೀರಂಗಪಟ್ಟಣ ಜಾಮೀಯಾ ಮಸೀದಿ ವಿವಾದ, ಕೆರಗೋಡು ಹನುಮ ಧ್ವಜ ವಿವಾದದಿಂದ ಧರ್ಮ ಹೋರಾಟದ ಪ್ರಭಾವ ಜಿಲ್ಲೆಯ ಮೇಲೆ ಬೀಳಲಾರಂಭಿಸಿತು. ಜಿಲ್ಲೆಯ ಯುವ ಸಮೂಹ ನಿಧಾನವಾಗಿ ಹಿಂದುತ್ವದತ್ತ ವಾಲಿದರು. ಇಂತಹ ಸಮಯದಲ್ಲಿ ಕಾವೇರಿ ನದಿ ನೀರು ಹೋರಾಟ, ರೈತರ ಚಳವಳಿಗಳು, ಕಬ್ಬಿನ ಸಮಸ್ಯೆ, ಕಾರ್ಖಾನೆ ಉಳಿವಿನ ಹೋರಾಟಗಳೆಲ್ಲವೂ ಗೌಣವಾದವು. ಆ ಹೋರಾಟಗಳಿಗೆ ಯುವಕರಿಂದ ಕಿಂಚಿತ್ತೂ ಸ್ಪಂದನೆ ದೊರೆಯಲಿಲ್ಲ. ಹೀಗಾಗಿ ಹಿಂದುತ್ವ ಪರವಾದ ಹೋರಾಟಗಳು, ಜಾಥಾ, ಯಾತ್ರೆಗಳು ಮುಂಚೂಣಿಗೆ ಬರಲಾರಂಭಿಸಿವೆ.

ಜೆಡಿಎಸ್ ನಾಯಕರ ಹೆಗಲಿಗೆ ಕೇಸರಿ ಶಾಲು:

ಧರ್ಮದ ಹೋರಾಟಗಳಿಂದ ದೂರವೇ ಉಳಿದಿದ್ದ ಹಾಗೂ ಹಿಂದುತ್ವದ ಪರಿಭಾವನೆಯನ್ನೇ ಬೆಳೆಸಿಕೊಳ್ಳದ ಸ್ಥಳೀಯ ರಾಜಕೀಯ ನಾಯಕರು ಧಾರ್ಮಿಕ ಹೋರಾಟದಲ್ಲಿ ತೊಡಗುತ್ತಿರುವ ಯುವಜನರನ್ನು ಸೆಳೆಯಲು ಅನಿವಾರ್ಯವಾಗಿ ಕೇಸರಿ ಶಾಲನ್ನು ಧರಿಸಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಸದಾ ಹಸಿರು ಟವೆಲ್‌ನೊಂದಿಗೆ ಕಂಗೊಳಿಸುತ್ತಿದ್ದ ಜೆಡಿಎಸ್ ನಾಯಕರು ಬಿಜೆಪಿಯೊಂದಿಗೆ ಮೈತ್ರಿಯಾದ ಮೇಲಂತೂ ಕೇಸರು ಶಾಲು ಧರಿಸದೆ ವಿಧಿಯಿಲ್ಲ ಎಂಬಂತಾಗಿದೆ. ಬಿಜೆಪಿಯವರಂತೆ ಧರ್ಮದ ವಿಚಾರವಾಗಿ ಧೈರ್ಯದಿಂದ ಮಾತನಾಡುವುದಕ್ಕೂ ಅವರಿಂದ ಸಾಧ್ಯವಾಗದೆ ತಡವರಿಸುತ್ತಿದ್ದಾರೆ. ಬದಲಾಗುತ್ತಿರುವ ಜಿಲ್ಲೆಯ ಯುವ ಮನಸ್ಥಿತಿಗಳನ್ನು ಅರ್ಥೈಸಿಕೊಳ್ಳಲಾಗದೆ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಧರ್ಮ ಅಸ್ತ್ರ ಪ್ರಯೋಗಕ್ಕೆ ಸಿದ್ಧತೆ:

ಇನ್ನು ಬಿಜೆಪಿಯೊಳಗೆ ಬೆಳವಣಿಗೆ ಕಾಣುತ್ತಿರುವ ಯುವ ನಾಯಕರು ಈ ಎಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಾ ಧರ್ಮದ ಅಸ್ತ್ರವನ್ನೇ ಮುಂದಿನ ಚುನಾವಣೆಯಲ್ಲಿ ಪ್ರಯೋಗಿಸುವುದಕ್ಕೆ ಸಜ್ಜಾಗುತ್ತಿರುವಂತೆ ಕಂಡುಬರುತ್ತಿದ್ದಾರೆ. ಯುವಕರು ಹಿಂದುತ್ವದತ್ತ ಹೆಚ್ಚು ಆಕರ್ಷಿತರಾಗುತ್ತಿರುವುದರಿಂದ ಆ ಅಲೆಯನ್ನೇ ಜಿಲ್ಲೆಯೊಳಗೆ ಉಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಧಾರ್ಮಿಕವಾಗಿ ಶಾಂತಿಯಿಂದಿದ್ದ ಮಂಡ್ಯ ಜಿಲ್ಲೆಯೊಳಗೆ ಹೊರಗಿನ ಅನ್ಯಕೋಮಿನ ಶಕ್ತಿಗಳು ಮಾಡುತ್ತಿರುವ ಕಿಡಿಗೇಡಿ ಕೃತ್ಯಗಳು ಹಿಂದುತ್ವದ ಬೇರುಗಳು ಮಂಡ್ಯದೊಳಗೆ ಬೇರೂರುವುದಕ್ಕೆ ಮೂಲ ಕಾರಣವಾಗಿದೆ.