ಸಾರಾಂಶ
ಬೇಲೂರು ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಾಡಾನೆ ಹಾವಳಿಯಿಂದ ರೈತರ ಬೆಳೆಗಳು ನಾಶವಾಗುತ್ತಿದ್ದು, ಸಾರ್ವಜನಿಕರು ಭಯದಿಂದ ಜೀವನ ನಡೆಸುತ್ತಿದ್ದಾರೆ. ಬಿಕ್ಕೋಡು ಹೋಬಳಿ ವ್ಯಾಪ್ತಿಯ ಬಿಕ್ಕೋಡು, ಮಾಳೇಗೆರೆ, ಕೊತ್ತನಹಳ್ಳಿ, ಹಾಡಗೆರೆ, ಚಿಕ್ಕೋಲೆ, ಪುರ, ಹೊನ್ನೇಮನೆ, ಗಿಣ್ಣನಮನೆ ಹಾಗೂ ಕೋಗಿಲೆಮನೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಡಾನೆ ಗುಂಪುಗಳ ದಾಳಿ ನಡೆಯುತ್ತಿದ್ದು, ರೈತರು ಬೆಳೆದ ಬಾಳೆ, ತೆಂಗು, ಅಡಿಕೆ, ಜೋಳ, ಶುಂಠಿ ಮತ್ತು ಕಾಫಿ ಬೆಳೆಗಳಿಗೆ ಭಾರೀ ಹಾನಿ ಉಂಟಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿ ರೈತರ ಬೆಳೆ ನಾಶವಾಗುತ್ತಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಅರಣ್ಯ, ಜೈವಿಕ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ ಅವರಿಗೆ ಶಾಸಕ ಎಚ್ ಕೆ ಸುರೇಶ್ ಮನವಿ ಸಲ್ಲಿಸಿದರು.ತಾಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಾಡಾನೆ ಹಾವಳಿಯಿಂದ ರೈತರ ಬೆಳೆಗಳು ನಾಶವಾಗುತ್ತಿದ್ದು, ಸಾರ್ವಜನಿಕರು ಭಯದಿಂದ ಜೀವನ ನಡೆಸುತ್ತಿದ್ದಾರೆ. ಬಿಕ್ಕೋಡು ಹೋಬಳಿ ವ್ಯಾಪ್ತಿಯ ಬಿಕ್ಕೋಡು, ಮಾಳೇಗೆರೆ, ಕೊತ್ತನಹಳ್ಳಿ, ಹಾಡಗೆರೆ, ಚಿಕ್ಕೋಲೆ, ಪುರ, ಹೊನ್ನೇಮನೆ, ಗಿಣ್ಣನಮನೆ ಹಾಗೂ ಕೋಗಿಲೆಮನೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕಾಡಾನೆ ಗುಂಪುಗಳ ದಾಳಿ ನಡೆಯುತ್ತಿದ್ದು, ರೈತರು ಬೆಳೆದ ಬಾಳೆ, ತೆಂಗು, ಅಡಿಕೆ, ಜೋಳ, ಶುಂಠಿ ಮತ್ತು ಕಾಫಿ ಬೆಳೆಗಳಿಗೆ ಭಾರೀ ಹಾನಿ ಉಂಟಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.ಕಾಡಾನೆಗಳ ದಾಳಿಯಿಂದ ಹಲವಾರು ಮಂದಿ ಜೀವ ಕಳೆದುಕೊಂಡಿರುವುದಲ್ಲದೆ, ಕೆಲವರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿರುವುದನ್ನೂ ಶಾಸಕರು ಉಲ್ಲೇಖಿಸಿದ್ದಾರೆ. ಪ್ರವಾಸದ ವೇಳೆ ಸಚಿವರು ಆನೆಧಾಮವನ್ನು ನಿರ್ಮಿಸುವ ಮೂಲಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಶಾಸಕರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಶಾಸಕರು ತಮ್ಮ ಮನವಿಯಲ್ಲಿ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದು ಶುಂಠಿ ಬೆಳೆ: ಪ್ರತಿ ಎಕರೆಗೆ 2 ಲಕ್ಷ ರು, ತೆಂಗು ಬೆಳೆ: ಪ್ರತಿ ಎಕರೆಗೆ 1 ಲಕ್ಷ ರು, ಅಡಿಕೆ ಬೆಳೆ: ಪ್ರತಿ ಎಕರೆಗೆ 2 ಲಕ್ಷ ರು, ಕಾಫಿ ಬೆಳೆ: ಪ್ರತಿ ಎಕರೆಗೆ 2 ಲಕ್ಷ ರು. ಮೆಕ್ಕೆಜೋಳ ಬೆಳೆ: ಪ್ರತಿ ಎಕರೆಗೆ 1.20 ಲಕ್ಷ ರು , ಬಾಳೆ ಬೆಳೆ: ಪ್ರತಿ ಎಕರೆಗೆ 2 ಲಕ್ಷ ರು. ಗಳ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.ಕಾಡಾನೆಗಳನ್ನು ಶಾಶ್ವತವಾಗಿ ಸ್ಥಳಾಂತರಿಸಿ, ಪರಿಣಿತ ತಜ್ಞರ ತಂಡವನ್ನು ನಿಯೋಜಿಸಿ ಸಾರ್ವಜನಿಕರಿಗೆ ಸುರಕ್ಷಿತ ಪರಿಸರ ಕಲ್ಪಿಸಲು ಹಾಗೂ ರೈತರ ಬದುಕು ಉಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.